ಮೈಸೂರು ಮೂಡಾ ಪ್ರಕರಣ : ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ರಾಜೀನಾಮೆ ನೀಡಲಿ - ವಿಶ್ವನಾಥ್

| Published : Sep 29 2024, 01:32 AM IST / Updated: Sep 29 2024, 04:25 AM IST

ಸಾರಾಂಶ

ಮೈಸೂರು ಮೂಡಾ ಪ್ರಕರಣದಲ್ಲಿ ಕಾನೂನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿಲ್ಲ ಎಂದು ಸ್ಪಷ್ಟವಾಗಿದ್ದು, ನೈತಿಕ ಹೊಣೆ ಹೊತ್ತು ಅವರು ರಾಜೀನಾಮೆ ನೀಡಬೇಕೆಂದು ಮಾಜಿ ಸಚಿವ ಎಚ್.ವಿಶ್ವನಾಥ್ ಆಗ್ರಹಿಸಿದ್ದಾರೆ. 

 ಮಂಡ್ಯ : ಮೈಸೂರು ಮೂಡಾ ಪ್ರಕರಣದಲ್ಲಿ ಕಾನೂನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಹಾಗಾಗಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿ ಗೌರವ ಉಳಿಸಿಕೊಳ್ಳಲಿ ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಸಲಹೆ ನೀಡಿದರು.

ಈ ಪ್ರಕರಣದಲ್ಲಿ ಕಾನೂನಿನ ಪ್ರಶ್ನೆಗಿಂತ ನೈತಿಕತೆಯ ಪ್ರಶ್ನೆಯೇ ಮುಖ್ಯವಾಗಿದೆ. ಕಾನೂನು ತಮ್ಮ ಪರವಾಗಿಲ್ಲ ಎನ್ನುವುದು ಸಿದ್ದರಾಮಯ್ಯ ಅವರಿಗೂ ಗೊತ್ತಿದೆ. ಸುಮ್ಮನೆ ಕಾಲದೂಡುವ ಪ್ರಯತ್ನ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ತಪ್ಪು ಮಾಡಿದ್ದಾರೆ ಎನ್ನುವುದು ಜನರ ಅರಿವಿಗೂ ಬಂದಿದೆ. ಆದರೂ ಅಧಿಕಾರದಲ್ಲಿ ಮುಂದುವರೆಯುವ ಮೊಂಡುತನ ಸರಿಯಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದರು.

ಹೈಕೋರ್ಟ್ ನ್ಯಾಯಾಧೀಶ ನಾಗಪ್ರಸನ್ನ ಅವರು ಎಲ್ಲಾ ಆಯಾಮಗಳನ್ನು ಪ್ರಕರಣವನ್ನು ಪರಿಶೀಲನೆ ನಡೆಸಿ 195 ಪುಟಗಳ ಸುದೀರ್ಘ ತೀರ್ಪನ್ನು ನೀಡಿದ್ದಾರೆ. ಕಾನೂನು ಸಚಿವರು ಅದನ್ನು ಓದಿ ಮುಖ್ಯಮಂತ್ರಿಗಳು ಹಾಗೂ ಸಚಿವ ಸಂಪುಟದವರಿಗೆ ವಿವರಣೆ ನೀಡಬೇಕು. ಆದರೆ, ಅಂತಹ ಪ್ರಯತ್ನಗಳು ಸರ್ಕಾರದ ಮಟ್ಟದಲ್ಲಿ ನಡೆಯದಿರುವುದು ದುರಂತ ಎಂದರು.

ಕಾಂಗ್ರೆಸ್‌ಗೆ ಅಧಿಕಾರ ನಡೆಸಲು ಜನರು ಕೊಟ್ಟ ಜವಾಬ್ದಾರಿ. ಅದು ಬೇಜವಾಬ್ದಾರಿ ಆಗಬಾರದು. ಒಂದು ವೇಳೆ ಬೇಜವಾಬ್ದಾರಿತನ ಪ್ರದರ್ಶಿಸಿದರೆ ಅದಕ್ಕೆ ಅಧಿಕಾರಸ್ತರೇ ಜವಾಬ್ದಾರರಾಗಿರುತ್ತಾನೆ. ಮೈಸೂರು ಮೂಡ ಹಗರಣದಲ್ಲಿ ತೋರಿಸಿರುವ ಬೇಜವಾಬ್ದಾರಿತನಕ್ಕೆ ಸಿದ್ದರಾಮಯ್ಯ ಅವರೇ ಹೊಣೆಗಾರರಾಗಿರುವುದರಿಂದ ಅವರು ಜವಾಬ್ದಾರಿಯಿಂದಲೇ ಅಧಿಕಾರ ತ್ಯಜಿಸುವುದು ಉತ್ತಮ ಎಂದು ನುಡಿದರು.

ಈ ಹಿಂದೆ ಯಡಿಯೂರಪ್ಪ ಅವರಿಗೆ ಇದೇ ಪರಿಸ್ಥಿತಿ ಎದುರಾಗಿದ್ದಾಗ ಮೊದಲು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ನಂತರ ತನಿಖೆ ಎದುರಿಸುವಂತೆ ಸಿದ್ದರಾಮಯ್ಯನವರೇ ಸಲಹೆ ನೀಡಿದರು. ಆ ಸಲಹೆ ನಿಮಗೆ ಏಕೆ ಅನ್ವಯವಾಗುವುದಿಲ್ಲ ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಅವರ ರಕ್ಷಣೆಗೆ ಜಾತಿಯವರನ್ನು ಓಲೈಸಿಕೊಳ್ಳಲಾಗುವುದಿಲ್ಲ. ಏಕೆಂದರೆ ಕಾನೂನು, ರಾಜ್ಯಡಳಿತ, ಅಭಿವೃದ್ಧಿಗೆ ಯಾವುದೇ ಜಾತಿ ಇರುವುದಿಲ್ಲ. ಕಾನೂನಿನ ಮುಂದೆ ಯಾರೂ ದೊಡ್ಡವರು ಅಲ್ಲ. ಕಾನೂನನ್ನು ಗೌರವಿಸಿ ನಡೆದು ನೈತಿಕತೆಯನ್ನು ಎತ್ತಿ ಹಿಡಿಯುವ ಹೊಣೆ ಸಿದ್ದರಾಮಯ್ಯ ಅವರ ಮೇಲಿದೆ ಎಂದು ವಿವರಣೆ ನೀಡಿದರು.

ಸಿದ್ದರಾಮಯ್ಯ ರಾಜೀನಾಮೆ ವಿಚಾರವಾಗಿ ಕಾಂಗ್ರೆಸ್ ಹೈಕಮಾಂಡ್ ಕಾದು ನೋಡುವ ತಂತ್ರ ಅನುಸರಿಸುತ್ತಿದೆ. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಿದ್ದರಾಮಯ್ಯ ಅವರು ಸುಪ್ರೀಂ ಕೋರ್ಟ್ ಗೆ ಹೋಗುವುದಕ್ಕೂ ಅವಕಾಶವಿದೆ. ಕಾನೂನಿನಲ್ಲಿ ಸಾಕಷ್ಟು ಅವಕಾಶಗಳಿದ್ದರೂ ಅಧಿಕಾರದಲ್ಲಿರುವುದನ್ನೇ ಗುರಿಯಾಗಿಸಿಕೊಂಡು ಮುಂದುವರೆಯುವುದು ಒಳ್ಳೆಯ ಬೆಳವಣಿಗೆಯಲ್ಲ. ಇಂತಹ ಬೆಳವಣಿಗೆಗಳು ಕಾಂಗ್ರೆಸ್ಸನ್ನು ಅಧೋಗತಿಗೆ ದೂಡುತ್ತಿವೆ ಎಂದರು.