ಮುಡಾ ಹಗರಣ: ಮರೀಗೌಡ ತಲೆದಂಡವಾಗಿದೆ, ಆಯುಕ್ತರ ತಲೆದಂಡ ಯಾವಾಗ: ಟಿ.ಎಸ್. ಶ್ರೀವತ್ಸ

| Published : Oct 18 2024, 12:14 AM IST / Updated: Oct 18 2024, 04:29 AM IST

ts shrivatsa

ಸಾರಾಂಶ

ಮುಡಾ 50:50 ನಿಯಮದಲ್ಲಿ ಪಡೆದ ಸೈಟ್‌ ಗಳು ಪರಬಾರೆ ಆಗ್ತಿವೆ. 2020 ರಿಂದ 2024ರ ವರೆಗಿನ ಎಲ್ಲಾ 50:50 ಸೈಟ್ ರದ್ದತಿಗೆ ಮನವಿ ಮಾಡಿದ್ದೇನೆ.  ಟೆಕ್ನಿಕಲ್ ಕಮಿಟಿ ವರದಿ ಜಾರಿ ಮಾಡಿ, ಇಬ್ಬರು ಹಿಂದಿನ ಕಮಿಷನರ್ ವಜಾಗೆ ಆಗ್ರಹಿಸಿದ್ದೇನೆ. ಅವರು ಕೂಡ ತನಿಖೆ ನಡೆಯುತ್ತಿದೆ, ಮಾರಾಟಕ್ಕೆ ಅವಕಾಶ ಕೊಡಲ್ಲ.

 ಮೈಸೂರು : ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮರೀಗೌಡ ತಲೆದಂಡವಾಗಿದೆ. ಇನ್ನೂ ಇಬ್ಬರು ಆಯುಕ್ತರ ತಲೆದಂಡ ಯಾವಾಗ ಎಂದು ಬಿಜೆಪಿ ಶಾಸಕ ಟಿ.ಎಸ್.ಶ್ರೀವತ್ಸ ಪ್ರಶ್ನಿಸಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಹಗರಣ ಸಂಬಂಧ ಮುಡಾದ ಆಯುಕ್ತರಾಗಿದ್ದ ನಟೇಶ್ , ದಿನೇಶ್ ರಕ್ಷಣೆ ಆಗಿದೆ. ಕೂಡಲೇ ಸರ್ಕಾರ ಇಬ್ಬರನ್ನು ವಜಾ ‌ಮಾಡಲೇಬೇಕು. ಮುಡಾ‌ ಹಗರಣ ಸಮಗ್ರ ತನಿಖೆಗಾಗಿ ಸಿಎಂಗೆ ಮನವಿ ಸಲ್ಲಿಸಿದ್ದೇವೆ ಎಂದರು.

ಮರೀಗೌಡ ತಲೆದಂಡ ಆಗಿರುವುದು ಸತ್ಯಕ್ಕೆ ಸಿಕ್ಕ ಜಯ. ಮೊದಲ ಹಂತದಲ್ಲಿ ನಮಗೆ ಗೆಲುವು ಸಿಕ್ಕಿದೆ. ಪ್ರಕರಣದಲ್ಲಿ ಸಿಎಂ ಕೂಡ ಭಾಗಿಯಾಗಿದ್ದರೂ ಮನವಿ ಸಲ್ಲಿಸಿರುವೆ. ಅವರಿಂದ ನ್ಯಾಯ ಸಿಗದಿದ್ದರೆ ರಾಜ್ಯಪಾಲರಿಗೆ ಮನವಿ ಸಲ್ಲಿಸುವುದಾಗಿ ಅವರು ಹೇಳಿದರು.

ಮುಡಾ 50:50 ನಿಯಮದಲ್ಲಿ ಪಡೆದ ಸೈಟ್‌ ಗಳು ಪರಬಾರೆ ಆಗ್ತಿವೆ. 2020 ರಿಂದ 2024ರ ವರೆಗಿನ ಎಲ್ಲಾ 50:50 ಸೈಟ್ ರದ್ದತಿಗೆ ಮನವಿ ಮಾಡಿದ್ದೇನೆ. ಇದು ಆಗಬಾರದು ಎಂದು ಸಿದ್ದರಾಮಯ್ಯಗೆ ಮನವಿ ಮಾಡಿದ್ದೇನೆ‌. ಟೆಕ್ನಿಕಲ್ ಕಮಿಟಿ ವರದಿ ಜಾರಿ ಮಾಡಿ, ಇಬ್ಬರು ಹಿಂದಿನ ಕಮಿಷನರ್ ವಜಾಗೆ ಆಗ್ರಹಿಸಿದ್ದೇನೆ. ಅವರು ಕೂಡ ತನಿಖೆ ನಡೆಯುತ್ತಿದೆ, ಮಾರಾಟಕ್ಕೆ ಅವಕಾಶ ಕೊಡಲ್ಲ ಎಂದು ಹೇಳಿದ್ದಾರೆ ಎಂದರು.

ನಮ್ಮ ಪ್ರಕಾರ 50:50 ನಿಯಮದಲ್ಲಿ 14000 ಹೆಚ್ಚು ನಿವೇಶನ ನೀಡಲಾಗಿದೆ. ಅದೆಲ್ಲವನ್ನು ವಾಪಸ್ ಪಡೆಯಬೇಕು. ತನಿಖೆ ಮುಗಿಸಿ ಅರ್ಹರಿಗೆ ಕೊಡಿ. 50:50 ಅಷ್ಟೇ ಅಲ್ಲ, ಬದಲಿ ನಿವೇಶದಲ್ಲೂ ಮುಡಾದಲ್ಲಿ ಅಕ್ರಮ ನಡೆದಿದೆ. ಸುಮ್ಮನೆ ಎಲ್ಲರ ಹೆಸರು ಓಡಾಡುತ್ತಿದೆ. ಬೇರೆ ಬೇರೆ ರಾಜಕಾರಣಿಗಳ ಹೆಸರೂ ಬರುತ್ತಿದೆ. ಮೊದಲು ತನಿಖೆ ಮಾಡಿ, ತಪಿತಸ್ಥರಿಗೆ ಶಿಕ್ಷೆ ಆಗಲಿ. ಎಲ್ಲಾ 1400 ಸೈಟ್‌ ಗಳ ಬಗ್ಗೆಯೂ ನಮ್ಮ ಹೋರಾಟ ಇದೆ‌. ಮೊದಲು 50:50 ರದ್ದು ಮಾಡಿ, ನಂತರ ಅವರ ಪ್ರತಿಕ್ರಿಯೆ ಗೊತ್ತಾಗುತ್ತೆ ಎಂದು ಅವರು ತಿಳಿಸಿದರು.