ಸಾರಾಂಶ
ಚಿಕ್ಕಬಳ್ಳಾಪುರ : ಬೆಂಗಳೂರಿನ ಆರ್.ಆರ್.ನಗರ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನ ದುರುದ್ದೇಶ ಇಟ್ಟುಕೊಂಡು ಏಡ್ಸ್ ರೋಗಕ್ಕೆ ತುತ್ತಾಗಿರುವ ಸಂತ್ರಸ್ತೆ ಮೂಲಕ ಅಧಿಕಾರಿ ಮತ್ತು ರಾಜಕಾರಣಿಗಳನ್ನು ಹನಿಟ್ರ್ಯಾಪ್ ಮಾಡಿಸುತ್ತಿದ್ದರು ಎಂಬ ವಿಚಾರ ಅಸಹ್ಯಹುಟ್ಟಿಸುವಂತಿದೆ. ಈತನ ಸಂಪರ್ಕದಲ್ಲಿದ್ದ ಅಧಿಕಾರಿಗಳು, ರಾಜಕಾರಣಿಗಳು ಏಡ್ಸ್ ಪರೀಕ್ಷೆ ಮಾಡಿಸಿಕೊಳ್ಳುವುದು ಒಳಿತು ಎಂದು ಶಾಸಕ ರಂಗನಾಥ್ ಸರಿಯಾಗಿ ಹೇಳಿದ್ದಾರೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಹೇಳಿದರು.ಚಿಕ್ಕಬಳ್ಳಾಪುರ ನಗರದ ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ಜಿಲ್ಲಾಡಳಿತದಿಂದ ಏರ್ಪಡಿಸಿದ್ದ ಜೋಡಿಗ್ರಾಮಗಳ ಇಡುವಳಿದಾರ ರೈತರಿಗೆ ಪಹಣಿ ವಿತರಣೆ ಕಾಯಕ್ರಮದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಅಧಿಕಾರ ದುರ್ಭಳಕೆ
ಶಾಸಕ ಮುನಿರತ್ನ ಕಸವಿಲೇವಾರಿ ಗುತ್ತಿಗೆದಾರ ಒಕ್ಕಲಿಗ ಸಮುದಾಯದ ಚೆಲುವರಾಜು ಅವರಿಂದ 30 ಲಕ್ಷ ರು.ಗಳ ಲಂಚಕ್ಕೆ ಬೇಡಿಕೆಯಿಟ್ಟಿದ್ದಲ್ಲದೆ ಒಕ್ಕಲಿಗ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ. ಇಷ್ಟೇ ಅಲ್ಲದೆ ಪರಿಶಿಷ್ಟ ಜಾತಿಯ ಬಗ್ಗೆಯೂ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಇಂತಹ ವ್ಯಕ್ತಿಯ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಹಾಗೂ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರಿಗೆ ಮನವಿ ಮಾಡಿದ್ದೇವೆ. ಅವರು ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವೆಲ್ಲಾ ಬದ್ಧರಾಗಿದ್ದೇವೆ ಎಂದರು.
ಎಸ್‌ಐಟಿ ತನಿಖೆ ಆಗಲಿ
ಶಾಸಕ ಮುನಿರತ್ನ ವಿರುದ್ಧ ಈವರೆಗೂ ಬಿಜೆಪಿ ಯಾವಕ್ರಮವನ್ನೂ ತೆಗೆದುಕೊಂಡಿಲ್ಲ. ತಪ್ಪು ಯಾರೇ ಮಾಡಿದ್ದರೂ ಶಿಕ್ಷೆ ಆಗಲೇಬೇಕು. ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ಭ್ರಷ್ಟಾಚಾರ, ಒಕ್ಕಲಿಗ, ದಲಿತರ ಅವಹೇಳನ ಮಾತ್ರವಲ್ಲ, ಹನಿಟ್ರಾಪ್, ಮಹಿಳೆಯರ ಮೇಲೆ ಅತ್ಯಾಚಾರದಂತಹ ಗಂಭೀರ ವಿಚಾರ ಇರುವ ಕಾರಣ ಇದನ್ನು ಎಸ್‌ಐಟಿ ತನಿಖೆಗೆ ಒಳಪಡಿಸಲೇಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿರುವುದಾಗಿ ತಿಳಿಸಿದರು. ಡೀ ನೋಟಿಫಿಕೇಷನ್ ಪ್ರಕರಣ
ಗಂಗೇನಹಳ್ಳಿ 1.11ಗುಂಟೆ ಭೂಮಿ ವಿಚಾರದಲ್ಲಿ ಅಧಿಕಾರಿಗಳು ಡೀ ನೋಟಿಫಿಕೇಷನ್ ಮಾಡಲು ಬರುವುದಿಲ್ಲ ಎಂದು ಹೇಳಿದ್ದರೂ ಕೂಡ ನಿಯಮಗಳನ್ನು ಮೀರಿ ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಶಾಮೀಲಾಗಿ ಕುಮಾರಸ್ವಾಮಿ ಅವರ ಕುಟುಂಬಕ್ಕೆ ನೆರವಾಗುವ ದೃಷ್ಟಿಯಿಂದ ಡೀನೋಟಿಫಿಕೇಷನ್ ಮಾಡಿದ್ದು ತಪ್ಪು. ಮೊದಲು ಕುಮಾರಸ್ವಾಮಿ ಅತ್ತೆ ಹೆಸರಿಗೆ ನಂತರ ಬಾಮೈದನ ಹೆಸರಿಗೆ ಮಾಡಿಕೊಂಡಿರುವುದು ಸುಳ್ಳಾ, ಸತ್ತವರ ಹೆಸರಿನಲ್ಲಿ ಡೀನೋಟಿಫಿಕೇಷನ್ ಮಾಡಿರುವುದು ಸುಳ್ಳಾ ಎಂದು ಪ್ರಶ್ನಿಸಿದರು.
ಈ ವೇಳೆ ಸಚಿವ ಡಾ.ಎಂ.ಸಿ.ಸುಧಾಕರ್, ಶಾಸಕರಾದ ಪ್ರದೀಪ್ ಈಶ್ವರ್, ಎಸ್.ಎನ್. ಸುಬ್ಬಾರೆಡ್ಡಿ, ಎಂಎಲ್ ಸಿ ಅನಿಲ್ ಕುಮಾರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಎನ್. ಕೇಶವರೆಡ್ಡಿ, ಮತ್ತಿತರರು ಇದ್ದರು.