ಸಾರಾಂಶ
ಬೆಂಗಳೂರು : ಗುತ್ತಿಗೆದಾರನಿಗೆ ಬೆದರಿಕೆ ಹಾಕಿದ ಹಾಗೂ ಜಾತಿ ನಿಂದನೆ ಮಾಡಿದ ಪ್ರಕರಣದಲ್ಲಿ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅವರಿಗೆ ಗುರುವಾರ ಜಾಮೀನು ಸಿಕ್ಕಿದೆ. ಆದರೂ ಅವರ ಸಂಕಷ್ಟ ಮುಂದುವರೆಯಲಿದೆ.
ಜಾಮೀನು ಮೇರೆಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಶಾಸಕರು ಹೊರಬಂದ ಕೂಡಲೇ ಅತ್ಯಾಚಾರ ಪ್ರಕರಣದಲ್ಲಿ ಅವರನ್ನು ಬಂಧಿಸಲು ಕಾರಾಗೃಹದ ಪ್ರವೇಶ ದ್ವಾರದಲ್ಲೇ ರಾಮನಗರ ಜಿಲ್ಲೆ ಕಗ್ಗಲೀಪುರ ಠಾಣೆ ಪೊಲೀಸರು ಕಾದು ಕುಳಿತಿದ್ದಾರೆ.
ಜಾಮೀನು:
ಜಾತಿ ನಿಂದನೆ ಪ್ರಕರಣದಲ್ಲಿ ಮುನಿರತ್ನ ಅವರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಗುರುವಾರ ಪ್ರಕಟಿಸಿದ್ದು, ಶಾಸಕರಿಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.
ಪ್ರಕರಣದಲ್ಲಿ ಸಾಕ್ಷ್ಯ ನಾಶಕ್ಕೆ ಯತ್ನಿಸಬಾರದು ಹಾಗೂ ಪೂರ್ವಾನುಮತಿ ಇಲ್ಲದೆ ನ್ಯಾಯಾಲಯದ ವ್ಯಾಪ್ತಿಯಿಂದ ಹೊರ ಹೋಗುವಂತಿಲ್ಲವೆಂದು ಶಾಸಕರಿಗೆ ಷರತ್ತು ವಿಧಿಸಿ 2 ಲಕ್ಷ ರು. ವೈಯಕ್ತಿಕ ಭದ್ರತಾ ಠೇವಣಿ ಪಡೆದು ನ್ಯಾಯಾಲಯವು ಜಾಮೀನು ನೀಡಿದೆ. ಆದರೆ ಜಾಮೀನು ಆದೇಶದ ಪ್ರತಿ ಕಾರಾಗೃಹ ಅಧಿಕಾರಿಗಳಿಗೆ ಲಭ್ಯವಾಗದ ಕಾರಣ ಗುರುವಾರ ರಾತ್ರಿವರೆಗೆ ಶಾಸಕರು ಜೈಲಿನಿಂದ ಬಂಧಮುಕ್ತರಾಗಿಲ್ಲ.
ಮತ್ತೊಂದು ಕೇಸಲ್ಲಿ ಬಂಧನಕ್ಕೆ ಸಜ್ಜು:
ಈ ಜಾಮೀನು ತೀರ್ಪು ಹಿನ್ನಲೆಯಲ್ಲೇ ಜೈಲಿನಿಂದ ಯಾವುದೇ ಕ್ಷಣದಲ್ಲಾದರೂ ಶಾಸಕರು ಹೊರಬರುವ ಸಾಧ್ಯತೆ ಮನಗಂಡು ಬುಧವಾರ ರಾತ್ರಿ ಮಹಿಳೆಯೊಬ್ಬರು ದಾಖಲಿಸಿರುವ ಅತ್ಯಾಚಾರ ಪ್ರಕರಣದಲ್ಲಿ ಅವರನ್ನು ಬಂಧಿಸಲು ಗುರುವಾರ ಮಧ್ಯಾಹ್ನವೇ ಜೈಲಿನ ಬಳಿಗೆ ಕಗ್ಗಲೀಪುರ ಠಾಣೆ ಪೊಲೀಸರು ಧಾವಿಸಿದ್ದಾರೆ.
ಕೇಸಿನ ಮೇಲೆ ಕೇಸು:
ಬಿಬಿಎಂಪಿ ತ್ಯಾಜ್ಯ ವಿಲೇವಾರಿ ಗುತ್ತಿಗೆಯಲ್ಲಿ 30 ಲಕ್ಷ ರು. ಕಮಿಷನ್ ನೀಡುವಂತೆ ಗುತ್ತಿಗೆದಾರ ಚಲುವರಾಜ್ ರವರಿಗೆ ಜೀವ ಬೆದರಿಕೆ ಹಾಕಿ ನಿಂದಿಸಿದ ಹಾಗೂ ಜಾತಿ ನಿಂದನೆ ಮಾಡಿದ ಆರೋಪದ ಮೇರೆಗೆ ವೈಯಾಲಿಕಾವಲ್ ಠಾಣೆಯಲ್ಲಿ ಮುನಿರತ್ನ ವಿರುದ್ಧ ಪ್ರತ್ಯೇಕ ಎಫ್‌ಐಆರ್ ದಾಖಲಾಗಿದ್ದವು. ಈ ಕೃತ್ಯ ಬೆಳಕಿಗೆ ಬಂದ ನಂತರ ನಗರ ತೊರೆದು ಆಂಧ್ರಪ್ರದೇಶದತ್ತ ಹೊರಟಿದ್ದ ಮುನಿರತ್ನ ಅವರನ್ನು ಕೋಲಾರ ಜಿಲ್ಲೆ ಮುಳಬಾಗಿಲು ಸಮೀಪ ಶನಿವಾರ ಪೊಲೀಸರು ಬಂಧಿಸಿದ್ದರು. ಈ ಪ್ರಕರಣದ ಪೊಲೀಸರ ವಿಚಾರಣೆ ಮುಗಿದು ಮಾಜಿ ಸಚಿವರು ಜೈಲು ಸೇರಿದ ಬೆನ್ನಲ್ಲೇ ಶಾಸಕರ ವಿರುದ್ಧ ಅತ್ಯಾಚಾರ ಹಾಗೂ ಹನಿಟ್ರ್ಯಾಪ್ ಆರೋಪಗಳು ಕೇಳಿ ಬಂದಿವೆ.
ಈ ಬಗ್ಗೆ ಕಗ್ಗಲೀಪುರ ಠಾಣೆಗೆ ಶಾಸಕರ ಪರಿಚಿತೆ ಹಾಗೂ ಬಿಜೆಪಿ ನಾಯಕಿಯೊಬ್ಬರು ಬುಧವಾರ ಅತ್ಯಾಚಾರ ದೂರು ನೀಡಿದ್ದರು. ಈ ದೂರು ಆಧರಿಸಿ ಮುನಿರತ್ನ ಹಾಗೂ ಅವರ ಸಹಚರರ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಜಾತಿ ನಿಂದನೆ ಪ್ರಕರಣದಲ್ಲಿ ಜಾಮೀನು ಪಡೆದು ಜೈಲಿನಿಂದ ಹೊರಬರುವ ಶಾಸಕರ ಬಂಧನಕ್ಕೆ ಮುಂದಾಗಿದ್ದಾರೆ.
ಮುನಿರತ್ನ ಗೋಡೌನ್ ಮಹಜರ್
ಬೆಂಗಳೂರು: ಇನ್ನು ಅತ್ಯಾಚಾರ ಪ್ರಕರಣ ಸಂಬಂಧ ಕೃತ್ಯ ನಡೆದಿದೆ ಎನ್ನಲಾಗಿರುವ ಬಿಜೆಪಿ ಶಾಸಕ ಮುನಿರತ್ನ ಅವರಿಗೆ ಸೇರಿದ ಕಚೇರಿ ಹಾಗೂ ಗೋಡೌನ್‌ಗಳಲ್ಲಿ ಸಂತ್ರಸ್ತೆಯನ್ನು ಕರೆತಂದು ಗುರುವಾರ ರಾಮನಗರ ಪೊಲೀಸರು ಮಹಜರ್ ನಡೆಸಿದ್ದಾರೆ.
ಯಶವಂತಪುರ ಸಮೀಪದ ಶಾಸಕರಿಗೆ ಸೇರಿದ ಗೋಡೌನ್ ಹಾಗೂ ನಂದಿನಿ ಲೇಔಟ್ ಹತ್ತಿರದ ಕಚೇರಿ ಸೇರಿದಂತೆ ಇತರೆ ಕೂಡ ಮಹಜರ್ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.