ಸಾರಾಂಶ
ಮೈಸೂರು : ಶಾಸಕ ಮುನಿರತ್ನ ಆಡಿಯೋ ಪ್ರಕರಣದ ಹಿಂದೆ ಟೂಲ್ ಕಿಟ್ ಕೆಲಸ ಮಾಡಿದ್ದು, ಹನುಮಂತಪ್ಪ ಆಡಿಯೋದಿಂದ ಇದು ಸಾಬೀತಾಗಿದೆ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಆರೋಪಿಸಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ತಮ್ಮ ಪಕ್ಷದವರಿಗೆ ಒಂದು ನ್ಯಾಯ ಬಿಜೆಪಿಗೆ ಒಂದು ನ್ಯಾಯ ಅನುಸರಿಸುತ್ತಿದೆ. ಕಾಂಗ್ರೆಸ್ ಶಾಸಕ ಚೆನ್ನರೆಡ್ಡಿ ಮೇಲೂ ಅಟ್ರಾಸಿಟಿ ಪ್ರಕರಣ ದಾಖಲಾಗಿದ್ದು, ಆತನನ್ನು ಬಂಧಿಸುವ ಬದಲು ಸಿಎಂ ಸಿದ್ದರಾಮಯ್ಯ ಅವರು ತಮ್ಮ ಮನೆಯಲ್ಲಿ ಬಿರಿಯಾನಿ ಊಟ ಹಾಕಿಸಿದ್ದಾರೆ.
ಕೃಷಿ ಸಚಿವ ಚಲುವರಾಯಸ್ವಾಮಿ, ನಾಗೇಂದ್ರ ಸೇರಿ ಹಲವು ಕಾಂಗ್ರೆಸ್ ನಾಯಕರ ವಿರುದ್ಧ ದೂರು ದಾಖಲಾಗಿದೆ. ಯಾರನ್ನು ಬಂಧಿಸಿಲ್ಲ. ಮುನಿರತ್ನ ಮೇಲೆ ಎಫ್ಐಆರ್ ದಾಖಲಾದ ದಿನವೇ ಬಂಧಿಸಿದ್ದು, ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಎಫ್ಎಸ್ಎಲ್ ವರದಿ ಬರುವ ಮುನ್ನವೇ ಮುನಿರತ್ನ ಅವರನ್ನು ಬಂಧಿಸಿದ್ದು ಏಕೆ ಎಂದು ಪ್ರಶ್ನಿಸಿದ್ದಾರೆ.
ಸಿಎಂ ದ್ವೇಷ ರಾಜಕಾರಣ: ನಾವು ದ್ವೇಷ ರಾಜಕಾರಣ ಮಾಡುವುದಿಲ್ಲ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿ.ಟಿ.ರವಿ, ಸಿದ್ದರಾಮಯ್ಯ ನುಡಿದಂತೆ ಯಾವತ್ತೂ ನಡೆದುಕೊಂಡಿಲ್ಲ. ಅವರು ಹೇಳಿದಕ್ಕೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಾರೆ. ಸಿದ್ದರಾಮಯ್ಯ ಅವರ ನಡೆಗೂ ನುಡಿಗೂ ಸಾಕಷ್ಟು ವ್ಯತ್ಯಾಸವಿದೆ. ಹೀಗಾಗಿ, ಸಿದ್ದರಾಮಯ್ಯ ಮಾತನ್ನು ಯಾರು ಕೇಳುವುದಿಲ್ಲ. ಸಿಎಂ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಆಪಾದಿಸಿದ್ದಾರೆ.