ಸಾರಾಂಶ
ಮೈಸೂರು : ನಂಜನಗೂಡು ನಗರಸಭೆಯಲ್ಲಿ ಕಾಂಗ್ರೆಸ್ ವಾಮಮಾರ್ಗದ ಮೂಲಕ ಅಧಿಕಾರ ಹಿಡಿದಿದೆ ಎಂದು ಮಾಜಿ ಶಾಸಕ ಹರ್ಷವರ್ಧನ್ ಆರೋಪಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತವಿದ್ದರೂ ಅಧಿಕಾರ ಕೈ ತಪ್ಪಿದೆ. ಮತದಾನಕ್ಕೆ ಗೈರು ಹಾಜರಾದ ನಾಲ್ವರು ಬಿಜೆಪಿ ಸದಸ್ಯರು ಕನಕಪುರದ ಬಳಿ ರೆಸಾರ್ಟ್ನಲ್ಲಿ ಇದ್ದರೆಂದು ತಿಳಿದು ಬಂದಿದೆ. ಈ ಬಗ್ಗೆ ಕಾಂಗ್ರೆಸ್ ಪಕ್ಷದ ಮುಖಂಡರೊಬ್ಬರು ಮಾಹಿತಿ ನೀಡಿದ್ದಾರೆ. ಆ ನಾಲ್ವರು ಸದಸ್ಯರು ಯಾವುದೇ ಸಂಪರ್ಕಕ್ಕೆ ಸಿಗಲಿಲ್ಲ. ಜೆಡಿಎಸ್ ನ ರೆಹಾನಬಾನು ಅವರಿಗೆ ಉಪಾಧ್ಯಕ್ಷ ಸ್ಥಾನ ನೀಡುವುದಾಗಿ ಒಪ್ಪಿದ್ದೆವು. ಆದರೂ ಜೆಡಿಎಸ್ ನ ಮೂವರು ಸದಸ್ಯರು ಕಡೇ ಕ್ಷಣದಲ್ಲಿ ಕಾಂಗ್ರೆಸ್ ಜತೆಗೆ ಕೈ ಜೋಡಿಸಿದ್ದಾಗಿ ಹೇಳಿದರು.
ಇವರೆಲ್ಲರೂ ಬಹುಶಃ ಹಣದ ಆಮಿಷಕ್ಕೆ ಬಲಿಯಾಗಿದ್ದಾರೆ. ಜೆಡಿಎಸ್ ಸದಸ್ಯರ ನಿಲುವು ಆಘಾತವನ್ನುಂಟು ಮಾಡಿದೆ. ಅಧಿಕಾರ ಹಿಡಿಯಬೇಕೆಂಬ ಹಠದಲ್ಲಿ ಕಾಂಗ್ರೆಸ್ ವಾಮಮಾರ್ಗ ಅನುಸರಿಸಿರುವುದು ಖಂಡನೀಯ. ಕಾಂಗ್ರೆಸ್ ಪಕ್ಷ ಅಕ್ರಮವಾಗಿ ಸಂಗ್ರಹಿಸಿರುವ ಹಣ ಬಳಸಿ ಅಧಿಕಾರ ಹಿಡಿದಿದೆ. ಇದರಲ್ಲಿ ಕೆಪಿಸಿಸಿ ಅಧ್ಯಕ್ಷರು, ಸ್ಥಳೀಯ ಸಂಸದರು, ಶಾಸಕರ ಕೈವಾಡವಿದೆ ಎಂದು ಅವರು ಆರೋಪಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ ಮಾತನಾಡಿ, ನಗರಸಭೆ ಚುನಾವಣೆ ಸಂಬಂಧ ಬಿಜೆಪಿಯ ಎಲ್ಲಾ ಸದಸ್ಯರಿಗೂ ವಿಪ್ ಜಾರಿಗೊಳಿಸಲಾಗಿತ್ತು. ಆದರೂ ಪಕ್ಷದ ವಿಪ್ ಉಲ್ಲಂಘಿಸಿ ನಾಲ್ವರು ಬಿಜೆಪಿ ಸದಸ್ಯರು ಮತದಾನಕ್ಕೆ ಗೈರು ಹಾಜರಾಗಿದ್ದಾರೆ. ಹಾಗಾಗಿ ವಿಪ್ ಉಲ್ಲಂಘಿಸಿರುವ ಬಿಜೆಪಿ ನಗರಸಭೆ ಸದಸ್ಯರಾದ ಗಿರೀಶ್ ಕುಮಾರ್, ಗಾಯತ್ರಿ, ವಿಜಯಲಕ್ಷ್ಮಿ, ಮೀನಾಕ್ಷಿ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದರು.
ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಈ ನಾಲ್ವರು ಸದಸ್ಯರನ್ನು ಆರು ವರ್ಷಗಳ ಕಾಲ ಉಚ್ಚಾಟಿಸಿದ್ದು, ನಾಲ್ವರ ವಿರುದ್ದವೂ ಕಾನೂನು ಹೋರಾಟ ನಡೆಸುವುದಾಗಿ ಅವರು ಹೇಳಿದರು.
ಈ ಮೂಲಕ ಪಕ್ಷ ವಿರೋಧಿ ಕೃತ್ಯಗಳಲ್ಲಿ ತೊಡಗುವವರಿಗೆ ತಕ್ಕ ಪಾಠ ಕಲಿಸಲಾಗುತ್ತದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಪಂ ಮಾಜಿ ಸದಸ್ಯ ಸಿ. ಚಿಕ್ಕರಂಗನಾಯಕ, ಬೀಜ ನಿಗಮದ ಮಾಜಿ ಅಧ್ಯಕ್ಷ ಎಸ್. ಮಹದೇವಯ್ಯ ಮೊದಲಾದವರು ಇದ್ದರು.