ಕುತೂಹಲ ಮೂಡಿಸಿದ ನಾರಾಯಣಸ್ವಾಮಿ ನಿಲುವು

| Published : Mar 28 2024, 12:52 AM IST

ಸಾರಾಂಶ

ಕೋಲಾರ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಚಿಕ್ಕಪೆದ್ದಣ್ಣಗೆ ನೀಡುವುದರ ವಿರುದ್ಧ ಘಟಬಂಧನ್ ನಾಯಕರು ಸಿಡಿದೆದಿದ್ದಾರೆ. ಅತ್ತ ಶಾಸಕ ನಾರಾಯಣಸ್ವಾಮಿ ಬಲಗೈ ಸಮುದಾಯಕ್ಕೆ ಟಿಕೆಟ್ ನೀಡಿದರೆ ಉತ್ತಮವೆಂದು ಹೇಳುವ ಮೂಲಕ ತಟಸ್ಥ ನಿಲುವು ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಕೋಲಾರ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಟಿಕೆಟ್‌ಗಾಗಿ ಪಕ್ಷದಲ್ಲೆ ಎರಡು ಬಣಗಳು ಮುಸುಕಿನ ಗುದ್ದಾಟದಲ್ಲಿ ತೊಡಗಿ ಶಾಸಕರು ರಾಜೀನಾಮೆ ನೀಡುವ ಹಂತಕ್ಕೆ ತಲುಪಿದೆ. ಇದರಿಂದ ಕಾರ್ಯಕರ್ತರಲ್ಲಿ ಗೊಂದಲಕ್ಕೆ ಸಿಲುಕಿದ್ದಾರೆ. ಆದರೆ ಈ ಹಿಂದೆ ಘಟಬಂಧನ್ ಗುಂಪಲ್ಲಿ ಗುರುತಿಸಿಕೊಂಡಿದ್ದ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಈ ಬಾರಿ ಯಾವ ತಟಸ್ಥರಾಗಿರುವುದು ತೀವ್ರ ಕುತೂಹಲ ಕೆರಳಿಸಿದೆ.ಕೋಲಾರ ಕ್ಷೇತ್ರದ ಕೈ ಟಿಕೆಟ್‌ ಅನ್ನು ಸಚಿವ ಕೆ.ಎಚ್.ಮುನಿಯಪ್ಪರವರ ಅಳಿಯ ಚಿಕ್ಕಪೆದ್ದಣ್ಣರಿಗೆ ನೀಡಲು ಹೈಕಮಾಂಡ್‌ ನಿರ್ಧರಿಸುತ್ತಿದ್ದಂತೆ ಘಟಬಂಧನ್ ನಾಯಕರೆಲ್ಲಾ ಸಿಡಿದೆದಿದ್ದಾರೆ. ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಡ್ರಾಮ ಮಾಡುತ್ತಾ ರಾಜ್ಯ ಗಮನ ಸೆಳೆಯುತ್ತಿದ್ದರೆ. ಅತ್ತ ಶಾಸಕ ನಾರಾಯಣಸ್ವಾಮಿ ಕೋಲಾರದಲ್ಲಿ ಬಲಗೈ ಸಮುದಾಯಕ್ಕೆ ಟಿಕೆಟ್ ನೀಡಿದರೆ ಉತ್ತಮವೆಂದು ಹೇಳುವ ಮೂಲಕ ತಟಸ್ಥ ನಿಲುವು ವ್ಯಕ್ತಪಡಿಸಿದ್ದಾರೆ..ಹೈಕಮಾಂಡ್‌ ನಿರ್ಧಾರಕ್ಕೆ ಬದ್ಧಹೈಕಮಾಂಡ್ ಅಂತಿಮವಾಗಿ ಯಾರಿಗೇ ಟಿಕೆಟ್ ಕೊಟ್ಟರೂ ವಿರೋಧ ಮಾಡದೆ ಅಭ್ಯರ್ಥಿ ಗೆಲುವಿಗೆ ಶ್ರಮಿಸುವುದಾಗಿ ಈಗಾಗಲೇ ಕ್ಷೇತ್ರದಲ್ಲಿ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ತಿಳಿಸಿದ್ದಾರೆ. ಶಾಸಕ ಎಸ್.ಎನ್.ನಾರಾಯಣಸ್ವಾಮಿಗೆ ಹಾಲಿ ಸಂಸದ ಎಸ್.ಮುನಿಸ್ವಾಮಿ ಮಾತ್ರ ಮತ್ತೊಮ್ಮೆ ಸಂಸದರಾಗುವುದು ಇಷ್ಟವಿಲ್ಲ. ಈಗ ಕ್ಷೇತ್ರವನ್ನು ಬಿಜೆಪಿ ಜೆಡಿಎಸ್‌ಗೆ ಬಿಟ್ಟುಕೊಟ್ಟಿರಿವುದರಿಂದ ಅವರು ನಿರಾಳರಾಗಿದ್ದಾರೆ.

ಸಚಿವ ಕೆ.ಎಚ್.ಮುನಿಯಪ್ಪ ಅಳಿಯನಿಗೆ ಟಿಕೆಟ್ ನೀಡಲು ಮುಂದಾಗುತ್ತಿದ್ದಂತೆ ಘಟಬಂಧನ್ ನಾಯಕರಾದ ಮೂವರು ಶಾಸಕರು, ಇಬ್ಬರು ಪರಿಷತ್ ಸದಸ್ಯರು ಸಿಡಿದೆದ್ದಿರುವುದು ಹೈಕಮಾಂಡ್‌ಗೆ ತಲೆ ಬಿಸಿ ಮಾಡಿದೆ.ಕಳೆದ ಚುನಾವಣೆಯಲ್ಲಿ ಕೆಹೆಚ್.ಮುನಿಯಪ್ಪರನ್ನು ಸೋಲಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಮಾತ್ರ ಈ ಬಾರಿ ಘಟಬಂಧ್ ನಾಯಕರಿಂದ ದೂರ ಉಳಿದಿರುವುದು ಕುತೂಹಲ ಉಂಟು ಮಾಡಿದೆ.ಜೆಡಿಎಸ್‌ ಟಿಕೆಟ್‌ ಸಮಸ್ಯೆ

ಇದೇ ರೀತಿ ಮೈತ್ರಿ ಕೂಟದ ಅಭ್ಯರ್ಥಿ ಆಯ್ಕೆಯಲ್ಲಿಯೂ ಇನ್ನೂ ಗೊಂದಲ ನಿವಾರಣೆಯಾಗದೆ ಉಳಿದಿರುವುದು ಜೆಡಿಎಸ್ ಪಕ್ಷದ ಕಾರ್ಯಕರ್ತರಲ್ಲಿ ಆತಂಕ ಉಂಟು ಮಾಡಿದೆ. ಎರಡು ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸೋತಿರುವ ಎಂ.ಮಲ್ಲೇಶಬಾಬುಗೆ ಟಿಕೆಟ್ ನೀಡಲು ಹೆಚ್.ಡಿ.ದೇವೇಗೌಡ ಮನಸು ಮಾಡಿದ್ದರೂ ಅಲ್ಲಿಯೂ ಬಿಜೆಪಿ ಟಿಕೆಟ್ ವಂಚಿತ ಸಂಸದ ಎಸ್.ಮುನಿಸ್ವಾಮಿ ತಮಗೆ ಅವಕಾಶ ನೀಡುವಂತೆ ದುಂಬಾಲು ಬಿದ್ದಿರುವುದು ಹಾಗೂ ದೇವನಹಳ್ಳಿಯ ನಿಸರ್ಗ ನಾರಾಯಣಸ್ವಾಮಿ ತಮಗೇ ಟಿಕೆಟ್‌ ನೀಡಬೇಕೆಂದು ಪಟ್ಟುಹಿಡಿದಿರುವುದು ಟಿಕೆಟ್ ಘೋಷಣೆ ಕಗ್ಗಂಟಾಗಿದೆ.

ಮಾರ್ಚ್ ೨೮ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗುತ್ತಿದ್ದರೂ ಎರಡೂ ಪಕ್ಷಗಳಲ್ಲಿ ಟಿಕೆಟ್ ಗೊಂದಲದಿಂದ ಎರಡೂ ಪಕ್ಷಗಳ ಕಾರ್ಯಕರ್ತರು ತ್ರಿಶಂಕು ಸ್ಥಿತಿಯಲ್ಲಿದ್ದಾರೆ.