ಸಾರಾಂಶ
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಹಗರಣ ಸಂಬಂಧ ಸದನದಲ್ಲಿ ನಡೆದ ಚರ್ಚೆಯಲ್ಲಿ ಸದಸ್ಯರು ಬಳಸಿದ ‘ದಲಿತ’ ಪದ ಬಳಕೆ ಮಾಡಿರುವುದಕ್ಕೆ ಕಾಂಗ್ರೆಸ್ ಸದಸ್ಯ ಪಿ.ಎಂ.ನರೇಂದ್ರಸ್ವಾಮಿ ತೀವ್ರ ಬೇಸರ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ವಿಧಾನಸಭೆ
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಹಗರಣ ಸಂಬಂಧ ಸದನದಲ್ಲಿ ನಡೆದ ಚರ್ಚೆಯಲ್ಲಿ ಸದಸ್ಯರು ಬಳಸಿದ ‘ದಲಿತ’ ಪದ ಬಳಕೆ ಮಾಡಿರುವುದಕ್ಕೆ ಕಾಂಗ್ರೆಸ್ ಸದಸ್ಯ ಪಿ.ಎಂ.ನರೇಂದ್ರಸ್ವಾಮಿ ತೀವ್ರ ಬೇಸರ ವ್ಯಕ್ತಪಡಿಸಿದರು. ದಲಿತ ಪದ ಬಳಕೆಯು ಮನಸ್ಸಿಗೆ ಚುಚ್ಚಿದಂತಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದಾಗ ಇಡೀ ಸದನವೇ ಒಂದು ಕ್ಷಣ ಕಾಲ ನಿಶ್ಯಬ್ದಗೊಂಡ ಪ್ರಸಂಗ ನಡೆಯಿತು.ಮಂಗಳವಾರ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಪ್ರಕರಣದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪರಿಶಿಷ್ಟ ಜಾತಿ/ವರ್ಗದ ಬಗ್ಗೆ ಮಾತನಾಡುವಾಗ ದಲಿತ ಎಂಬ ಪದ ಬಳಕೆಯು ಗೌರವಯುತವಲ್ಲ. ಸಂವಿಧಾನದಲ್ಲಿಯೂ ಆ ಪದ ಬಳಕೆ ಇಲ್ಲ. ಸಂವಿಧಾನಕ್ಕೆ ಗೌರವ ನೀಡಬೇಕು ಎಂದು ಸದನದ ಸದಸ್ಯರ ನಡೆಗೆ ಅಸಮಾಧಾನ ವ್ಯಕ್ತಪಡಿಸಿದರು.
ನರೇಂದ್ರಸ್ವಾಮಿ ಬೆಂಬಲಕ್ಕೆ ಬಂದ ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿ, ದಲಿತ ಪದ ಬಳಕೆಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಮಹಾತ್ಮಾ ಗಾಂಧೀಜಿ ಅವರ ಹರಿಜನ ಪದ ಬಳಕೆಗೂ ಅಂಬೇಡ್ಕರ್ ವಿರೋಧಿಸಿದ್ದರು. ಪರಿಶಿಷ್ಟ ಜಾತಿ/ಪಂಗಡ ಪದ ಬಳಕೆ ಯಾಕೆ ಮಾಡಬಾರದು. ಆ ಪದ ಬಳಕೆ ಮಾಡಿ ಎಂದು ಸಲಹೆ ನೀಡಿದರು.ಪ್ರತಿಪಕ್ಷ ನಾಯಕ ಆರ್.ಅಶೋಕ್, ಎಸ್‌ಸಿ/ಎಸ್‌ಟಿ ಎಂದು ಪದ ಬಳಕೆ ಮಾಡುತ್ತೇವೆ. ಆದರೆ ಸಂಘಟನೆಗಳು ದಲಿತ ಎಂದು ಹೆಸರು ಇಟ್ಟುಕೊಂಡಿವೆ. ಅವುಗಳನ್ನು ನಿಷೇಧ ಮಾಡುತ್ತೀರಾ ಎಂದು ಪ್ರಶ್ನಿಸಿದರು.
ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ದಲಿತ ಪದ ಬಳಕೆ ಮಾಡದಿರುವ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ದಲಿತ ಪದ ಬಳಕೆ ಮಾಡಬಾರದು ಎಂಬ ಸೂಚನೆಯೂ ಇದೆ ಎಂದರು.