ಆಂಧ್ರದಲ್ಲಿ ಜಗನ್‌ಗೆ ಎನ್‌ಡಿಎ ತ್ರಿಮೂರ್ತಿಗಳ ಸವಾಲು

| Published : Apr 09 2024, 12:47 AM IST / Updated: Apr 09 2024, 03:46 AM IST

Jagan Mohan Reddy
ಆಂಧ್ರದಲ್ಲಿ ಜಗನ್‌ಗೆ ಎನ್‌ಡಿಎ ತ್ರಿಮೂರ್ತಿಗಳ ಸವಾಲು
Share this Article
  • FB
  • TW
  • Linkdin
  • Email

ಸಾರಾಂಶ

ಸುಡುಬಿಸಿಲಿಗೆ ಹೆಸರಾದ ಆಂಧ್ರಪ್ರದೇಶದಲ್ಲಿ ಇದೀಗ ಅದನ್ನೂ ಮೀರಿಸುವ ಚುನಾವಣಾ ಕಾವು ಸುಡುತ್ತಿದೆ.

ಅಮರಾವತಿ: ಸುಡುಬಿಸಿಲಿಗೆ ಹೆಸರಾದ ಆಂಧ್ರಪ್ರದೇಶದಲ್ಲಿ ಇದೀಗ ಅದನ್ನೂ ಮೀರಿಸುವ ಚುನಾವಣಾ ಕಾವು ಸುಡುತ್ತಿದೆ. ರಾಜ್ಯದ 25 ಲೋಕಸಭಾ ಸ್ಥಾನಗಳ ಜೊತೆಗೆ 175 ವಿಧಾನಸಭಾ ಕ್ಷೇತ್ರಕ್ಕೂ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಎಲ್ಲೆಡೆ ಚುನಾವಣೆಯದ್ದೇ ಸದ್ದು.

ಆಂಧ್ರ ವಿಭಜನೆ ಬಳಿಕ 2019ರಲ್ಲಿ ನಡೆದ ಮೊದಲ ಲೋಕಸಭಾ ಚುನಾವಣೆಯಲ್ಲಿ ವೈಎಸ್‌ಆರ್‌ ಕಾಂಗ್ರೆಸ್‌ 25ರಲ್ಲಿ 22 ಸ್ಥಾನ ಗೆದ್ದು ಜಯಭೇರಿ ಬಾರಿಸಿತ್ತು. ಟಿಡಿಪಿ 3 ಸ್ಥಾನಗಳೊಂದಿಗೆ ಹೀನಾಯ ಸೋಲು ಕಂಡಿತ್ತು. ಬಿಜೆಪಿ ಮತ್ತು ಕಾಂಗ್ರೆಸ್‌ ಒಂದೂ ಸ್ಥಾನ ಗೆದ್ದಿರಲಿಲ್ಲ. ಇನ್ನು ವಿಧಾನಸಭೆಯಲ್ಲೂ ವೈಎಸ್‌ಆರ್‌ 151, ಟಿಡಿಪಿ 23, ಪವನ್‌ ಕಲ್ಯಾಣ್‌ರ ಜನಸೇನಾ 1 ಸ್ಥಾನ ಗೆದ್ದಿದ್ದವು.ಕಳೆದ 5 ವರ್ಷಗಳಲ್ಲಿ ವೈಎಸ್‌ಆರ್‌ ಕಾಂಗ್ರೆಸ್‌ ಸಾಕಷ್ಟು ಜನಪ್ರಿಯ ಯೋಜನೆಗಳ ಮೂಲಕ ಜನರ ಗಮನ ಸೆಳೆಯುವ ಪ್ರಯತ್ನ ಮಾಡಿದೆ. ಆದರೆ ಲೋಕಸಭಾ ಚುನಾವಣೆಗೂ ಮುನ್ನ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಮತ್ತೆ ಎನ್‌ಡಿಎ ಮೈತ್ರಿಕೂಟಕ್ಕೆ ಮರಳಿದ್ದು ಎಲ್ಲಾ ರಾಜಕೀಯ ಲೆಕ್ಕಾಚಾರ ಬುಡಮೇಲು ಮಾಡಿದೆ. 

ಈ ಕೂಟಕ್ಕೆ ಪವನ್‌ ಕಲ್ಯಾಣ್‌ ಕೂಡಾ ಸೇರಿದ್ದ ಎನ್‌ಡಿಎ ಬಲ ಹೆಚ್ಚಿಸಿದೆ. ಹೀಗಾಗಿಯೇ ಬಹುತೇಕ ಚುನಾವಣಾ ಪೂರ್ವ ಸಮೀಕ್ಷೆಗಳು ಮೇ 13ರಂದು ನಡೆಯುವ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ಎರಡರಲ್ಲೂ ಎನ್‌ಡಿಎ ಮೈತ್ರಿಕೂಟ ಅಧಿಕಾರಕ್ಕೆ ಮರಳುವ ಭವಿಷ್ಯ ನುಡಿದಿವೆ. ವಿಶೇಷವೆಂದರೆ ಸಿಎಂ ಜಗನ್‌ಗೆ ಕಾಂಗ್ರೆಸ್‌ನಿಂದ ಸಡ್ಡು ಹೊಡೆಯುತ್ತಿರುವುದು ಸ್ವತಃ ಅವರ ಸೋದರಿ ಶರ್ಮಿಳಾ. ಅವರೀಗ ರಾಜ್ಯ ಕಾಂಗ್ರೆಸ್‌ ಅಧ್ಯಕ್ಷೆ ಮತ್ತು ಲೋಕಸಭೆಗೆ ಕಾಂಗ್ರೆಸ್‌ ಅಭ್ಯರ್ಥಿ ಕೂಡಾ ಹೌದು. ಕಡಪಾದಲ್ಲಿ ಶರ್ಮಿಳಾ ವಿರುದ್ಧ ಅವರ ಸೋದರ ಸಂಬಂಧಿ ಅವಿನಾಶ್‌ ರೆಡ್ಡಿ ಕಣಕ್ಕೆ ಇಳಿದಿದ್ದಾರೆ. ಇನ್ನು ಕರ್ನಾಟಕದ ಮಾಜಿ ಬಿಜೆಪಿ ಸಂಸದೆಯೂ ಆಗಿರುವ ಜಿ.ಶಾಂತಾ ಅವರು ಈ ಬಾರಿ ಹಿಂದೂಪುರದಲ್ಲಿ ವೈಎಸ್‌ಆರ್ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ.

ವೈಎಸ್‌ಆರ್‌ಪಿ ಬಲ: ಎಸ್‌ಸಿ, ಎಸ್ಟಿ, ಅಲ್ಪಸಂಖ್ಯಾತರ ಬೆಂಬಲ ಜಗನ್‌ಗಿದೆ. 31 ಲಕ್ಷ ಫಲಾನುಭವಿಗಳಿಗೆ ಮನೆ ನೀಡಿದ್ದು ಪಕ್ಷಕ್ಕೆ ನೆರವಾಗುವ ನಿರೀಕ್ಷೆ ಇದೆ. ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿನ ಸುಧಾರಣೆಗಳು ಜನರ ಗಮನ ಸೆಳೆದಿವೆ. ತಳಮಟ್ಟದ ಕಾರ್ಯಕರ್ತರ ಪಡೆ ಸದೃಢಗೊಳಿಸಲು 5 ವರ್ಷದಿಂದ ಜಗನ್‌ ಶ್ರಮಿಸಿದ್ದಾರೆ. ಆದರೆ ಆಡಳಿತ ವಿರೋಧಿ ಅಲೆ ಪಕ್ಷಕ್ಕೆ ಮುಳುವಾಗುವ ಆತಂಕ ಇದೆ. ಪಕ್ಷದ ಹಲವು ನಾಯಕರು ವಿಪಕ್ಷಗಳಿಗೆ ವಲಸೆ ಹೋಗಿದ್ದಾರೆ. ರಾಜ್ಯ ರಚನೆಯಾಗಿ 5 ವರ್ಷ ಕಳೆದರೂ ಇನ್ನೂ ರಾಜಧಾನಿ ಆಯ್ಕೆಯಾಗದೇ ಇರುವುದು, ಮದ್ಯ ನಿಷೇಧ ಜಾರಿಯಾಗದೇ ಇರುವುದು, ಘೋಷಿತ ಪ್ರಮಾಣದ ಉದ್ಯೋಗ ಸೃಷ್ಟಿಯಲ್ಲಿ ವೈಫಲ್ಯ ಪಕ್ಷಕ್ಕೆ ಇರುವ ಆತಂಕ.

ಎನ್‌ಡಿಎಗೆ ತ್ರಿಮೂರ್ತಿ ಬಲ: ಪ್ರಧಾನಿ ನರೇಂದ್ರ ಮೋದಿ ಪ್ರಭಾವ, ಕೇಂದ್ರದ ಯೋಜನೆಗಳು, ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಮತ್ತು ನಟ ಪವನ್‌ಕಲ್ಯಾಣ್‌ ವರ್ಚಸ್ಸು ಎನ್‌ಡಿಎಗೆ ಹೆಚ್ಚಿನ ಬಲ ತಂದಿದೆ. 5 ವರ್ಷ ಅಧಿಕಾರದಿಂದ ದೂರ ಇದ್ದರೂ ನಾಯ್ಡು ಉತ್ತಮ ಆಡಳಿತಗಾರ, ಹೂಡಿಕೆದಾರರ ಸ್ನೇಹಿ ವ್ಯಕ್ತಿತ್ವ ಎಂಬ ಹಿರಿಮೆ ಅವರಿಗಿದೆ. ಇದು ಆಡಳಿತ ವಿರೋಧಿ ಅಲೆಯ ಮತ ಒಗ್ಗೂಡಿಸಬಹುದು. ಪವನ್‌ ಕಲ್ಯಾಣ್‌ ಬೆಂಬಲದಿಂದಾಗಿ ಸಾಕಷ್ಟು ಸಂಖ್ಯೆಯಲ್ಲಿರುವ ಕಾಪು ಸಮುದಾಯದ ಮತ ಎನ್‌ಡಿಎಗೆ ಒಲಿಯುವ ಸಾಧ್ಯತೆ ಇದೆ. ಆದರೆ ಕಳೆದ 5 ವರ್ಷಗಳ ಅವಧಿಯಲ್ಲಿ ಪಕ್ಷದ ಕಾರ್ಯಕರ್ತರ ಪಡೆ ಸಾಕಷ್ಟು ನಶಿಸಿರುವುದು, ಸ್ವತಃ ತಾವೇ ಭ್ರಷ್ಟಾಚಾರ ಕೇಸಲ್ಲಿ ಸಿಕ್ಕಿಬಿದ್ದ ಕಾರಣ, ಜಗನ್‌ ವಿರುದ್ಧ ಇಂಥ ಆರೋಪ ಮಾಡಲಾಗದೇ ಇರುವುದು ನಾಯ್ಡು ಪಾಲಿನ ಹಿನ್ನಡೆ.

ಸ್ಪರ್ಧೆ ಹೇಗೆ?: ರಾಜ್ಯದಲ್ಲಿ ಈ ಬಾರಿ ಬಿಜೆಪಿ, ಟಿಡಿಪಿ, ಜನಸೇನಾ ಮೈತ್ರಿಮಾಡಿಕೊಂಡಿವೆ. ಟಿಡಿಪಿ 17 ಲೋಕಸಭಾ ಸ್ಥಾನ, 144 ವಿಧಾನಸಭಾ ಸ್ಥಾನ, ಬಿಜೆಪಿ 6 ಲೋಕಸಭೆ, 10 ವಿಧಾನಸಭೆ, ಜನಸೇನಾ 2 ಲೋಕಸಭೆ, 21 ವಿಧಾನಸಭಾ ಸ್ಥಾನದಲ್ಲಿ ಸ್ಪರ್ಧಿಸಲಿವೆ. ವೈಎಸ್‌ಆರ್‌ ಕಾಂಗ್ರೆಸ್‌ ಏಕಾಂಗಿಯಾಗಿ ಕಣಕ್ಕೆ ಇಳಿದಿದೆ. ಇನ್ನೊಂದೆಡೆ ಕಾಂಗ್ರೆಸ್‌ ಇಂಡಿಯಾ ಮೈತ್ರಿಕೂಟದ ಭಾಗವಾಗಿ ಸ್ಪರ್ಧಿಸುತ್ತಿದೆ. ಆದರೆ ರಾಜ್ಯದಲ್ಲಿ ಎಲ್ಲೂ ಇಂಡಿಯಾ ಅಲೆ ಕಾಣಿಸುತ್ತಿಲ್ಲ. ಮೋದಿ, ನಾಯ್ಡು ಪ್ರಭಾವ, ಕೇಂದ್ರದ ಯೋಜನೆಗಳು, ರಾಜಧಾನಿ ರಚನೆ ಆಗದೇ ಇರುವುದು, ರಾಜ್ಯಕ್ಕೆ ವಿಶೇಷ ಸ್ಥಾನಮಾನದ ವಿಷಯಗಳು ಚುನಾವಣೆಯಲ್ಲಿ ಪ್ರಮುಖ ವಿಷಯಗಳಾಗಲಿವೆ.

ಪ್ರಮುಖ ಕ್ಷೇತ್ರಗಳು: ಅರಕು, ಹಿಂದೂಪುರ, ಶ್ರೀಕಾಕುಲಂ, ವಿಶಾಖಪಟ್ಟಣ, ಕಡಪಾ, ಕಾಕಿನಾಡ, ರಾಜಮುಂಡ್ರಿ, ವಿಜಯವಾಡ, ಕರ್ನೂಲ್‌, ಅನಂತಪುರ.

ಪ್ರಮುಖ ಅಭ್ಯರ್ಥಿಗಳು: ಡಿ. ಪುರಂದೇಶ್ವರಿ (ರಾಜಮಂಡ್ರಿ, ಬಿಜೆಪಿ), ವೈ.ಎಸ್‌. ಶರ್ಮಿಳಾ (ಕಡಪಾ, ಕಾಂಗ್ರೆಸ್‌), ಜೆ. ಶಾಂತಾ (ವೈಎಸ್ಸಾರ್‌ ಕಾಂಗ್ರೆಸ್, ಹಿಂದೂಪುರ)