ಸಾರಾಂಶ
ಕಳೆದ ವರ್ಷ ನಡೆದ ಚನ್ನಪಟ್ಟಣ ವಿಧಾನಸಭಾ ಉಪ ಚುನಾವಣೆಯಲ್ಲಿ ಸೋಲನುಭವಿಸಿದ ಜೆಡಿಎಸ್ ಯುವ ಘಟಕ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರ ಸಾರಥ್ಯದಲ್ಲೇ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಎದುರಿಸಲು ಜೆಡಿಎಸ್ ಸನ್ನದ್ಧವಾಗುತ್ತಿದೆ.
ಪ್ರಭುಸ್ವಾಮಿ ನಟೇಕರ್
ಬೆಂಗಳೂರು : ಕಳೆದ ವರ್ಷ ನಡೆದ ಚನ್ನಪಟ್ಟಣ ವಿಧಾನಸಭಾ ಉಪ ಚುನಾವಣೆಯಲ್ಲಿ ಸೋಲನುಭವಿಸಿದ ಜೆಡಿಎಸ್ ಯುವ ಘಟಕ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರ ಸಾರಥ್ಯದಲ್ಲೇ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಎದುರಿಸಲು ಜೆಡಿಎಸ್ ಸನ್ನದ್ಧವಾಗುತ್ತಿದೆ.
ಎಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರಕ್ಕೆ ತೆರಳಿದ ಬಳಿಕ ರಾಜ್ಯದಲ್ಲಿ ಪಕ್ಷವನ್ನು ಮುನ್ನೆಡಸಲು ಸಾರಥಿಯ ಕೊರತೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಚುನಾವಣೆ ಮೂಲಕ ರಾಜ್ಯಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ಆರಂಭಿಸಿರುವ ಜೆಡಿಎಸ್ ಮೇ 24ರಂದು ನಿಖಿಲ್ ಅವರ ಹೆಸರು ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ರಾಜ್ಯಾಧ್ಯಕ್ಷರ ಆಯ್ಕೆಯನ್ನು ಚುನಾವಣೆ ಮೂಲಕ ಮಾಡುತ್ತಿರುವುದು ಇದು ಎರಡನೇ ಬಾರಿ. ಈ ಹಿಂದೆ ಮಾಜಿ ರಾಜ್ಯಾಧ್ಯಕ್ಷರಾಗಿದ್ದ ಸಿ.ಎಂ.ಇಬ್ರಾಹಿಂ ಅವರ ಆಯ್ಕೆಯೂ ಚುನಾವಣೆ ಮೂಲಕವೇ ನಡೆದಿತ್ತು. ಅದೇ ರೀತಿ ನಿಖಿಲ್ ಆಯ್ಕೆಯೂ ಚುನಾವಣೆ ಮೂಲಕ ನಡೆಸಿ ಹೆಸರು ಪ್ರಕಟಿಸುವ ನಿರೀಕ್ಷೆ ಇದೆ.
ಪಕ್ಷದ ಚುನಾವಣಾಧಿಕಾರಿಯಾಗಿ ವಿಧಾನಪರಿಷತ್ ಸದಸ್ಯ ಕೆ.ಎ.ತಿಪ್ಪೇಸ್ವಾಮಿ ಕಾರ್ಯನಿರ್ವಹಿಸುತ್ತಿದ್ದು, ಪಕ್ಷದ ಸಾಂಸ್ಥಿಕ ಚುನಾವಣೆಯನ್ನು ಪಾರದರ್ಶಕವಾಗಿ ನಡೆಸಲು ಮುಂದಾಗಿದ್ದಾರೆ. ಪಕ್ಷದ ಸದಸ್ಯರ ನೋಂದಣಿ ಪ್ರಕ್ರಿಯೆಯನ್ನು ಆರಂಭಿಸಲಾಗಿದ್ದು, ಮಾ.15ರವರೆಗೆ ಅಭಿಯಾನ ನಡೆಯಲಿದೆ.
ಮಾ.17ರಿಂದ 29ರವರೆಗೆ ಪಂಚಾಯತ್ ಮತ್ತು ವಾರ್ಡ್ ಮಟ್ಟದ ಚುನಾವಣೆಗಳು ನಡೆಯಲಿದ್ದು, ಏ.1ರಿಂದ ಮೇ 2ರವರೆಗೆ ತಾಲೂಕು ಮತ್ತು ವಿಧಾನಸಭಾ ಕ್ಷೇತ್ರದ ಅಧ್ಯಕ್ಷರ ಚುನಾವಣೆ ನಡೆಯಲಿದೆ. ಮೇ 6ರಿಂದ 20ರವರೆಗೆ ಜಿಲ್ಲಾ ಅಧ್ಯಕ್ಷರು, ಜಿಲ್ಲಾ ಕಾರ್ಯನಿರ್ವಾಹಕರ ಚುನಾವಣೆಗಳು ನಡೆಯಲಿವೆ. ಮೇ 24ರಂದು ರಾಜ್ಯಾಧ್ಯಕ್ಷರ ಚುನಾವಣೆ ನಡೆಯಲಿದೆ. ರಾಜ್ಯಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮುಗಿದ ಬಳಿಕ ಮೇ 28 ಮತ್ತು 29ರಂದು ರಾಷ್ಟ್ರೀಯ ಕಾರ್ಯನಿರ್ವಹಣಾ ಸಭೆ ನಡೆಯಲಿದ್ದು, ರಾಷ್ಟ್ರೀಯ ಅಧ್ಯಕ್ಷರ ನೇಮಕ ಪ್ರಕ್ರಿಯೆ ನಡೆಯಲಿದೆ.
ಜಿಟಿಡಿಗೆ ತಪ್ಪಿದ ಅಧ್ಯಕ್ಷ ಸ್ಥಾನ?: ಪಕ್ಷದ ಹಿರಿಯ ನಾಯಕ ಮತ್ತು ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಅವರಿಗೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ನೀಡಬೇಕು ಎಂದು ಪಕ್ಷದಲ್ಲಿ ಪ್ರಬಲವಾಗಿ ಆಗ್ರಹ ಕೇಳಿಬಂದಿದ್ದವು. ಅದರಂತೆ ಅವರಿಗೆ ರಾಜ್ಯಾಧ್ಯಕ್ಷ ಪಟ್ಟಕಟ್ಟಲು ಪಕ್ಷದ ವರಿಷ್ಠರು ಸಹ ಸಹಮತ ವ್ಯಕ್ತಪಡಿಸಿದ್ದರು. ಆದರೆ, ಜಿ.ಟಿ.ದೇವೇಗೌಡ ಅವರು ಪಕ್ಷದಿಂದ ಅಂತರ ಕಾಯ್ದುಕೊಳ್ಳುತ್ತಿರುವುದು ಹೆಚ್ಚಾಗುತ್ತಿದೆ.
ಶಾಸಕಾಂಗ ಪಕ್ಷದ ನಾಯಕ ಸ್ಥಾನ ಕೈತಪ್ಪಿದ್ದ ಕಾರಣ ಜಿ.ಟಿ.ದೇವೇಗೌಡ ಅಸಮಾಧಾನಗೊಂಡು ಪಕ್ಷದಿಂದ ಅಂತರ ಕಾಯ್ದುಕೊಳ್ಳಲು ಆರಂಭಿಸಿದರು. ಬಳಿಕ ಮುಡಾ ಹಗರಣ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಿದ ಬಳಿಕ ಜಿ.ಟಿ.ದೇವೇಗೌಡ ವಿಚಾರದಲ್ಲಿ ಪಕ್ಷದ ವರಿಷ್ಠರು ಬೇಸರಗೊಂಡಿದ್ದರು. ಇದು ಪಕ್ಷದ ವರಿಷ್ಠರು ಮತ್ತು ಜಿ.ಟಿ.ದೇವೇಗೌಡರ ನಡುವಿನ ಅಂತರ ಮತ್ತಷ್ಟು ಹೆಚ್ಚಾಗಲು ಕಾರಣವಾಯಿತು. ಆದರೂ, ಜಿ.ಟಿ.ದೇವೇಗೌಡ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡುವಂತೆ ಪಕ್ಷದ ಕೆಲ ಮುಖಂಡರು ವರಿಷ್ಠರ ಮನವೊಲಿಕೆ ಮಾಡುವ ಪ್ರಯತ್ನ ಮಾಡಿದರು.
ಇತ್ತೀಚೆಗೆ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಕ್ಷದ ನಾಯಕರೆಲ್ಲ ನಿಖಿಲ್ ಪರ ದನಿ ಎತ್ತಿದ್ದಾರೆ. ಪಕ್ಷವನ್ನು ಮುನ್ನಡೆಸಲು ಮತ್ತು ಪಕ್ಷವನ್ನು ತಳಮಟ್ಟದಿಂದ ಸಂಘಟಿಸಲು ಪಕ್ಷಕ್ಕೆ ಸಮರ್ಥ ನಾಯಕನ ಅವಶ್ಯಕತೆ ಇದ್ದು, ಅದು ನಿಖಿಲ್ ಅವರಲ್ಲಿದೆ. ಹೀಗಾಗಿ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಬೇಕು ಎಂಬ ಅಭಿಪ್ರಾಯ ಬಲವಾಗಿ ವ್ಯಕ್ತವಾಗಿತ್ತು ಎನ್ನಲಾಗಿದೆ. ಹೀಗಾಗಿ ಮೇ 24ರಂದು ನಡೆಯುವ ಚುನಾವಣೆಯಲ್ಲಿ ನಿಖಿಲ್ ಹೆಸರು ಪ್ರಕಟಗೊಳ್ಳುವ ನಿರೀಕ್ಷೆ ಇದೆ ಎಂದು ತಿಳಿದು ಬಂದಿದೆ.