ರಾಷ್ಟ್ರೀಯ ಬಿಜೆಪಿಯ ಶಿಸ್ತು ಸಮಿತಿ ನೋಟಿಸ್‌ಗೂ ಬಗ್ಗದ ಬಿಜೆಪಿ ಭಿನ್ನರ ಪಡೆ : ನಾಡಿದ್ದು ಮೀಟಿಂಗ್‌

| N/A | Published : Feb 18 2025, 12:33 AM IST / Updated: Feb 18 2025, 03:59 AM IST

ಸಾರಾಂಶ

ರಾಷ್ಟ್ರೀಯ ಬಿಜೆಪಿಯ ಶಿಸ್ತು ಸಮಿತಿ ಶೋಕಾಸ್ ನೋಟಿಸ್ ನೀಡಿದರೂ ಕ್ಯಾರೇ ಎನ್ನದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ ಬಣದ ಮುಖಂಡರು ಇದೇ ತಿಂಗಳ 20ರಂದು ಸಭೆ ನಡೆಸಲು ನಿರ್ಧರಿಸಿದ್ದಾರೆ.

 ಬೆಂಗಳೂರು : ರಾಷ್ಟ್ರೀಯ ಬಿಜೆಪಿಯ ಶಿಸ್ತು ಸಮಿತಿ ಶೋಕಾಸ್ ನೋಟಿಸ್ ನೀಡಿದರೂ ಕ್ಯಾರೇ ಎನ್ನದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ ಬಣದ ಮುಖಂಡರು ಇದೇ ತಿಂಗಳ 20ರಂದು ಸಭೆ ನಡೆಸಲು ನಿರ್ಧರಿಸಿದ್ದಾರೆ.

ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಸಿಡಿದೆದ್ದಿರುವ ಯತ್ನಾಳ್ ಬಣದ ಮುಖಂಡರು ಈ ಸಭೆ ನಡೆಸುವ ಮೂಲಕ ತಾವು ನಿಷ್ಕ್ರಿಯರಾಗಿಲ್ಲ ಎಂಬ ಸಂದೇಶ ರವಾನಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.

ಈ ತಿಂಗಳ 20ರೊಳಗೆ ರಾಜ್ಯಾಧ್ಯಕ್ಷ ಕುರಿತ ಪ್ರಶ್ನೆಗೆ ಉತ್ತರ ಸಿಗಲಿದೆ ಎಂದು ವಿಜಯೇಂದ್ರ ಅವರು ಹೇಳಿಕೆ ನೀಡಿದ ಮರುದಿನವೇ ಅಲರ್ಟ್ ಆದ ಯತ್ನಾಳ್ ಬಣದ ಮುಖಂಡರು ಸಭೆ ನಡೆಸುವ ತೀರ್ಮಾನ ಕೈಗೊಂಡಿರುವುದು ಕುತೂಹಲ ಮೂಡಿಸಿದೆ.

ಈಗಾಗಲೇ ಯತ್ನಾಳ್ ವಿರುದ್ಧ ಶೋಕಾಸ್ ನೋಟಿಸ್ ಕೊಟ್ಟು ಮೂರು ದಿನಗಳ ಗಡುವು ನೀಡಿದ್ದರೂ ಅವರು ಈವರೆಗೆ ಉತ್ತರ ನೀಡಿಲ್ಲ. ಉತ್ತರ ನೀಡುವುದಿಲ್ಲ ಎಂದೂ ಅವರು ಹೇಳಿದ್ದರು. ಇದರ ಬೆನ್ನಲ್ಲೇ ಯತ್ನಾಳ್ ಬಣದ ಮುಖಂಡರು ಮತ್ತೆ ಸಭೆ ಸೇರುತ್ತಿದ್ದು, ನೋಟಿಸ್‌ ಬಗ್ಗೆ ಮತ್ತು ರಾಜ್ಯಾಧ್ಯಕ್ಷ ಹುದ್ದೆ ನೇಮಕ ಪ್ರಕ್ರಿಯೆ ಬಗ್ಗೆ ಚರ್ಚೆ ನಡೆಸುವ ನಿರೀಕ್ಷೆಯಿದೆ.

ಹಿಂದೆ ಸಭೆ ಸೇರಿದಾಗ ವಕ್ಫ್ ಆಸ್ತಿ ವಿವಾದ ಕುರಿತು ಚರ್ಚೆ ನಡೆಯುತ್ತಿತ್ತು. ಈಗ ವಕ್ಫ್ ವಿವಾದ ಸದ್ಯಕ್ಕೆ ಮುಗಿದಿದೆ. ರಾಜ್ಯಾಧ್ಯಕ್ಷ ಹುದ್ದೆಗೆ ತಮ್ಮ ಬಣದಿಂದ ಅಭ್ಯರ್ಥಿಯೊಬ್ಬರನ್ನು ಕಣಕ್ಕಿಳಿಸುವ ಬಗ್ಗೆ ಇನ್ನೂ ತಿರ್ಮಾನ ಹೊರಬಿದ್ದಿಲ್ಲ. ಚುನಾವಣೆ ನಡೆಯುವುದೇ ಆದಲ್ಲಿ ಅಭ್ಯರ್ಥಿ ಆಯ್ಕೆ ಮಾಡುವ ಬಗ್ಗೆಯೂ ಸಭೆಯಲ್ಲಿ ಪ್ರಸ್ತಾಪವಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

- 20ರೊಳಗೆ ಉತ್ತರ ಎಂದಿದ್ದ ವಿಜಯೇಂದ್ರ- ಅದೇ ದಿನ ಸಭೆ ಸೇರಲು ಭಿನ್ನರು ತಯಾರಿ- ನಿಷ್ಕ್ರಿಯ ಆಗಿಲ್ಲ ಎಂಬ ಸಂದೇಶ ರವಾನೆ

- ಬಹಿರಂಗ ಹೇಳಿಕೆ ನೀಡಿದ ಕಾರಣಕ್ಕೆ ರಾಜ್ಯ ಬಿಜೆಪಿ ಭಿನ್ನರ ಪಡೆ ನಾಯಕ ಯತ್ನಾಳ್‌ಗೆ ಪಕ್ಷ ನೋಟಿಸ್‌ ನೀಡಿತ್ತು- 3 ದಿನದೊಳಗೆ ಉತ್ತರ ನೀಡಬೇಕು ಎಂದು ಗಡುವು ನೀಡಿತ್ತು. ಆದರೆ ಯಾವುದೇ ಉತ್ತರ ಕೊಟ್ಟಿರಲಿಲ್ಲ ಯತ್ನಾಳ್‌- ಉತ್ತರ ಕೊಡುವುದಿಲ್ಲ ಎಂದು ಬಹಿರಂಗವಾಗಿಯೇ ಹೇಳಿದ್ದರು. ಆ ಬಳಿಕ ಭಿನ್ನರ ಪಡೆಯ ಚಟುವಟಿಕೆ ಸ್ತಬ್ಧವಾಗಿತ್ತು- ಈ ನಡುವೆ, ಫೆ.20ರೊಳಗೆ ರಾಜ್ಯ ಬಿಜೆಪಿ ಅಧ್ಯಕ್ಷರ ಪ್ರಶ್ನೆಗೆ ಉತ್ತರ ಸಿಗಲಿದೆ ಎಂದು ವಿಜಯೇಂದ್ರ ಹೇಳಿದ್ದರು- ಆ ಹೇಳಿಕೆ ಹೊರಬಿದ್ದ ಮರುದಿನವೇ ಅಲರ್ಟ್‌ ಆದ ಭಿನ್ನರು. ಫೆ.20ರಂದೇ ಸಭೆ ಸೇರಲು ನಾಯಕರ ತೀರ್ಮಾನ- ಗುರುವಾರ ನಡೆಯುವ ಸಭೆಯಲ್ಲಿ ಯಾವೆಲ್ಲಾ ವಿಷಯವನ್ನು ಚರ್ಚೆ ಮಾಡುತ್ತಾರೆ ಎಂಬುದು ಸದ್ಯದ ಕುತೂಹಲ