ಕಾಂಗ್ರೆಸ್‌ಗೆ ರಿಲೀಫ್‌: ಸದ್ಯಕ್ಕೆ ಐಟಿ ಕ್ರಮ ಇಲ್ಲ

| Published : Apr 02 2024, 01:03 AM IST / Updated: Apr 02 2024, 04:36 AM IST

ಸಾರಾಂಶ

ಸುಮಾರು 3500 ಕೋಟಿ ರು. ತೆರಿಗೆ ಬಾಕಿ ಪಾವತಿಸುವಂತೆ ನೋಟಿಸ್‌ ನೀಡಲಾಗಿದ್ದರೂ, ಲೋಕಸಭೆ ಚುನಾವಣೆ ಮುಗಿಯುವವರೆಗೂ ಕಾಂಗ್ರೆಸ್‌ ಪಕ್ಷದ ವಿರುದ್ಧ ಯಾವುದೇ ರೀತಿಯ ಬಲವಂತದ ಕ್ರಮವನ್ನು ತೆಗೆದುಕೊಳ್ಳುವುದಿಲ್ಲ ಎಂದು ಸುಪ್ರೀಂಕೋರ್ಟ್‌ಗೆ ಆದಾಯ ತೆರಿಗೆ ಇಲಾಖೆ ತಿಳಿಸಿದೆ.

 ನವದೆಹಲಿ :  ಸುಮಾರು 3500 ಕೋಟಿ ರು. ತೆರಿಗೆ ಬಾಕಿ ಪಾವತಿಸುವಂತೆ ನೋಟಿಸ್‌ ನೀಡಲಾಗಿದ್ದರೂ, ಲೋಕಸಭೆ ಚುನಾವಣೆ ಮುಗಿಯುವವರೆಗೂ ಕಾಂಗ್ರೆಸ್‌ ಪಕ್ಷದ ವಿರುದ್ಧ ಯಾವುದೇ ರೀತಿಯ ಬಲವಂತದ ಕ್ರಮವನ್ನು ತೆಗೆದುಕೊಳ್ಳುವುದಿಲ್ಲ ಎಂದು ಸುಪ್ರೀಂಕೋರ್ಟ್‌ಗೆ ಆದಾಯ ತೆರಿಗೆ ಇಲಾಖೆ ತಿಳಿಸಿದೆ. ಹೀಗಾಗಿ ತಕ್ಷಣಕ್ಕೆ ಕಾಂಗ್ರೆಸ್‌ ತೆರಿಗೆ ಪಾವತಿ ವಿಷಯದಲ್ಲಿ ನಿಟ್ಟುಸಿರು ಬಿಡುವಂತಾಗಿದೆ.

ತೆರಿಗೆ ಬಾಕಿ ಪಾವತಿಗೆ ಸೂಚನೆ ಪ್ರಶ್ನಿಸಿ ಕಾಂಗ್ರೆಸ್‌ ಸಲ್ಲಿಸಿದ್ದ ಅರ್ಜಿ ಸೋಮವಾರ ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಹಾಗೂ ಆಗಸ್ಟೀನ್‌ ಜಾರ್ಜ್‌ ಮಾಸೀಹ್‌ ಅವರ ಪೀಠದ ಮಂದೆ ಬಂದಿತ್ತು. ಆದಾಯ ತೆರಿಗೆ ಇಲಾಖೆ ಪರವಾಗಿ ವಿಚಾರಣೆಗೆ ಹಾಜರಾದ ಸಾಲಿಸಿಟರ್‌ ಜನರಲ್ ತುಷಾರ್‌ ಮೆಹ್ತಾ ಅವರು ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಪರ ಹಿರಿಯ ವಕೀಲ ಅಭಿಷೇಕ್‌ ಸಿಂಘ್ವಿ, ಇದೊಂದು ಉದಾರವಾದಿ ನಿರ್ಧಾರ. ತೆರಿಗೆ ಇಲಾಖೆ ಎಲ್ಲ ನೋಟಿಸ್‌ಗಳನ್ನು ಮಾರ್ಚ್‌ ಹಾಗೂ ಅದಕ್ಕೂ ಮುನ್ನ ನೀಡಿದ್ದು, ತೆರಿಗೆ ಬಾಕಿಯ ಮೊತ್ತ 3500 ಕೋಟಿ ರು.ಗಳಾಗಿದೆ ಎಂದು ಹೇಳಿದರು. ಇದೇ ವೇಳೆ ವಿಚಾರಣೆಯನ್ನು ನ್ಯಾಯಾಲಯ ಜುಲೈಗೆ ಮುಂದೂಡಿತು.

2014-15 ಹಾಗೂ 2016-17ನೇ ಸಾಲಿಗೆ ಸಂಬಂಧಿಸಿದಂತೆ 1800 ಕೋಟಿ ರು. ತೆರಿಗೆ ಬಾಕಿ ಪಾವತಿಸುವಂತೆ ಆದಾಯ ತೆರಿಗೆ ಇಲಾಖೆ ನೋಟಿಸ್‌ ನೀಡಿತ್ತು. ಬಳಿಕ ಮತ್ತೆರಡು ನೋಟಿಸ್‌ ನೀಡಿ 1745 ಕೋಟಿ ರು. ಕಟ್ಟುವಂತೆ ಸೂಚನೆ ನೀಡಿತ್ತು. ಈ ನೋಟಿಸ್‌ಗಳಿಂದಾಗಿ ಕಾಂಗ್ರೆಸ್‌ ಪಾವತಿಸಬೇಕಿರುವ ಬಾಕಿ ತೆರಿಗೆ ಮೊತ್ತ 3567 ಕೋಟಿ ರು.ಗೆ ಏರಿಕೆ ಕಂಡಿತ್ತು.

ಈ ನಡುವೆ, ತೆರಿಗೆ ಬಾಕಿ ಪಾವತಿಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ಪಕ್ಷದ ಬ್ಯಾಂಕ್‌ ಖಾತೆಯಿಂದ 135 ಕೋಟಿ ರು.ಗಳನ್ನು ತೆರಿಗೆ ಇಲಾಖೆ ಮುಟ್ಟುಗೋಲು ಹಾಕಿತ್ತು.