ರಾಜ್ಯ ಕಾಂಗ್ರೆಸ್‌ ನಾಯಕರಲ್ಲಿ ನಿಲ್ತಿಲ್ಲ ಹುದ್ದೆ ಕಿತ್ತಾಟ : ಹೈಕಮಾಂಡ್ ತೀರ್ಮಾನೇ ಅಂತಿಮ ಎಂದ ಸಿಎಂ

| N/A | Published : Feb 19 2025, 12:48 AM IST / Updated: Feb 19 2025, 08:37 AM IST

ರಾಜ್ಯ ಕಾಂಗ್ರೆಸ್‌ ನಾಯಕರಲ್ಲಿ ನಿಲ್ತಿಲ್ಲ ಹುದ್ದೆ ಕಿತ್ತಾಟ : ಹೈಕಮಾಂಡ್ ತೀರ್ಮಾನೇ ಅಂತಿಮ ಎಂದ ಸಿಎಂ
Share this Article
  • FB
  • TW
  • Linkdin
  • Email

ಸಾರಾಂಶ

ಕೆಪಿಸಿಸಿ ಅಧ್ಯಕ್ಷ ಹುದ್ದೆ ಮತ್ತು ಮುಖ್ಯಮಂತ್ರಿ ಸ್ಥಾನದ ಕುರಿತಂತೆ ಸಚಿವರು, ಶಾಸಕರು ನೀಡುತ್ತಿರುವ ಹೇಳಿಕೆಗಳು ಕೇವಲ ಅವರ ವೈಯಕ್ತಿಕ ಅಭಿಪ್ರಾಯ. ಹೈಕಮಾಂಡ್‌ ಏನು ತೀರ್ಮಾನ ತೆಗೆದುಕೊಳ್ಳುತ್ತದೆಯೋ ಅದೇ ಅಂತಿಮ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಬೆಂಗಳೂರು :  ಕೆಪಿಸಿಸಿ ಅಧ್ಯಕ್ಷ ಹುದ್ದೆ ಮತ್ತು ಮುಖ್ಯಮಂತ್ರಿ ಸ್ಥಾನದ ಕುರಿತಂತೆ ಸಚಿವರು, ಶಾಸಕರು ನೀಡುತ್ತಿರುವ ಹೇಳಿಕೆಗಳು ಕೇವಲ ಅವರ ವೈಯಕ್ತಿಕ ಅಭಿಪ್ರಾಯ. ಹೈಕಮಾಂಡ್‌ ಏನು ತೀರ್ಮಾನ ತೆಗೆದುಕೊಳ್ಳುತ್ತದೆಯೋ ಅದೇ ಅಂತಿಮ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮತ್ತು ಸಚಿವ ಕೆ.ಎನ್‌. ರಾಜಣ್ಣ ಅವರ ಹೇಳಿಕೆಗಳ ಕುರಿತಂತೆ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಸ್ಥಾನದ ಕುರಿತಂತೆ ಯಾರೇ ಮಾತನಾಡಿದರೂ ಅದು ಅವರ ವೈಯಕ್ತಿಕ ಅಭಿಪ್ರಾಯ. ಅದರ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ ಎಂದರು.

ಅಧಿಕಾರ ಹಂಚಿಕೆ ಸೂತ್ರದ ಕುರಿತ ಪ್ರಶ್ನೆಗೆ ಉತ್ತರಿಸಿ, ಯಾವುದೇ ವಿಚಾರವಾದರೂ ಹೈಕಮಾಂಡ್‌ ನಿರ್ಧಾರವೇ ಅಂತಿಮ. ಹೈಕಮಾಂಡ್‌ ನಾಯಕರು ಯಾವ ರೀತಿ ತೀರ್ಮಾನಿಸುತ್ತಾರೋ ಅದನ್ನು ನಾನೂ ಸೇರಿದಂತೆ ಎಲ್ಲರೂ ಒಪ್ಪಬೇಕಾಗುತ್ತದೆ ಎಂದ ಅವರು, ನನಗೆ ಮೊಣಕಾಲಿನ ನೋವಿದ್ದು, ಅದು ನಿವಾರಣೆಯಾದ ನಂತರ ಹೈಕಮಾಂಡ್‌ ನಾಯಕರನ್ನು ಭೇಟಿಯಾಗುತ್ತೇನೆ. ನಾನೇ ದೆಹಲಿಗೆ ಹೋಗಬೇಕೆ ಅಥವಾ ಹೈಕಮಾಂಡ್ ನಾಯಕರೇ ಇಲ್ಲಿಗೆ ಬರುತ್ತಾರೆಯೇ ಎಂಬುದನ್ನು ಕಾದು ನೋಡಬೇಕು ಎಂದು ಹೇಳಿದರು.

ಸಿಎಂ ಭೇಟಿಯಾಗಿ ರಾಜಣ್ಣ ಚರ್ಚೆ

ಮುಖ್ಯಮಂತ್ರಿ ಸ್ಥಾನದ ಕುರಿತಂತೆ ನಾಯಕರು ನೀಡುತ್ತಿರುವ ಹೇಳಿಕೆಗಳು ಹಾಗೂ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತಂತೆ ಸಚಿವ ಕೆ.ಎನ್‌. ರಾಜಣ್ಣ ಮಂಗಳವಾರ ಬೆಳಗ್ಗೆ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಯಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಕೆಲಕಾಲ ಚರ್ಚಿಸಿದರು. ಕೆಪಿಸಿಸಿ ಅಧ್ಯಕ್ಷ ಸ್ಥಾನ, ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್‌ ನೀಡಿರುವ ಹೇಳಿಕೆ ಸೇರಿದಂತೆ ಮತ್ತಿತರ ವಿಚಾರಗಳ ಕುರಿತಂತೆ ರಾಜಣ್ಣ ಅವರು ಸಿದ್ದರಾಮಯ್ಯ ಗಮನಕ್ಕೆ ತಂದರು ಎಂದು ಮೂಲಗಳು ತಿಳಿಸಿವೆ.

ಡಿಕೆಶಿ ಬದಲಿಸಿ ಎಂದು ಹಟ ಇಲ್ಲ, ಮನವಿ ಮಾತ್ರ: ಸತೀಶ್‌

- ಹೈಕಮಾಂಡ್‌ ಬಳಿ ಈ ಬಗ್ಗೆ ಪ್ರಾರ್ಥಿಸಿದ್ದೇವಷ್ಟೆ- ಸದ್ಯ ಕಾಂಗ್ರೆಸ್‌ ದಲಿತ ಸಮಾವೇಶವಿಲ್ಲ: ಸಚಿವ

 ಮಂಗಳೂರು : ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆಗೆ ನಮ್ಮದೇನೂ ಹಟ ಇಲ್ಲ, ಮನವಿ ಮಾತ್ರ. ನಾವು ಈ ಬಗ್ಗೆ ಹೈಕಮಾಂಡ್ ಬಳಿ ಪ್ರಾರ್ಥನೆ ಮಾಡಿದ್ದೇವಷ್ಟೇ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಗಾದಿಯ ಮೇಲೆ ಕಣ್ಣಿಟ್ಟು ಇತ್ತೀಚೆಗೆ ದೆಹಲಿ ಭೇಟಿ ಸಂದರ್ಭದಲ್ಲಿ ಎಐಸಿಸಿ ನಾಯಕರಾದ ಕೆ.ಸಿ. ವೇಣುಗೋಪಾಲ್‌ ಮತ್ತು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೆವಾಲಾ ಅವರನ್ನು ಭೇಟಿ ಮಾಡಿದ್ದ ಜಾರಕಿಹೊಳಿ, ಡಿ.ಕೆ. ಶಿವಕುಮಾರ್ ಅವರಿಗೆ ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನ ಎರಡು ಹುದ್ದೆ ನೀಡಿದಂತೆ ತಮಗೂ ಎರಡು ಹುದ್ದೆ ನೀಡಬೇಕೆಂದು ಮನವಿ ಮಾಡಿದ್ದರು ಎನ್ನಲಾಗಿತ್ತು. ಈ ಮನವಿ ಕಾಂಗ್ರೆಸ್‌ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ ಮಂಗಳವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸತೀಶ್‌, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಹೈಕಮಾಂಡ್ ಬಳಿ ನಮ್ಮ ವಿಚಾರ ಹೇಳಲು ಕಾಂಗ್ರೆಸ್‌ ಪಕ್ಷದಲ್ಲಿ ಎಲ್ಲರೂ ಸ್ವತಂತ್ರರಿದ್ದಾರೆ ಎಂದು ಹೇಳಿದರು.

ರಾಜಣ್ಣ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ಜೆ.ಸಿ. ಚಂದ್ರಶೇಖರ್‌ ಅವರು ಹೈಕಮಾಂಡ್‌ಗೆ ದೂರು ನೀಡಿದ ಕುರಿತು ಪ್ರತಿಕ್ರಿಯಿಸಿದ ಜಾರಕಿಹೊಳಿ, ಕಾರ್ಯಾಧ್ಯಕ್ಷರು ಇಲ್ಲೇ ಇರುತ್ತಾರೆ. ರಾಜಣ್ಣ ಅವರನ್ನು ಕರೆಸಿ ಚರ್ಚೆ ನಡೆಸಿ, ಇಲ್ಲಿಯೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಿತ್ತು. ದೆಹಲಿಗೆ ಹೋಗುವ ಅಗತ್ಯ ಇರಲಿಲ್ಲ. ಕಾರ್ಯಾಧ್ಯಕ್ಷರ ಅಧೀನದಲ್ಲೇ ರಾಜಣ್ಣ ಇರೋದಲ್ವಾ ಎಂದರು.ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರಿಯಲಿ ಎಂದು ಡಿ.ಕೆ. ಶಿವಕುಮಾರ್‌ ಅವರೇ ಹೇಳಿದ ಬಳಿಕ ಈ ಕುರಿತು ಚರ್ಚೆ ಮಾಡುವ ಅಗತ್ಯವೇ ಇರುವುದಿಲ್ಲ ಎಂದು ಅವರು ಪ್ರತಿಕ್ರಿಯಿಸಿದರು.

ದಲಿತ ಸಮಾವೇಶ ಇಲ್ಲ:

ಸದ್ಯಕ್ಕೆ ದಲಿತ ಸಮಾವೇಶ ನಡೆಸುವ ಯೋಚನೆ ಇಲ್ಲ ಎಂದು ಹೇಳಿದ ಸತೀಶ್‌ ಜಾರಕಿಹೊಳಿ, ಗೃಹ ಸಚಿವ ಡಾ.ಜಿ. ಪರಮೇಶ್ವರ್ ನೇತೃತ್ವದ ಸಮಾವೇಶ ಯಾವಾಗ ನಡೆಯುತ್ತದೆಯೋ ಸ್ಪಷ್ಟವಿಲ್ಲ. ಆ ಬಗ್ಗೆ ಅವರೇ ಮಾಹಿತಿ ನೀಡಲಿದ್ದಾರೆ. ಆದರೆ ದಲಿತ ಸಮಾವೇಶ ಇಲ್ಲವೇ ಇಲ್ಲ ಎಂದರು.ಗೃಹ ಸಚಿವರ ದೆಹಲಿ ಭೇಟಿ ವಿಚಾರದ ಕುರಿತಂತೆ ಪ್ರತಿಕ್ರಿಯಿಸಿ, ದೆಹಲಿ ಹೈಕಮಾಂಡ್ ಅಂದರೆ ದೇವಸ್ಥಾನ ಇದ್ದ ಹಾಗೆ. ಅಲ್ಲಿಗೆ ಯಾರು ಬೇಕಾದರೂ ಹೋಗಬಹುದು ಎಂದು ಹೇಳಿದರು.

ಮುಂದಿನ ಸಿಎಂ ಜಾರಕಿಹೊಳಿ ಎಂಬ ಕಾರ್ಯಕರ್ತರ ಹೇಳಿಕೆಗೆ ಪ್ರತಿಕ್ರಿಯಿಸಿ, ಪರಮೇಶ್ವರ್‌, ಡಿಕೆ ಶಿವಕುಮಾರ್‌, ನನ್ನ ಬಗ್ಗೆ ಅಭಿಮಾನಿಗಳು ಹೀಗೆ ಹೇಳುತ್ತಾರೆ. ಅದು ಕಾರ್ಯಕರ್ತರ ಪ್ರೀತಿ. ಸಿಎಂ ಸ್ಥಾನ ಸಿಗೋದು ಅಷ್ಟು ಸುಲಭ ಅಲ್ಲ ಎಂದರು.

---ಶೋಷಿತ ಸಮಾವೇಶ: ಪರಂ, ವೇಣು ಚರ್ಚೆ- ದೆಹಲಿಯಲ್ಲಿ ಸಚಿವ ಪರಂ, ವೇಣು ಭೇಟಿ

 ನವದೆಹಲಿ : ರಾಜ್ಯ ಕಾಂಗ್ರೆಸ್‌ನಲ್ಲಿ ಬಣ ರಾಜಕಾರಣ ತೀವ್ರಗೊಳ್ಳುತ್ತಿರುವುದರ ನಡುವೆಯೇ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರು ಮಂಗಳವಾರ ದೆಹಲಿಗೆ ತೆರಳಿ, ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿ ಮಾಡಿದ್ದು, ತೀವ್ರ ಕುತೂಹಲ ಕೆರಳಿಸಿದೆ.

ದೆಹಲಿಯ ಕಾಂಗ್ರೆಸ್‌ ಹೊಸ ಭವನದಲ್ಲಿ ಈ ಭೇಟಿ ನಡೆದಿದ್ದು, ಪ್ರಮುಖವಾಗಿ ರಾಜ್ಯದಲ್ಲಿ ಶೀಘ್ರವೇ ಶೋಷಿತರ ಸಮಾವೇಶ ನಡೆಸುವ ಬಗ್ಗೆ ಚರ್ಚೆ ನಡೆಸಲಾಯಿತು. ಅಲ್ಲದೆ, ಸಿಎಂ ಬದಲಾವಣೆ ಆದರೆ ಆ ವೇಳೆ ತಮ್ಮ ಹೆಸರನ್ನೂ ಪರಿಗಣಿಸುವ ಬಗ್ಗೆ ಅವರು ವೇಣುಗೋಪಾಲ್‌ ಬಳಿ ಮನವಿ ಮಾಡಿದರು ಎಂದು ಮೂಲಗಳು ಹೇಳಿವೆ.ಜೊತೆಗೆ, ರಾಜ್ಯದ ಪ್ರಸಕ್ತ ಕಾಂಗ್ರೆಸ್‌ ವಿದ್ಯಮಾನಗಳ ಬಗ್ಗೆಯೂ ಅವರು ಚರ್ಚೆ ನಡೆಸಿದರು. ಜಾತಿ ಗಣತಿ ಜಾರಿ ವಿಳಂಬದ ಬಗ್ಗೆಯೂ ಮಾಹಿತಿ ನೀಡಿದರು. ಅಲ್ಲದೆ, ಮುಂಬರುವ ಎಂಎಲ್‌ಸಿ ಆಯ್ಕೆ ಬಗ್ಗೆಯೂ ಚರ್ಚೆ ನಡೆಯಿತು ಎಂದು ತಿಳಿದು ಬಂದಿದೆ.

ಈ ಮಧ್ಯೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಭೇಟಿಗೂ ಅವರು ಸಮಯ ಕೇಳಿದ್ದು, ಸಾಧ್ಯವಾದರೆ, ಅವರನ್ನೂ ಭೇಟಿ ಮಾಡುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.