ಜೆಡಿಎಸ್‌-ಬಿಜೆಪಿ ಮೈತ್ರಿಗೆ ಅಭ್ಯಂತರ ಇಲ್ಲ: ಡಿಕೆಶಿ

| Published : May 13 2024, 12:02 PM IST

DK shivakumar

ಸಾರಾಂಶ

‘ಲೋಕಸಭೆ ಚುನಾವಣೆ, ಪರಿಷತ್ ಚುನಾವಣೆಗೆ ಮಾತ್ರವಲ್ಲ ಬಿಜೆಪಿ ಹಾಗೂ ಜೆಡಿಎಸ್ ಅವರು ಶಾಶ್ವತವಾಗಿ ಮೈತ್ರಿ ಮಾಡಿಕೊಳ್ಳಲಿ ಅಥವಾ ಪಕ್ಷಗಳನ್ನೇ ವಿಲೀನ ಮಾಡಿಕೊಳ್ಳಲಿ. ನಮಗೆ ಯಾವುದೇ ರೀತಿಯ ಅಭ್ಯಂತರವಿಲ್ಲ

ಬೆಂಗಳೂರು :  ‘ಲೋಕಸಭೆ ಚುನಾವಣೆ, ಪರಿಷತ್ ಚುನಾವಣೆಗೆ ಮಾತ್ರವಲ್ಲ ಬಿಜೆಪಿ ಹಾಗೂ ಜೆಡಿಎಸ್ ಅವರು ಶಾಶ್ವತವಾಗಿ ಮೈತ್ರಿ ಮಾಡಿಕೊಳ್ಳಲಿ ಅಥವಾ ಪಕ್ಷಗಳನ್ನೇ ವಿಲೀನ ಮಾಡಿಕೊಳ್ಳಲಿ. ನಮಗೆ ಯಾವುದೇ ರೀತಿಯ ಅಭ್ಯಂತರವಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.ಅಲ್ಲದೆ, ನಾವು ಲೋಕಸಭೆ ಚುನಾವಣೆ ಮಾದರಿಯಲ್ಲೇ ಈ ಚುನಾವಣೆಯನ್ನೂ ಎದುರಿಸುತ್ತೇವೆ. ವಿಧಾನಪರಿಷತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಜಯ ಗಳಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಭಾನುವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರು ಮೈತ್ರಿಯಾದರೂ ಮಾಡಿಕೊಳ್ಳಲಿ, ವಿಲೀನವಾದರೂ ಮಾಡಿಕೊಳ್ಳಲಿ. ಯಾರ ಫೋಟೋ ಯಾರಾದರೂ ಬಳಸಿಕೊಳ್ಳಲಿ. ಅದು ಅವರ ಪಕ್ಷಗಳ ತೀರ್ಮಾನ. ನಮಗೂ ಅದಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.

ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರಗಳ ಚುನಾವಣೆ ವಿಚಾರವಾಗಿ ನಮ್ಮ ಪಕ್ಷದ ನಾಯಕರು ಹಾಗೂ ಪದಾಧಿಕಾರಿಗಳ ಜತೆ ಚರ್ಚೆ ಮಾಡಿದ್ದೇವೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಂದ ಹಿಡಿದು ಎಲ್ಲಾ ಮುಖಂಡರು ಸೇರಿ ಈ ಚುನಾವಣೆ ಎದುರಿಸಬೇಕು. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ನಿರ್ದೇಶನ ನೀಡಲಾಗಿದೆ. ಇನ್ನು ಪಕ್ಷದ ಅಭ್ಯರ್ಥಿಗಳಿಗೆ ಬಿ ಫಾರಂ ನೀಡಲಾಗಿದೆ. ಲೋಕಸಭೆ ಚುನಾವಣೆ ರೀತಿಯಲ್ಲೇ ಈ ಚುನಾವಣೆ ಎದುರಿಸಿ ಗೆಲ್ಲುತ್ತೇವೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ:

ಬಿಜೆಪಿ ಅಧಿಕಾರಕ್ಕೆ ಬಂದರೆ ನರೇಂದ್ರ ಮೋದಿ 1 ವರ್ಷ ಮಾತ್ರ ಅಧಿಕಾರದಲ್ಲಿ ಎಂಬ ಕೇಜ್ರಿವಾಲ್‌ ಹೇಳಿಕೆಗೆ ಪ್ರತಿಕ್ರಿಯಿಸಿ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ. ಹೀಗಾಗಿ ಬಿಜೆಪಿಯವರು ಪ್ರಧಾನಿಯಾಗಲು ಸಾಧ್ಯವಿಲ್ಲ. ದೇಶದಲ್ಲಿ ಕಾಂಗ್ರೆಸ್ ಹಾಗು ಇಂಡಿಯಾ ಮೈತ್ರಿಕೂಟ ಆಡಳಿತ ಮಾಡಲಿದೆ ಎಂಬ ವಿಶ್ವಾಸ ನನ್ನದು ಎಂದು ಶಿವಕುಮಾರ್‌ ಸ್ಪಷ್ಟಪಡಿಸಿದರು.

ಪ್ರಜ್ವಲ್‌ ಪ್ರಕರಣ ಸಿಬಿಐಗೆ ಕೊಡುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಇದರ ಬಗ್ಗೆಯೇ ಎಷ್ಟು ದಿನ ಮಾತನಾಡಲಿ. ಸ್ವಲ್ಪ ದಿನ ವಿಶ್ರಾಂತಿ ಕೊಡೋಣ ಎಂದಷ್ಟೇ ಹೇಳಿದರು.