ಕಾಂಗ್ರೆಸ್‌ನಿಂದ ಇದುವರೆಗೆ ಯಾರೂ ನನ್ನನ್ನು ಭೇಟಿ ಮಾಡಿಲ್ಲ : ಸಿ.ಪಿ. ಯೋಗೇಶ್ವರ್‌

| Published : Sep 30 2024, 01:20 AM IST / Updated: Sep 30 2024, 05:14 AM IST

ಸಾರಾಂಶ

ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಕ್ಷೇತ್ರದ ಜನರ ಒತ್ತಡವಿದ್ದು, ಪಕ್ಷದ ತೀರ್ಮಾನಕ್ಕೆ ಬದ್ಧನಾಗಿರುವುದಾಗಿ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ ತಿಳಿಸಿದ್ದಾರೆ. ಪಕ್ಷಾಂತರದ ಬಗ್ಗೆ ಯಾವುದೇ ಆಲೋಚನೆ ಇಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

 ಮಂಡ್ಯ : ಚನ್ನಪಟ್ಟಣ ಉಪ ಚುನಾವಣೆಗೆ ಸ್ಪರ್ಧಿಸುವಂತೆ ಕ್ಷೇತ್ರದ ಜನರ ಒತ್ತಡವಿದೆ. ಪಕ್ಷದ ವರಿಷ್ಠರ ತೀರ್ಮಾನವನ್ನು ಕಾದುನೋಡುತ್ತಿದ್ದೇನೆ. ಆದರೆ, ಪಕ್ಷಾಂತರ ಮಾಡುವ ಬಗ್ಗೆ ನಾನು ಯಾವುದೇ ಆಲೋಚನೆ ಮಾಡಿಲ್ಲ ಎಂದು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ ತಿಳಿಸಿದರು.

ಚುನಾವಣೆ ಅ.10 ರಂದು ಘೋಷಣೆಯಾಗುವ ಸಾಧ್ಯತೆಗಳಿವೆ. ಬಿಜೆಪಿ-ಜೆಡಿಎಸ್‌ ರಾಷ್ಟ್ರಮಟ್ಟದಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದೇವೆ. ಹಾಗಾಗಿ ಎರಡೂ ಪಕ್ಷದವರ ತೀರ್ಮಾನಕ್ಕೆ ಬದ್ಧರಾಗಿರಬೇಕಿರುತ್ತದೆ. ನಾನು ಪಕ್ಷದ ಕಾರ್ಯಕರ್ತನಾಗಿ ಪಕ್ಷದ ಮಾತನ್ನು ಕೇಳಬೇಕು ಎಂದು ನಗರದಲ್ಲಿ ಸುದ್ದಿಗಾರರಿಗೆ ಹೇಳಿದರು.

ಚನ್ನಪಟ್ಟಣ ಮೈತ್ರಿ ಟಿಕೆಟ್ ಕೈ ತಪ್ಪಿದರೆ ಕಾಂಗ್ರೆಸ್ ಸೇರುವಿರಾ ಎಂಬ ಪ್ರಶ್ನೆಗೆ, ಆ ಬಗ್ಗೆ ನಾನು ಯೋಚನೆ ಮಾಡಿಲ್ಲ. ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು. ಕಾಂಗ್ರೆಸ್‌ನಿಂದ ಇದುವರೆಗೂ ಯಾರೂ ನನ್ನನ್ನು ಭೇಟಿ ಮಾಡಿಲ್ಲ.

ಸ್ಪರ್ಧೆ ಮಾಡುವಂತೆ ಒತ್ತಡವಿದೆ, ಮುಂದೆ ನೋಡುವುದಾಗಿ ಎಂದು ನುಡಿದರು.

ಸಿಎಂ ಸಿದ್ದರಾಮಯ್ಯ ರಾಜೀನಾಮೆ ಆಗ್ರಹ ವಿಚಾರವಾಗಿ ಪ್ರತಿಕ್ರಿಯಿಸಿ, ಕಾನೂನು ಪ್ರಕ್ರಿಯೆ ಈಗಷ್ಟೇ ಪ್ರಾರಂಭವಾಗಿದೆ. ಸಿಎಂ ಕಾನೂನು ಹೋರಾಟ ಮಾಡುತ್ತಿದ್ದಾರೆ. ನನಗೆ ಸ್ಪಷ್ಟ ಚಿತ್ರಣ ಇಲ್ಲ. ಮುಖ್ಯಮಂತ್ರಿಗಳು ಬಹಳ ಸೂಕ್ಷ್ಮಮತಿಯಿಂದ ಇದ್ದಾರೆ, ನೋಡೋಣ ಎಂದ ಯೋಗೇಶ್ವರ್‌, ಚುನಾವಣಾ ಬಾಂಡ್ ಪ್ರಕರಣ ಕೇಂದ್ರ ಸಚಿವರ ಮೇಲೆ ಎಫ್‌ಐಆರ್‌ ಆಗಿರುವ ಬಗ್ಗೆ ಕೇಳಿದಾಗ, ಇದರ ಬಗ್ಗೆ ನನಗೆ ಗೊತ್ತಿಲ್ಲ, ನಾನು ನೋಡಿಲ್ಲ ಎಂದು ಹೇಳಿ ಜಾರಿಕೊಂಡರು.

ಚನ್ನಪಟ್ಟಣಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಪದೇ ಪದೇ ಭೇಟಿ ನೀಡುತ್ತಿರುವ ಬಗ್ಗೆ ಕೇಳಿದಾಗ, ಉಪ ಚುನಾವಣೆಗಳು ಬಂದ ಸಂದರ್ಭದಲ್ಲಿ ಭೇಟಿ ನೀಡೋದು, ಘೋಷಣೆ ಮಾಡುವುದು ಸಹಜ‌. ಬಜೆಟ್‌ಗೂ ಉಪ ಚುನಾವಣೆ ಘೋಷಣೆಗೂ ವ್ಯತ್ಯಾಸ ಇದೆ. ಇಂತಹ ಕಾರ್ಯಕ್ರಮಗಳಿಗೆ ಅಷ್ಟೊಂದು ಮಹತ್ವ ಇಲ್ಲ ಎಂದಷ್ಟೇ ಹೇಳಿದರು.