ಸಾರಾಂಶ
ಊಟಕ್ಕೆ ಸೇರುವುದೇ ತಪ್ಪೇ?. ರಾಜಕಾರಣಿಗಳು ಒಂದು ಕಡೆ ಊಟಕ್ಕೆ ಸೇರಿದರೆ ಬಣ್ಣ ಕಟ್ಟಲಾಗುತ್ತೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.
ದಾವಣಗೆರೆ : ಊಟಕ್ಕೆ ಸೇರುವುದೇ ತಪ್ಪೇ?. ರಾಜಕಾರಣಿಗಳು ಒಂದು ಕಡೆ ಊಟಕ್ಕೆ ಸೇರಿದರೆ ಬಣ್ಣ ಕಟ್ಟಲಾಗುತ್ತೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಸಚಿವ ಸತೀಶ್ ಜಾರಕಿಹೊಳಿ ಮನೆಯಲ್ಲಿ ನಡೆದ ಡಿನ್ನರ್ ಪಾರ್ಟಿ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅವರ ಮನೆಯಲ್ಲಿ ಹಲವು ಸಚಿವರು ಸೇರಿದ್ದು, ಊಟ ಮಾಡಿದ್ದು ತಪ್ಪೇ ಎಂದು ಪ್ರಶ್ನಿಸಿದರು.
ಸತೀಶ್ ಮನೆಯಲ್ಲಿ ಯಾವುದೇ ರಾಜಕೀಯ ಚರ್ಚೆಗಳೂ ನಡೆದಿಲ್ಲ. ನಾವು ಊಟಕ್ಕೆ ಸೇರುವುದೇ ತಪ್ಪಾ?. ನಾವು ಊಟ ಮಾಡೋದು, ನೀವು ಊಟ ಮಾಡೋದು ಸೇಮ್. ಅದರಲ್ಲಿ ತಪ್ಪೇನಿದೆ? ಎಂದರು.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ, ಮುಖ್ಯಮಂತ್ರಿ ಬದಲಾವಣೆಯಂತಹ ವಿಷಯಗಳ ಬಗ್ಗೆ ನಮ್ಮ ಪಕ್ಷದ ವರಿಷ್ಟರು ತೀರ್ಮಾನ ಕೈಗೊಳ್ಳುತ್ತಾರೆ. ಖಾಲಿ ಇರುವ ಸಚಿವ ಸ್ಥಾನಗಳನ್ನು ತುಂಬುವ ಬಗ್ಗೆ ನಮ್ಮ ಪಕ್ಷದ ವರಿಷ್ಟರ ಜೊತೆಗೆ ಚರ್ಚಿಸುತ್ತೇವೆ. ನಾಗೇಂದ್ರ ಅವರ ರಾಜೀನಾಮೆಯಿಂದ ತೆರವಾದ ಸಚಿವ ಸ್ಥಾನವನ್ನು ತುಂಬುವ ಬಗ್ಗೆ ಪಕ್ಷದ ವರಿಷ್ಟರೊಂದಿಗೆ ಚರ್ಚಿಸುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ತಾಪಂ, ಜಿಪಂ ಚುನಾವಣೆ ಕುರಿತು ಪ್ರತಿಕ್ರಿಯಿಸಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆ ನಡೆಸಲು ನಾವು ಸಿದ್ಧರಿದ್ದೇವೆ. ಆದರೆ, ಆ ವಿಚಾರ ನ್ಯಾಯಾಲಯದ ಮೆಟ್ಟಿಲೇರಿದ್ದು, ಮೊದಲು ಅಲ್ಲಿ ಇತ್ಯರ್ಥಗೊಳ್ಳಬೇಕು ಎಂದು ಹೇಳಿದರು.
ಜಾತಿ ಗಣತಿ, ಒಳ ಮೀಸಲಾತಿ ಜಾರಿಗೆ ಬದ್ಧ:
ಜಾತಿ ಗಣತಿ ವಿಚಾರವಾಗಿ ಪ್ರತಿಕ್ರಿಯಿಸಿ, ಜಾತಿ ಜನಗಣತಿ ಪರವಾಗಿ ನಾನಿದ್ದೇನೆ. ಕಾಂತರಾಜ ಆಯೋಗದ ವರದಿ ಅನುಷ್ಟಾನಕ್ಕೆ ನಾನು ಬದ್ಧನಿದ್ದೇನೆ. ಮುಂದಿನ ಸಂಪುಟ ಸಭೆಯಲ್ಲಿ ಈ ವಿಚಾರ ಚರ್ಚಿಸುವ ಉದ್ದೇಶವೂ ಇದೆ ಎಂದರು.
ಸಮ ಸಮಾಜ ನಿರ್ಮಾಣ ಮಾಡಬೇಕೆಂಬುದು ನನ್ನ ಕನಸು. ಬಸವಣ್ಣ-ಅಂಬೇಡ್ಕರ್-ಕನಕದಾಸರ ಹಾದಿಯಲ್ಲಿ ನಡೆಯುವ ಪ್ರಯತ್ನವನ್ನು ನಾನು ಮಾಡುತ್ತಿದ್ದೇನೆ. ನಾನು ನನ್ನ ದಾರಿಯನ್ನು ಸ್ಪಷ್ಟಪಡಿಸಿಕೊಂಡಿದ್ದೀನಿ. ಹಾಗಾಗಿ, ಕಾಂತರಾಜ ವರದಿ ಅನುಷ್ಟಾನಕ್ಕೆ ನಾನು ಬದ್ಧ ಎಂದರು.
ಒಳ ಮೀಸಲಾತಿ ಕುರಿತು ಪ್ರತಿಕ್ರಿಯಿಸಿ, ಒಳಮೀಸಲಾತಿ ನೀಡುವಂತೆ ಸುಪ್ರೀಂಕೋರ್ಟ್ ಹೇಳಿದೆ. ಪ್ರಾಯೋಗಿಕ ಮಾಹಿತಿ ಇಲ್ಲದ ಕಾರಣಕ್ಕೆ ನಾಗಮೋಹನ ದಾಸ್ ನೇತೃತ್ವದ ಸಮಿತಿ ರಚಿಸಲಾಗಿದೆ. ಒಳಮೀಸಲಾತಿ ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬಸ್ ದರ ಹೆಚ್ಚಳಕ್ಕೆ ಸಮರ್ಥನೆ:
ಕೆಎಸ್ಸಾರ್ಟಿಸಿ ಬಸ್ ಪ್ರಯಾಣ ದರವನ್ನು ಹಿಂದೆ ಯಾವುದೇ ಸರ್ಕಾರವೂ ಹೆಚ್ಚಿಸಿರಲೇ ಇಲ್ಲವೇ?. ಹಿಂದೆ ಬಿಜೆಪಿ ಸರ್ಕಾರವಿದ್ದಾಗ, ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಬಸ್ ಪ್ರಯಾಣ ದರ ಹೆಚ್ಚು ಮಾಡಿರಲಿಲ್ಲವೇ?. ಕೇಂದ್ರ ಸರ್ಕಾರ ರೈಲ್ವೆ ಪ್ರಯಾಣ ದರ ಏರಿಕೆ ಮಾಡಿಲ್ಲವೇ?. ಎಲ್ಲಾ ಕಾಲದಲ್ಲೂ, ಎಲ್ಲಾ ಸರ್ಕಾರಗಳ ಅವಧಿಯಲ್ಲೂ ಬಸ್ ಪ್ರಯಾಣ ದರ ಹೆಚ್ಚಳವಾಗಿದೆ ಎಂದು ಬಸ್ ಪ್ರಯಾಣ ದರ ಏರಿಕೆಯನ್ನು ಸಮರ್ಥಿಸಿಕೊಂಡರು.
ನೌಕರರ ವೇತನ, ಡೀಸೆಲ್ ದರ ಏರಿಕೆ, ಹೊಸ ಬಸ್‌ಗಳ ಖರೀದಿ, ಹಣದುಬ್ಬರವೂ ಆಗುತ್ತಲೇ ಇರುತ್ತದೆ. ವರ್ಷಗಳ ಹಿಂದೆ ಬಸ್ ಪ್ರಯಾಣ ದರ ಹೆಚ್ಚಿಸಿದ್ದನ್ನು ಬಿಟ್ಚರೆ, ಈಗ ಏರಿಸಲಾಗಿದೆ. ರಾಜ್ಯದ ಸಾರಿಗೆ ನಿಗಮಗಳು ತೊಂದರೆಯಲ್ಲಿವೆ ಎಂಬ ಕಾರಣಕ್ಕೆ ಹಾಗೂ ಬೇಡಿಕೆಯೂ ಇದ್ದುದರಿಂದ ಬಸ್ ಪ್ರಯಾಣ ದರ ಏರಿಸಲಾಗಿದೆ. ರೈಲ್ವೆ ಪ್ರಯಾಣ ದರವನ್ನು ಕೇಂದ್ರ ಸರ್ಕಾರ ಹೆಚ್ಚಿಗೆ ಮಾಡಿದೆಯಲ್ಲವೇ ಎಂದು ಪ್ರಶ್ನಿಸಿದರು.
ವಿಶ್ವ ಕನ್ನಡ ಸಮ್ಮೇಳನ ಆಯೋಜನೆ ಕುರಿತು ಪ್ರತಿಕ್ರಿಯಿಸಿ, ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಮ್ಮೇಳನ ಆಯೋಜಿಸುವಂತೆ ಈ ಹಿಂದೆ ನಾನೇ ಸಿಎಂ ಆಗಿದ್ದಾಗ ಘೋಷಣೆ ಮಾಡಲಾಗಿತ್ತು. ಇದೀಗ ವಿಶ್ವ ಕನ್ನಡ ಸಮ್ಮೇಳನ ಆಯೋಜಿಸುವ ಬಗ್ಗೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ನೇತೃತ್ವದಲ್ಲಿ ಮನವಿ ಮಾಡಿದ್ದೀರಿ. ಈ ಬಗ್ಗೆ ಪರಿಶೀಲಿಸುತ್ತೇವೆ ಎಂದು ಹೇಳಿದರು.