ವಿಪ್ರೋ ಕ್ಯಾಂಪಸ್‌ನೊಳಗೆ ವಾಹನ ಸಂಚಾರಕ್ಕೆ ಅವಕಾಶ ಕೊಡಲ್ಲ: ಸಿಎಂ ಕೋರಿಕೆ ತಿರಸ್ಕಾರ

| N/A | Published : Sep 26 2025, 02:10 AM IST / Updated: Sep 26 2025, 05:45 AM IST

 azim premji and siddaramaiah
ವಿಪ್ರೋ ಕ್ಯಾಂಪಸ್‌ನೊಳಗೆ ವಾಹನ ಸಂಚಾರಕ್ಕೆ ಅವಕಾಶ ಕೊಡಲ್ಲ: ಸಿಎಂ ಕೋರಿಕೆ ತಿರಸ್ಕಾರ
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ಸರ್ಜಾಪುರದ ಔಟರ್ ರಿಂಗ್ ರೋಡ್‌ನಲ್ಲಿರುವ ವಿಪ್ರೋ ಕಂಪನಿಯ ಕ್ಯಾಂಪಸ್‌ನೊಳಗೆ ಸೀಮಿತ ಸಂಖ್ಯೆಯ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೋರಿಕೆಯನ್ನು ವಿಪ್ರೋ ಸಂಸ್ಥಾಪಕ ಅಧ್ಯಕ್ಷ ಅಜೀಂ ಪ್ರೇಮ್‌ಜೀ ತಿರಸ್ಕರಿಸಿದ್ದಾರೆ.

 ಬೆಂಗಳೂರು :  ನಗರದ ಸರ್ಜಾಪುರದ ಔಟರ್ ರಿಂಗ್ ರೋಡ್‌ನಲ್ಲಿರುವ ವಿಪ್ರೋ ಕಂಪನಿಯ ಕ್ಯಾಂಪಸ್‌ನೊಳಗೆ ಸೀಮಿತ ಸಂಖ್ಯೆಯ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೋರಿಕೆಯನ್ನು ವಿಪ್ರೋ ಸಂಸ್ಥಾಪಕ ಅಧ್ಯಕ್ಷ ಅಜೀಂ ಪ್ರೇಮ್‌ಜೀ ತಿರಸ್ಕರಿಸಿದ್ದಾರೆ.

ಆದರೆ, ಟ್ರಾಫಿಕ್ ಸಮಸ್ಯೆಗಳಿಗೆ ದೀರ್ಘಾವಧಿ ಪರಿಹಾರ ಕ್ರಮ ಕಂಡುಕೊಳ್ಳಲು ವಿಶ್ವದರ್ಜೆಯ ತಜ್ಞರ ಮೂಲಕ ಅಧ್ಯಯನಕ್ಕಾಗಿ ಸರ್ಕಾರಕ್ಕೆ ಆರ್ಥಿಕ ಮತ್ತು ಇತರ ನೆರವು ನೀಡಲು ಸಿದ್ಧವಿರುವುದಾಗಿ ಹೇಳಿದ್ದಾರೆ.

ಸೆ.19ರಂದು ಮುಖ್ಯಮಂತ್ರಿಯವರು ಬರೆದಿರುವ ಪತ್ರಕ್ಕೆ ಸೆ.24ರಂದು ಉತ್ತರಿಸಿರುವ ಪ್ರೇಮ್‌ಜೀ, ವಿಪ್ರೋ ಕಂಪನಿಯು ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ನೋಂದಣಿಯಾಗಿರುವ ಖಾಸಗಿ ಕಂಪನಿಯಾಗಿದ್ದು, ಅದಕ್ಕೆ ಸಂಬಂಧಿಸಿದಂತೆ ವಿಪ್ರೋ ಕ್ಯಾಂಪಸ್ ಖಾಸಗಿ ಆಸ್ತಿಯಾಗಿದೆ. ಹೀಗಾಗಿ, ಕ್ಯಾಂಪಸ್‌ನೊಳಗೆ ಸಾರ್ವಜನಿಕ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲು ಆಗುವುದಿಲ್ಲ. ಒಂದು ವೇಳೆ ಅನುಮತಿ ನೀಡಿದರೆ ದೊಡ್ಡ ಮಟ್ಟದ ಕಾನೂನಾತ್ಮಕ, ಆಡಳಿತಾತ್ಮಕ ಮತ್ತು ಶಾಸನಬದ್ಧ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

ಬೆಂಗಳೂರಿನ ಟ್ರಾಫಿಕ್ ದಟ್ಟಣೆಗೆ ಪರಿಹಾರ ಕಂಡುಕೊಳ್ಳಲು ಮುಖ್ಯಮಂತ್ರಿಯವರ ನಾಯಕತ್ವ, ಉಪಕ್ರಮದ ಬಗ್ಗೆ ನಾನು ಮೆಚ್ಚುಗೆ ವ್ಯಕ್ತಪಡಿಸುತ್ತೇನೆ. ಆದರೆ, ಖಾಸಗಿ ಆಸ್ತಿಯೊಳಗೆ ಸಾರ್ವಜನಿಕ ವಾಹನಗಳ ಸಂಚಾರಕ್ಕೆ ಅನುವು ಮಾಡುವುದು ದೀರ್ಘಾವಧಿಗೆ ಪರಿಹಾರವಲ್ಲ. ಪರಿಣಾಮಕಾರಿಯು ಮತ್ತು ಸುಸ್ಥಿರವಾಗಿರುವುದಿಲ್ಲ. ಇನ್ನು ನಮ್ಮ ಸರ್ಜಾಪುರ ಕ್ಯಾಂಪಸ್ ವಿಶೇಷ ಆರ್ಥಿಕ ವಲಯದಲ್ಲಿ ಬರುತ್ತದೆ. ಜಾಗತಿಕ ಗ್ರಾಹಕರಿಗೆ ಸೇವೆಗಳನ್ನು ಒದಗಿಸಲಾಗುತ್ತದೆ. ಹೀಗಾಗಿ, ಆಡಳಿತ ಮತ್ತು ನೀತಿ, ನಿಯಮಗಳಿಗೆ ಸಂಬಂಧಿಸಿದಂತೆ ಮಾಡಿಕೊಂಡಿರುವ ಷರತ್ತುಗಳು ಅತ್ಯಂತ ಕಠಿಣವಾಗಿದ್ದು, ಯಾವುದೇ ಬದಲಾವಣೆಗೆ ಒಳಪಡುವುದಿಲ್ಲ ಎಂದು ಪ್ರೇಮ್‌ಜೀ ಸಿಎಂಗೆ ನೀಡಿರುವ ಉತ್ತರದಲ್ಲಿ ತಿಳಿಸಿದ್ದಾರೆ.

ಟ್ರಾಫಿಕ್ ಪರಿಹಾರಕ್ಕೆ ಸಹಕಾರ:

ನಗರದ ಸಾರಿಗೆ ಸಮಸ್ಯೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರದ ಜೊತೆ ನಾವು ನಿಲ್ಲುತ್ತೇವೆ. ಪರಸ್ಪರ ಸಹಭಾಗಿತ್ವ, ಡೆಟಾ ಆಧಾರಿತ ಪರಿಹಾರ ಕ್ರಮಗಳಿಂದ ನಗರದ ಸಮಸ್ಯೆಗೆ ಪರಿಣಾಮಕಾರಿ ಪರಿಹಾರ ಹುಡುಕಬಹುದು. ನಗರದ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ತಜ್ಞರ ಮೂಲಕ ಅಧ್ಯಯನ ನಡೆಸಲು ಸರ್ಕಾರದೊಂದಿಗೆ ಕೆಲಸ ಮಾಡುತ್ತೇವೆ ಮತ್ತು ಅದಕ್ಕೆ ಬೇಕಾಗುವ ಆರ್ಥಿಕ ವೆಚ್ಚವನ್ನು ಭರಿಸಲು ಸಿದ್ದರಿದ್ದೇವೆ ಎಂದು ಅಜೀಂ ಪ್ರೇಮ್‌ಜೀ ಹೇಳಿದ್ದಾರೆ.

ರಫ್ತು ಕೇಂದ್ರಿತ ತಾಣವಾಗಿರುವ ಬೆಂಗಳೂರು ಟ್ರಾಫಿಕ್ ದಟ್ಟಣೆಯನ್ನು ಸರಿಪಡಿಸಲು, ಅದರಲ್ಲೂ ರಿಂಗ್ ರಸ್ತೆಯಲ್ಲಿ ಪರಿಹಾರ ಕಂಡುಕೊಳ್ಳುವುದು ಬಹಳ ತುರ್ತು ಅಗತ್ಯವಿದೆ. ಟ್ರಾಫಿಕ್‌ ಸಮಸ್ಯೆಯು ಸಂಕೀರ್ಣವಾಗಿದ್ದು, ಅದಕ್ಕೆ ಅನೇಕ ಕಾರಣಗಳಿವೆ. ಯಾವುದೇ ಒಂದು ಪರಿಹಾರ ಕ್ರಮದಿಂದ ಟ್ರಾಫಿಕ್ ಪರಿಹಾರ ಸಿಗುವುದಿಲ್ಲ. ಹೀಗಾಗಿ, ನಗರ ಸಾರಿಗೆ ನಿರ್ವಹಣೆಯಲ್ಲಿ ವಿಶ್ವದರ್ಜೆಯ ಅನುಭವ ಹೊಂದಿರುವ ಸಂಸ್ಥೆಯ ಮೂಲಕ ಸಮಗ್ರ ವೈಜ್ಞಾನಿಕ ಅಧ್ಯಯನ ನಡೆಸಬೇಕು.

ಅಧ್ಯಯನದ ಮೂಲಕ ಸಮಗ್ರ ಪರಿಹಾರೋಪಾಯಗಳನ್ನು ಕಂಡು ಹಿಡಿಯಲು ಸಾಧ್ಯವಾಗುತ್ತದೆ. ಆ ಮೂಲಕ ತುರ್ತು ಕ್ರಮಗಳು, ಮಧ್ಯಮ ಅವಧಿ ಮತ್ತು ದೀರ್ಘಾವಧಿಯಲ್ಲಿ ಟ್ರಾಫಿಕ್ ಸಮಸ್ಯೆಗಳಿಗೆ ಪರಿಣಾಮಕಾರಿ ಪರಿಹಾರ ಕ್ರಮಗಳನ್ನು ಕಂಡು ಹಿಡಿಯಬಹುದು ಎಂದು ಅಜೀಂ ಹೇಳಿದ್ದಾರೆ.

Read more Articles on