ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಟಾರ್ ಚಂದ್ರು ಅವರು ಏ.1ರಂದು ಉಮೇದುವಾರಿಕೆ ಸಲ್ಲಿಸಲಿದ್ದಾರೆ ಎಂದು ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.ಅಂದು ಬೆಳಗ್ಗೆ 9 ಗಂಟೆಗೆ ನಗರದ ಶ್ರೀ ಕಾಳಿಕಾಂಬ ದೇವಾಲಯದಲ್ಲಿ ಪೂಜೆ ಸಲ್ಲಿಸಿ ನಂತರ ಮೆರವಣಿಗೆಯೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಮಧ್ಯಾಹ್ನ 1 ಗಂಟೆ ವೇಳೆಗೆ ನಾಮಪತ್ರ ಸಲ್ಲಿಸಲಿದ್ದಾರೆ. ಈ ನಾಮಪತ್ರಸಲ್ಲಿಕೆ ಕಾರ್ಯಕ್ರಮಕ್ಕೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸುರ್ಜೇವಾಲ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಗಮಿಸುವರು. ಮುಖ್ಯಮಂತ್ರಿ ಸಿದ್ದರಾಮಯ್ಯ ಬರುವ ಸಾಧ್ಯತೆ ಇದ್ದು, ಒಂದು ಲಕ್ಷಕ್ಕೂ ಹೆಚ್ಚು ಜನರು ಮೆರವಣಿಗೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಒಂದು ತಿಂಗಳ ಹಿಂದೆಯೇ ಸ್ಟಾರ್ ಚಂದ್ರು ಅವರನ್ನು ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿತ್ತು. ಈಗಾಗಲೇ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಂದು ಸುತ್ತಿನ ಪ್ರಚಾರ ಸಭೆ ಮುಗಿದಿದೆ. ಗ್ರಾಪಂ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಿದ್ದೇವೆ. ಮಂಡ್ಯ ಜಿಲ್ಲೆಯ ಜನರು ಕಾಂಗ್ರೆಸ್‌ನ್ನು ಏಕೆ ಬೆಂಬಲಿಸಬೇಕು ಎಂಬುದನ್ನು ನಾಮಪತ್ರ ಸಲ್ಲಿಸಿದ ನಂತರ ತಿಳಿಸುವುದಾಗಿ ಹೇಳಿದರು.
ಸತ್ಯ-ಧರ್ಮಕ್ಕೆ ಗೆಲುವು:ಚುನಾವಣೆಯಲ್ಲಿ ಸತ್ಯ ಹಾಗೂ ಧರ್ಮಕ್ಕೆ ಗೆಲುವು. ಕುಮಾರಸ್ವಾಮಿ ಅವರ ಬಳಿಯೇ ಸತ್ಯ ಇದೆ ಅಂದುಕೊಂಡಿದ್ದಾರೆ. ನಮ್ಮ ಬಳಿಯೂ ಸತ್ಯ-ಧರ್ಮ ಇದೆ. ಕುಮಾರಸ್ವಾಮಿ ಧರ್ಮಯುದ್ಧ ಎಂದಿದ್ದಾರೆ. ಬಹುಶಃ ಅವರದ್ದು ಬಿಜೆಪಿ ಧರ್ಮ ಇರಬೇಕು ಎಂದು ವ್ಯಂಗ್ಯವಾಡಿದರು.
ಕುಮಾರಸ್ವಾಮಿ ಅವರಿಗಿಂತಲೂ ಹೆಚ್ಚು ಭಾವನೆ ನಮಗಿದೆ. ಇದು ನಮ್ಮ ಜನ್ಮಭೂಮಿ. ಇಲ್ಲೇ ಹುಟ್ಟಿ, ಬೆಳೆದು, ವ್ಯಾಪಾರ-ವಹಿವಾಟು ನಡೆಸಿ, ಇದೇ ನೆಲದಲ್ಲಿ ರಾಜಕೀಯ ಮಾಡುತ್ತಿದ್ದೇವೆ. ಅದಕ್ಕೆ ನಮಗೆ ಕುಮಾರಸ್ವಾಮಿಗಿಂತಲೂ ಹೆಚ್ಚು ಭಾವನಾತ್ಮಕತೆ ಈ ಜಿಲ್ಲೆಯೊಂದಿಗೆ ಇದೆ ಎಂದರು.ಸುಮಲತಾ ನಿರ್ಧಾರ ಪ್ರಕಟಿಸಲಿ:
ಸಂಸದೆ ಸುಮಲತಾ ಅವರಿಗೆ ನಾನು ಏನೂ ಹೇಳೋಲ್ಲ. ಅವರು ಏನು ಬೇಕಾದರೂ ತೀರ್ಮಾನ ಮಾಡಲಿ. ಅದಕ್ಕೆ ನನ್ನ ಆಕ್ಷೇಪ ಇಲ್ಲ. ಅವರ ಬೆಂಬಲಿಗರು ಜೆಡಿಎಸ್‌ಗೆ ಹೇಗೆ ಕೆಲಸ ಮಾಡೋದು ಎಂದು ಹೇಳುತ್ತಿದ್ದಾರೆ. ನಾಳೆ ಸುಮಲತಾ ಅವರು ಬೆಂಬಲಿಗರ ಸಭೆ ಕರೆದಿದ್ದಾರೆ. ಸಭೆಯ ಬಳಿಕ ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ನೋಡೋಣ ಎಂದಷ್ಟೇ ಹೇಳಿದರು.ಕುಮಾರಸ್ವಾಮಿ ಅವರು ಸುಮಲತಾ ಅವರನ್ನು ಅಕ್ಕ ಅಂದಿದ್ದಾರೆ. ಇದೊಂದು ವಿಪರ್ಯಾಸ ಎಂದ ಚಲುವರಾಯಸ್ವಾಮಿ, ನಾನು ಕುಮಾರಸ್ವಾಮಿ ಅವರನ್ನು ಯಾವಾಗಲೂ ಸ್ನೇಹಿತರು ಎಂದೇ ಕರೆದಿದ್ದೇನೆ. ಅವರು ಮಾತ್ರ ನನ್ನನ್ನು ಅಜನ್ಮ ಶತ್ರು ಎಂದಿದ್ದಾರೆ. ಇನ್ನೂ ಏನು ಮಾತಾಡುತ್ತಾರೆ ಅಂತ ಮುಂದೆ ನೋಡೋಣ ಎಂದರು.
ಸುದ್ದಿಗೋಷ್ಠಿಯಲ್ಲಿ ಅಭ್ಯರ್ಥಿ ಸ್ಟಾರ್ ಚಂದ್ರು, ಶಾಸಕ ಪಿ.ರವಿಕುಮಾರ್, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಕಾರ್ಯಾಧ್ಯಕ್ಷ ಎಂ.ಎಸ್.ಚಿದಂಬರ್, ವಿಜಯಲಕ್ಷ್ಮೀ, ಸುರೇಶ್ ಇದ್ದರು.