ಸಾರಾಂಶ
‘ಮುಖ್ಯಮಂತ್ರಿ ಸಿದ್ಧರಾಮಯ್ಯ 11 ಕೆವಿ ಕರೆಂಟ್ ಅಲ್ಲ. ಅದು 660 ಕೆವಿ ಕರೆಂಟ್. ಅವರನ್ನು ಮುಟ್ಟೋದು ಅಷ್ಟು ಸುಲಭವಲ್ಲ’ ಎಂದು ಬಿಜೆಪಿ ಶಾಸಕ ಮುನಿರತ್ನ ಹಾಡಿ ಹೊಗಳಿದ್ದಾರೆ.
ಬೆಂಗಳೂರು : ‘ಮುಖ್ಯಮಂತ್ರಿ ಸಿದ್ಧರಾಮಯ್ಯ 11 ಕೆವಿ ಕರೆಂಟ್ ಅಲ್ಲ. ಅದು 660 ಕೆವಿ ಕರೆಂಟ್. ಅವರನ್ನು ಮುಟ್ಟೋದು ಅಷ್ಟು ಸುಲಭವಲ್ಲ’ ಎಂದು ಬಿಜೆಪಿ ಶಾಸಕ ಮುನಿರತ್ನ ಹಾಡಿ ಹೊಗಳಿದ್ದಾರೆ.
ಸೋಮವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ಸಿದ್ಧರಾಮಯ್ಯ ಅವರು ಸರ್ಕಾರದಿಂದ ಆಚೆ ಹೋದರೆ ಏನಾಗುತ್ತೋ ಗೊತ್ತಿಲ್ಲ. ಅವರನ್ನು ಮುಟ್ಟಿ ಗೆದ್ದು ಚಲಾವಣೆ ಆಗುತ್ತೇವೆ ಎಂಬುದು ಭ್ರಮೆ. ಆ ರೀತಿ ಭಾವಿಸುವುದು ಬಹಳ ತಪ್ಪು ಎಂದು ಸಿದ್ಧರಾಮಯ್ಯ ಪರ ಬ್ಯಾಟ್ ಬೀಸಿದರು.
ನಾನು ಸಿದ್ದರಾಮಯ್ಯ ಅವರೊಂದಿಗೆ ಐದು ವರ್ಷಗಳ ಕಾಲ ಕೆಲಸ ಮಾಡಿದ್ದೇನೆ. ನಾನು ಅವರೊಂದಿಗೆ ಒಡನಾಟ ಇರಿಸಿಕೊಂಡಿದ್ದವನು. ಅವರ ಮನಸ್ಥಿತಿ ಬಗ್ಗೆ ಗೊತ್ತಿರುವವನು. ಅವರ ಶಕ್ತಿ ಬಗ್ಗೆ ನೋಡಿದವನು. ಇವತ್ತು ಒಂದು ಭಾಷಣಕ್ಕೆ ಸಿದ್ಧರಾಮಯ್ಯ ಹೋಗುತ್ತಾರೆ ಎಂದರೆ ಜನ ಕಾಯುತ್ತಾರೆ. ಇಂಥ ವ್ಯಕ್ತಿ ಕಾಂಗ್ರೆಸ್‌ನಲ್ಲಿ ಬೇರೆ ಯಾರು ಇದ್ದಾರೆ? ಯಾರೂ ಇಲ್ಲ. 500 ರು. ಕೊಟ್ಟು ಜನ ಕರೆತಂದು ಶೋ ತೋರಿಸಬೇಕು. ಆದರೆ, ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ಒಂದು ಕರೆ ನೀಡಿದರೆ 10 ಲಕ್ಷ ಜನ ಸೇರುತ್ತಾರೆ. ಇದು ಸಿದ್ದರಾಮಯ್ಯ ಅವರ ಶಕ್ತಿ ಎಂದು ಗುಣಗಾನ ಮಾಡಿದರು.
ಒಂದೇ ಪಕ್ಷದಲ್ಲಿ ಮೈತ್ರಿ ಇದೆ: ನಾವು 17 ಜನ ಕಾಂಗ್ರೆಸ್ ಬಿಟ್ಟಾಗ ಕಣ್ಣಿಗೆ ಕಾಣುವ ಮೈತ್ರಿ ಸರ್ಕಾರ ಇತ್ತು. ಈಗ ಕಣ್ಣಿಗೆ ಕಾಣದ ಮೈತ್ರಿ ಸರ್ಕಾರವಿದೆ. ಅವತ್ತು ಉಪಮುಖ್ಯಮಂತ್ರಿ ಆಗಿದ್ದವರು ಮುಖ್ಯಮಂತ್ರಿ ರೀತಿ ಇದ್ದರು. ಇವತ್ತು ಹಾಗೆಯೇ ಇದೆ. ಎಚ್.ಡಿ.ಕುಮಾರಸ್ವಾಮಿ ಜಾಗದಲ್ಲಿ ಸಿದ್ದರಾಮಯ್ಯ, ಅವತ್ತಿನ ಡಾ.ಜಿ.ಪರಮೇಶ್ವರ್ ಸ್ಥಾನದಲ್ಲಿ ಇವತ್ತಿನ ಉಪಮುಖ್ಯಮಂತ್ರಿ ಇದ್ದಾರೆ. ಇದರಲ್ಲಿ ಏನೂ ವ್ಯತ್ಯಾಸವಿಲ್ಲ. ಅವತ್ತು ಎರಡು ಪಕ್ಷಗಳ ಮೈತ್ರಿ ಇತ್ತು. ಇವತ್ತು ಒಂದೇ ಪಕ್ಷದಲ್ಲಿ ಮೈತ್ರಿ ಇದೆ ಎಂದು ಪರೋಕ್ಷವಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಟಾಂಗ್ ನೀಡಿದರು.
ಸಿದ್ದು ಒಂದು ಬೆರಳು ಆಚೆ ಇಟ್ಟರೂ ಶೂನ್ಯ: ಸಿದ್ದರಾಮಯ್ಯ ಅಲ್ಲಿ ಇರುವವರೆಗೂ 136 ಸೀಟು ಇರುತ್ತದೆ. ಅವರು ಒಂದು ಕಾಲು ಅಲ್ಲ, ಒಂದು ಬೆರಳು ಹೊರೆಗೆ ಇಟ್ಟರೂ ಕಾಂಗ್ರೆಸ್ ಶೂನ್ಯವಾಗುತ್ತದೆ. ಇದು ಅವರನ್ನು ಹೊಗಳುವುದಲ್ಲ. ಹೆಚ್ಚು-ಕಡಿಮೆ ಆದರೆ ನಾವು ಎಚ್ಚರದಿಂದ ಇರಬೇಕು. ಯಾವುದೇ ಕ್ಷಣದಲ್ಲಿ ಚುನಾವಣೆ ಎದುರಿಸಲು ಸಿದ್ಧರಿರಬೇಕು ಎಂದು ಹೇಳುತ್ತಿದ್ದೇನೆ ಎಂದು ಮುನಿರತ್ನ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ನಾನು ಸಿದ್ದರಾಮಯ್ಯ ಅವರನ್ನು ಹೊಸದಾಗಿ ನೋಡಿ ಮಾತನಾಡುತ್ತಿಲ್ಲ. ಅವರೊಂದಿಗೆ ಒಡನಾಟ, ಪರಿಚಯ ಇದ್ದುದ್ದರಿಂದ ಹೇಳುತ್ತಿದ್ದೇನೆ. ನನ್ನ ಕೊನೆ ಉಸಿರು ಇರೋವರೆಗೂ ಬಿಜೆಪಿಯಲ್ಲೇ ಇರುತ್ತೇನೆ. ಇದರಲ್ಲಿ ಎರಡು ಮಾತೇ ಇಲ್ಲ. ಇದು ಸ್ಪಷ್ಟ. ನಾನು ಸಿದ್ದರಾಮಯ್ಯ ಶಕ್ತಿ ಬಗ್ಗೆ ಹೇಳುತ್ತಿದ್ದೇನೆ. ಅವರನ್ನು ಇವರು ಮುಟ್ಟಿದರೂ ಚುನಾವಣೆ ಬರಲಿದೆ. ನಾವು ಎಚ್ಚರಿಕೆಯಿಂದ ಇರಬೇಕು ಎಂದು ಹೇಳುತ್ತಿದ್ದೇನೆ ಎಂದರು.
-ಹಿಂದೆ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಸೂಚಿಸಿದ ಒಂದೇ ಹೆಸರು ಆರ್.ಅಶೋಕ್. ಅವರು ಹಿರಿಯರು. ಅವರು ಮಧ್ಯಸ್ಥಿಕೆ ವಹಿಸಿ ಗೊಂದಲ ಸರಿಪಡಿಸಬೇಕು. ಇದು ಅಶೋಕ್ ಹಿರಿತನಕ್ಕೂ, ಅನುಭವಕ್ಕೂ ಗೌರವ ತರುತ್ತದೆ
-ಮುನಿರತ್ನ, ಬಿಜೆಪಿ ಶಾಸಕ