ಈಗ ಗವರ್ನರ್‌ - ಸಿಎಂ ಮಧ್ಯೆ ಕನ್ನಡ-ಇಂಗ್ಲಿಷ್‌ ವಿಭಿನ್ನ ಸಹಿ ವಿಚಾರಕ್ಕೆ ಪುನಃ ಪತ್ರ ಸಂಘರ್ಷ!

| Published : Sep 24 2024, 11:31 AM IST

thavar chand gehlot

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಲವು ಕಡತಗಳಿಗೆ ಇಂಗ್ಲಿಷ್‌ನಲ್ಲಿ ಸಹಿ ಮಾಡಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿ ಸಲ್ಲಿಕೆಯಾಗಿರುವ ದೂರುಗಳ ಆಧಾರದ ಮೇಲೆ ರಾಜ್ಯಪಾಲರು ಸರ್ಕಾರದಿಂದ ವರದಿ ಕೋರಿದ್ದಾರೆ.

ಬೆಂಗಳೂರು :  ವಿವಿಧ ಪ್ರಕರಣ ಸಂಬಂಧ ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಜಟಾಪಟಿ ಮುಂದುವರೆದಿರುವಾಗಲೇ, ರಾಜ್ಯಪಾಲರು ಮತ್ತೊಂದು ಪ್ರಕರಣದಲ್ಲಿ ಮಾಹಿತಿ ಕೋರಿ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದ್ದಾರೆ.

 ಈ ಪ್ರಕರಣ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಬಂಧಿಸಿದ್ದು ಎಂಬುದು ವಿಶೇಷ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಲ ಕಡತಗಳಿಗೆ ಇಂಗ್ಲಿಷ್‌ನಲ್ಲಿ, ಇನ್ನು ಕೆಲವು ಪ್ರಕರಣಗಳಲ್ಲಿ ಕನ್ನಡದಲ್ಲಿ ಸಹಿ ಮಾಡಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿ ಸಲ್ಲಿಕೆಯಾಗಿರುವ ಎರಡು ಪ್ರತ್ಯೇಕ ದೂರು ಆಧರಿಸಿ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಅವರು ಇತ್ತೀಚೆಗೆ ಸರ್ಕಾರದಿಂದ ವರದಿ ಕೇಳಿರುವುದಾಗಿ ತಿಳಿದುಬಂದಿದೆ. 

ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ಆ.24 ರಂದು ರಾಜ್ಯಪಾಲರಿಗೆ ಪತ್ರ ಬರೆದು ಮುಖ್ಯಮಂತ್ರಿಗಳ ಸಹಿ ನಕಲಿ ಆಗಿರುವ ಗುಮಾನಿ ವ್ಯಕ್ತಪಡಿಸಿದ್ದರು. ಅಲ್ಲದೆ ಈ ಬಗ್ಗೆ ಲೋಕಾಯುಕ್ತ ಮೂಲಕ ತನಿಖೆ ನಡೆಸುವಂತೆ ಕೋರಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಲವು ಕಡತಗಳಲ್ಲಿ ಕನ್ನಡದಲ್ಲೇ ಸಹಿ ಮಾಡಿರುವುದನ್ನು ಗಮನಿಸಿದ್ದೇವೆ. ಆದರೆ ಮುಖ್ಯಮಂತ್ರಿಗಳು ಲೋಕಾಯುಕ್ತಗೆ ಸಲ್ಲಿಸಿರುವ ಆಸ್ತಿ ವಿವರದ ಪ್ರಮಾಣ ಪತ್ರದಲ್ಲಿ ಹಾಗೂ ಮುಡಾ ಪ್ರಕರಣ ಕುರಿತು ರಾಜ್ಯಪಾಲರಿಗೆ ನೀಡಿರುವ ಸ್ಪಷ್ಟನೆಯಲ್ಲಿ ಇಂಗ್ಲೀಷ್‌ ಸಹಿ ಬಳಸಿದ್ದಾರೆ. 

ಈ ಬಗ್ಗೆ ತನಿಖೆಯಾಗಬೇಕು ಎಂದು ಮನವಿ ಮಾಡಿದ್ದರು. ಇದೇ ವೇಳೆ ವರುಣಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮುಡಾ ಕಾಮಗಾರಿಗಳ ಕಡತಗಳಲ್ಲಿ ಕೂಡಾ ಮುಖ್ಯಮಂತ್ರಿಗಳು ಇಂಗ್ಲಿಷ್‌ ಸಹಿ ಮಾಡಿದ್ದಾರೆ. 

ಈ ಬಗ್ಗೆ ತನಿಖೆ ನಡೆಸಬೇಕು ಎಂದು ನಟರಾಜ್‌ ಎಂಬುವವರು ಕೂಡಾ ಇತ್ತೀಚೆಗೆ ರಾಜ್ಯಪಾಲರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯಪಾಲರು ಇತ್ತೀಚೆಗೆ ಮುಖ್ಯಕಾರ್ಯದರ್ಶಿಗಳಿಂದ ವರದಿ ಕೇಳಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ಇಂತಹ ಕ್ಷುಲ್ಲಕ ವಿಚಾರಕ್ಕೆ ರಾಜ್ಯಪಾಲರು ವರದಿ ಕೇಳುತ್ತಿದ್ದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.