ಸಚಿವ ಸ್ಥಾನಕ್ಕೆ ಬಹಿರಂಗವಾಗಿಯೇ ಕೈ ಶಾಸಕರ ಪೈಪೋಟಿ - ಸಂಪುಟ ಪುನರ್ ರಚನೆ ಚರ್ಚೆ ಜೋರು

| Published : Nov 30 2024, 12:05 PM IST

DKS Siddu

ಸಾರಾಂಶ

ಬೆಳಗಾವಿ ಚಳಿಗಾಲ ಅಧಿವೇಶನದ ಬಳಿಕ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸಂಪುಟ ಪುನರ್‌ ರಚನೆ ಸೇರಿ ಕೈ ಪಾಳಯದಲ್ಲಿ ಭಾರಿ ಬದಲಾವಣೆ ಆಗಲಿದೆ ಎಂಬ ಚರ್ಚೆ ಜೋರಾಗಿದ್ದು, ಮೊದಲ ಅವಧಿಯಲ್ಲಿ ಮಂತ್ರಿಗಿರಿ ಕೈ ತಪ್ಪಿದ ನಾಯಕರು ಈ ಬಾರಿಯಾದರೂ ಶತಾಯಗತಾಯ ಕ್ಯಾಬಿನೆಟ್‌ಗೆ ಸೇರ್ಪಡೆ ಆಗಲೆಬೇಕೆಂದು ಪ್ರಯತ್ನ 

ಬೆಂಗಳೂರು : ಬೆಳಗಾವಿ ಚಳಿಗಾಲ ಅಧಿವೇಶನದ ಬಳಿಕ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸಂಪುಟ ಪುನರ್‌ ರಚನೆ ಸೇರಿ ಕೈ ಪಾಳಯದಲ್ಲಿ ಭಾರಿ ಬದಲಾವಣೆ ಆಗಲಿದೆ ಎಂಬ ಚರ್ಚೆ ಜೋರಾಗಿದ್ದು, ಮೊದಲ ಅವಧಿಯಲ್ಲಿ ಮಂತ್ರಿಗಿರಿ ಕೈ ತಪ್ಪಿದ ನಾಯಕರು ಈ ಬಾರಿಯಾದರೂ ಶತಾಯಗತಾಯ ಕ್ಯಾಬಿನೆಟ್‌ಗೆ ಸೇರ್ಪಡೆ ಆಗಲೆಬೇಕೆಂದು ಪ್ರಯತ್ನ ನಡೆಸಿದ್ದಾರೆ.

ಶಾಸಕರಾದ ತನ್ವೀರ್ ಸೇಠ್‌, ಎಚ್.ಸಿ.ಬಾಲಕೃಷ್ಣ, ಸಿ.ಪಿ.ಯೋಗೇಶ್ವರ್‌, ಪುಟ್ಟರಂಗಶೆಟ್ಟಿ, ರಾಜು ಕಾಗೆ ಸೇರಿ ಕಾಂಗ್ರೆಸ್‌ನ ಹಿರಿಯ ನಾಯಕರು ಶುಕ್ರವಾರ ಬಹಿರಂಗವಾಗಿಯೇ ತಮ್ಮ ಆಸೆಯನ್ನು ಪ್ರಸ್ತುತಪಡಿಸಿದ್ದು, ವಿವಿಧ ಕೋಟಾದಡಿ ಸಚಿವರನ್ನಾಗಿ ಮಾಡುವಂತೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಮಾಡಿದ್ದಾರೆ.

ಮೈಸೂರಲ್ಲಿ ಮಾತನಾಡಿದ ಶಾಸಕ ತನ್ವೀರ್ ಸೇಠ್ ಅವರು, ನಾನು ಸಹ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದು, ವರಿಷ್ಠರು ಯಾವುದೇ ಜವಾಬ್ದಾರಿ ಕೊಟ್ಟರೂ ನಿಭಾಯಿಸಲು ಶಕ್ತನಾಗಿದ್ದೇನೆ. 7 ಸಚಿವ ಸ್ಥಾನ ಬದಲಿಸುವ ಸಾಧ್ಯತೆ ಇದ್ದು, 20 ಶಾಸಕರು ಆಕಾಂಕ್ಷಿಗಳಾಗಿದ್ದಾರೆ. ಸಚಿವ ಜಮೀರ್ ಅವರನ್ನು ತೆಗೆದು ನನಗೆ ಕೊಡ್ತಾರೆ ಅಂದುಕೊಂಡಿಲ್ಲ. ಈ ಬಾರಿ ನನಗೆ ಸಚಿವ ಸ್ಥಾನ ಸಿಗುವ ಭರವಸೆ ಇದೆ. ನಾನು ಯಾವುದೇ ವ್ಯಕ್ತಿ ಪೂಜೆ ಮಾಡಲ್ಲ. ಸಚಿವ ಸ್ಥಾನ ಕೊಟ್ಟರೆ ನಿಭಾಯಿಸ್ತೇನೆ, ಇಲ್ಲವಾದರೆ ಜನರ ಸೇವೆ ಮಾಡುತ್ತೇನೆ ಎಂದು ಹೇಳಿದ್ದಾರೆ.

ಸೀನಿಯಾರಿಟಿ ಅಡಿ ಕೊಡಲಿ: ಬಾಲಕೃಷ್ಣ

ಶಾಸಕ ಎಚ್.ಸಿ.ಬಾಲಕೃಷ್ಣ ಅವರು ರಾಮನಗರದಲ್ಲಿ ಮಾತನಾಡಿ, ಡಿಸಿಎಂ ಹುದ್ದೆ ಬಿಟ್ಟು ಸೀನಿಯರ್ ಕೋಟಾದಲ್ಲಿ ರಾಮನಗರ ಜಿಲ್ಲೆಗೆ ಒಂದು ಸಚಿವ ಸ್ಥಾನ ಕೊಡಬೇಕು. ನಾನು ಸೀನಿಯರ್ ಇರುವುದರಿಂದ ಸಚಿವ ಸ್ಥಾನ ನೀಡುವಂತೆ ಮನವಿ ಮಾಡಿದ್ದೇನೆ. ಯೋಗೇಶ್ವರ್ ಕೂಡ ನನ್ನ ಪರವಾಗಿದ್ದಾರೆ. ರೋಡಲ್ಲಿ ನಿಂತುಕೊಂಡು ಕೇಳಲು ಆಗಲ್ಲ. ಎಲ್ಲಿ ಕೇಳಬೇಕು ಅಲ್ಲಿ ಕೇಳಿದ್ದೇವೆ. ಪರಿಗಣಿಸುತ್ತಾರೆಂಬ ವಿಶ್ವಾಸವಿದೆ ಎಂದರು.

ಸಿಎಂ ಮನಸ್ಸಿನಲ್ಲಿದ್ದೇನೆ: ಪುಟ್ಟರಂಗಶೆಟ್ಟಿ

ಎಂಎಸ್ಐಎಲ್ ನಿಗಮದ ಅಧ್ಯಕ್ಷ ಪುಟ್ಟರಂಗಶೆಟ್ಟಿ ಅವರು ಚಾಮರಾಜನಗರದಲ್ಲಿ ಮಾತನಾಡಿ, ನಾನು ಸಿಎಂ ಸಿದ್ದರಾಮಯ್ಯ ಅವರ ಮನಸ್ಸಿನಲ್ಲಿದ್ದು, ಸಚಿವ ಸ್ಥಾನ ಕೊಟ್ಟೆ ಕೊಡ್ತಾರೆ. ಕಳೆದ ಬಾರಿಯೇ ಸಚಿವ ಸ್ಥಾನ ಕೊಡಬೇಕೆಂದು ತೀರ್ಮಾನವಾಗಿತ್ತು ಕಾರಣಾಂತರದಿಂದ ತಪ್ಪಿತ್ತು. ಆಗ ಸಿದ್ದರಾಮಯ್ಯ ಅವರು ನೀಡಿದ ಉಪಸಭಾಪತಿ ಆಫರ್ ನಿರಾಕರಿಸಿದ್ದೆ. ಈ ಬಾರಿ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ ಎಂದರು.

ಯಾವುದೇ ಖಾತೆ ಕೊಟ್ಟರೂ

ನಿಭಾಯಿಸುವೆ: ರಾಜು ಕಾಗೆ

ಚಿಕ್ಕೋಡಿಯಲ್ಲಿ ಮಾತನಾಡಿದ ಶಾಸಕ ರಾಜು ಕಾಗೆ ಅವರು, ನಾನೂ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದು, ಯಾವುದೇ ಖಾತೆ ಕೊಟ್ಟರೂ ಸೂಕ್ತವಾಗಿ ನಿಭಾಯಿಸುವೆ. ಈ ಹಿಂದೆ ಡಿಸಿಎಂ ಸ್ಥಾನ ನಿಭಾಯಿಸಿದ ಶಾಸಕ ಲಕ್ಷ್ಮಣ ಸವದಿ ಅವರಿಗೆ ಸಚಿವ ಸ್ಥಾನ ನೀಡಿದರೂ ನನಗೆ ಸಂತೋಷವಿದೆ ಎಂದು ಹೇಳಿದ್ದಾರೆ.

ಪಕ್ಷದ ತೀರ್ಮಾನಕ್ಕೆ ಬದ್ಧ: ಸಿಪಿವೈ

ಇನ್ನು ಚನ್ನಪಟ್ಟಣ ಉಪಚುನಾವಣೆಯಲ್ಲಿ ಗೆದ್ದ ನೂತನ ಶಾಸಕ ಸಿ.ಪಿ.ಯೋಗೇಶ್ವರ್ ಮಾತನಾಡಿ, ನಾನು ಸಚಿವ ಸ್ಥಾನಕ್ಕೆ ಒತ್ತಾಯ ಮಾಡಲ್ಲ. ಪಕ್ಷ ಯಾವುದೇ ತೀರ್ಮಾನ ತೆಗೆದುಕೊಂಡರೂ ನಾನು ಬದ್ಧನಾಗಿರುವೆ. ನಮ್ಮ ಜಿಲ್ಲೆಯಲ್ಲಿ ಬಾಲಕೃಷ್ಣ ಸೀನಿಯರ್ ಇದ್ದಾರೆ. ಯಾರಿಗೆ ಕೊಟ್ರೂ ಕೆಲಸ ಮಾಡುತ್ತೇವೆ. ಪಕ್ಷ ಯಾವ ಜವಾಬ್ದಾರಿ ಕೊಟ್ರೂ ನಿರ್ವಹಿಸುತ್ತೇನೆ ಎಂದರು.

ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ

ನಾನೂ ಒಬ್ಬ: ಕುಲಕರ್ಣಿ

ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಅವರು ಕಿತ್ತೂರಲ್ಲಿ ಮಾತನಾಡಿ, ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಕೂಗು ಹೆಚ್ಚಾಗಿದ್ದು, ನಾನೂ ಸಚಿವ ಸ್ಥಾನದ ಆಕಾಂಕ್ಷಿ. ಪಕ್ಷದಲ್ಲಿ ಸಮರ್ಥರಿಗೆ ಸ್ಥಾನಮಾನ ಸಿಗುವ ನಿರೀಕ್ಷೆ ಇದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೂ ಇಬ್ಬರು-ಮೂವರ ಹೆಸರು ಅಂತಿಮ ಹಂತದಲ್ಲಿವೆ. ಡಿಸಿಎಂ ಸ್ಥಾನಕ್ಕೆ ಹೆಚ್ಚಿನ ಒತ್ತಡವಿದ್ದು, ಡಿ.ಕೆ.ಶಿವಕುಮಾರ್‌ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನ ಬಿಟ್ಟುಕೊಡಲಿದ್ದಾರೆಂದು ತಿಳಿದು ಬಂದಿದೆ ಎಂದು ಮಾಹಿತಿ ನೀಡಿದ್ದಾರೆ.