ಜೆಡಿಎಸ್‌ ಶಾಸಕರನ್ನು ಸೆಳೆಯಲು ಆಪರೇಷನ್‌ ಹಸ್ತದ ದುಷ್ಟ ಯತ್ನ ನಡೆದಿದೆ : ಎಚ್‌ಡಿಕೆ

| Published : Jan 04 2025, 11:42 AM IST

HD Kumaraswamy

ಸಾರಾಂಶ

ರಾಜ್ಯ ಕಾಂಗ್ರೆಸ್ ಆಪರೇಷನ್ ಹಸ್ತದ ದುಷ್ಟ ಪ್ರಯತ್ನ ಮಾಡುತ್ತಿದೆ. ಆದರೆ, ಅದು ವರ್ಕ್ ಆಗುವುದಿಲ್ಲ ಎಂದು ಕೇಂದ್ರ ಬೃಹತ್‌ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

 ಬೆಂಗಳೂರು : ರಾಜ್ಯ ಕಾಂಗ್ರೆಸ್ ಆಪರೇಷನ್ ಹಸ್ತದ ದುಷ್ಟ ಪ್ರಯತ್ನ ಮಾಡುತ್ತಿದೆ. ಆದರೆ, ಅದು ವರ್ಕ್ ಆಗುವುದಿಲ್ಲ ಎಂದು ಕೇಂದ್ರ ಬೃಹತ್‌ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಜೆಡಿಎಸ್‌ ಮುಗಿಸಬೇಕು ಎಂಬ ಕಾರಣಕ್ಕಾಗಿ ಪಕ್ಷದ ಶಾಸಕರನ್ನು ಸೆಳೆಯುವ ಷಡ್ಯಂತ್ರ ನಡೆಯುತ್ತಿದೆ. ಇದೆಲ್ಲವೂ ನನಗೆ ಗೊತ್ತಿದ್ದು, ನಮ್ಮ ಯಾವ ಶಾಸಕರು ಪಕ್ಷ ಬಿಟ್ಟು ಹೋಗುವ ಪರಿಸ್ಥಿತಿಯಲ್ಲಿಲ್ಲ. ಕಾಂಗ್ರೆಸ್‌ನವರು ಏನೇನು ಮಾಡುತ್ತಿದ್ದಾರೆ ಎನ್ನುವುದು ಗೊತ್ತಿದೆ. ಅವರ ಪಾಪದ ಕೊಡ ತುಂಬಿದ್ದು, ದೇವರೇ ಅವರಿಗೆ ಶಿಕ್ಷೆ ಕೊಡುತ್ತಾನೆ ಎಂದು ಹೇಳಿದರು.

ಪಕ್ಷದ ಶಾಸಕರ ಬಗ್ಗೆ ನಮಗೆ ಆತಂಕವಿಲ್ಲ. ಕಾಂಗ್ರೆಸ್ ಮಾಡುತ್ತಿರುವ ದುಷ್ಟ ಪ್ರಯತ್ನದ ಬಗ್ಗೆ ನಮ್ಮ ಶಾಸಕರು ನನಗೆ ಹೇಳುತ್ತಿದ್ದಾರೆ. ನಮ್ಮ ಪಕ್ಷವನ್ನು ಭದ್ರ ಮಾಡಿಕೊಳ್ಳುವುದು ಹೇಗೆನ್ನುವುದು ಗೊತ್ತಿದೆ ಎಂದು ನುಡಿದರು.

ಗ್ಯಾರಂಟಿ ಸಂತೋಷದಲ್ಲಿರೋ ಜನ ಅಡ್ಜೆಸ್ಟ್‌ ಆಗ್ತಾರೆ

ರಾಜ್ಯ ಸರ್ಕಾರ ಬಸ್‌ ಪ್ರಯಾಣ ದರ ಹೆಚ್ಚಳ ಮಾಡಿರುವ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಕೇಂದ್ರ ಬೃಹತ್‌ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ, ‘ಜನ ಗ್ಯಾರಂಟಿ ಸಂತೋಷದಲ್ಲಿದ್ದು, ಅಡ್ಜೆಸ್ಟ್‌ ಆಗುತ್ತಾರೆ’ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ರಾಜ್ಯದಲ್ಲಿ ದರ ಏರಿಕೆ, ಬೆಲೆ ಏರಿಕೆ ಎನ್ನುವುದು ಅಚ್ಚರಿಯ ವಿಷಯವಲ್ಲ. ಸರ್ಕಾರ ಪ್ರಯಾಣ ದರವನ್ನು ಶೇ.15ರಷ್ಟು ಹೆಚ್ಚಳ ಮಾಡಿ ಜನರ ಮೇಲೆ ದೊಡ್ಡ ಬರೆ ಹಾಕಿದೆ. ಜನ ಆಕ್ರೋಶ ವ್ಯಕ್ತಪಡಿಸಿದರೂ ಜನರಿಗೂ ಅಭ್ಯಾಸವಾಗಿ ಹೋಗಿದೆ. ಎರಡು ದಿನ ಆಕ್ರೋಶ ವ್ಯಕ್ತಪಡಿಸಿ ಮೂರನೇ ದಿನ ಮರೆತು ಹೋಗಿ ಪ್ರಯಾಣ ದರ ಏರಿಕೆಗೆ ಅಡ್ಜೆಸ್ಟ್ ಆಗುತ್ತಾರೆ. ಇದು ನೈಜ ಪರಿಸ್ಥಿತಿ ಎಂದು ಬೇಸರ ವ್ಯಕ್ತಪಡಿಸಿದರು.

ಅಧಿಕಾರಕ್ಕೆ ಬಂದಾಗಿನಿಂದ ಕಾಂಗ್ರೆಸ್‌ ಸರ್ಕಾರ ಜನರ ಮೇಲೆ ಬರೆ ಎಳೆಯುವುದು ಮತ್ತು ಅದನ್ನು ಜನರೂ ಭರಿಸಿಕೊಂಡು ಹೋಗುವುದು ಮಾಮೂಲಿ ಆಗಿಬಿಟ್ಟಿದೆ. ರಾಜ್ಯದಲ್ಲಿ ಸರ್ಕಾರ ಎನ್ನುವುದು ಇದೆಯಾ? ಇದನ್ನು ಸರ್ಕಾರ ಎಂದು ಕರೆಯುತ್ತಾರಾ? ಈ ಸರ್ಕಾರ ಬಂದಾಗಿನಿಂದ ಕೇವಲ ಬೆಲೆ ಏರಿಕೆ ಮಾಡುವುದೇ ಆಗಿದೆ ಎಂದು ಕಿಡಿಕಾರಿದರು.

ಕಾಂಗ್ರೆಸ್‌ ಸರ್ಕಾರ ಡಿಸೇಲ್, ಪೆಟ್ರೋಲ್ ಮೇಲೆ ಸೆಸ್ ಹಾಕಿದರೂ ಜನ ಪ್ರತಿಭಟಿಸದೆ ಹೊಂದಿಕೊಂಡರು. ಮುದ್ರಾಂಕ ಶುಲ್ಕ ಹೆಚ್ಚಳ, ಮಾರ್ಗಸೂಚಿ ದರ, ಮದ್ಯದ ದರ ಏರಿಕೆ ಮಾಡಲಾಯಿತು. ಹಾಲಿನ ದರ ಹೆಚ್ಚಳ ಮಾಡಲಾಗುತ್ತದೆ. ಅಲ್ಲದೆ, ನೀರಿನ ದರವೂ ಏರಿಕೆಯಾಗಲಿದೆ ಎನ್ನುವ ಮಾಹಿತಿ ಇದೆ. ಎಲ್ಲಾ ದರಗಳನ್ನು ಸರ್ಕಾರ ಹೆಚ್ಚಳ ಮಾಡುತ್ತಿದೆ. ಆದರೆ ಗ್ಯಾರಂಟಿ ಸಂತೋಷದಲ್ಲಿ ಜನ ಆಕ್ರೋಶ ವ್ಯಕ್ತಪಡಿಸುತ್ತಿಲ್ಲ. ಬೆಲೆ ಏರಿಕೆಗೆ ಜನರ ಸಮ್ಮತಿ ಇದೆ ಎಂದು ಸರ್ಕಾರ ಭಾವಿಸಿದಂತಿದೆ ಎಂದು ಹೇಳಿದರು.