ಸಾರಾಂಶ
ರಾಜ್ಯಸಭೆಯ ಸಭಾಪತಿ ಜಗದೀಪ್ ಧನಕರ್ ಮತ್ತು ವಿಪಕ್ಷಗಳ ನಡುವೆ ಹಲವು ಸಮಯದಿಂದ ನಡೆಯುತ್ತಿದ್ದ ಸಂಘರ್ಷ ಇದೀಗ ಮತ್ತೊಂದು ಹಂತ ತಲುಪಿದ್ದು, ಧನಕರ್ ಅವರನ್ನು ಹುದ್ದೆಯಿಂದ ತೆಗೆದುಹಾಕುವಂತೆ ಕೋರುವ ನಿರ್ಣಯ ಮಂಡನೆಗೆ ಅವಕಾಶ ಕೋರಲು ವಿಪಕ್ಷಗಳು ಮುಂದಾಗಿವೆ.
ನವದೆಹಲಿ: ರಾಜ್ಯಸಭೆಯ ಸಭಾಪತಿ ಜಗದೀಪ್ ಧನಕರ್ ಮತ್ತು ವಿಪಕ್ಷಗಳ ನಡುವೆ ಹಲವು ಸಮಯದಿಂದ ನಡೆಯುತ್ತಿದ್ದ ಸಂಘರ್ಷ ಇದೀಗ ಮತ್ತೊಂದು ಹಂತ ತಲುಪಿದ್ದು, ಧನಕರ್ ಅವರನ್ನು ಹುದ್ದೆಯಿಂದ ತೆಗೆದುಹಾಕುವಂತೆ ಕೋರುವ ನಿರ್ಣಯ ಮಂಡನೆಗೆ ಅವಕಾಶ ಕೋರಲು ವಿಪಕ್ಷಗಳು ಮುಂದಾಗಿವೆ.
ಇಂಥದ್ದೊಂದು ನಿರ್ಣಯ ಮಂಡನೆಗೆ ಅವಕಾಶ ಸಿಗುವ ಸಾಧ್ಯತೆ ಇಲ್ಲವಾದರೂ, ಇಂಥದ್ದೊಂದು ಪ್ರಸ್ತಾಪದ ಮೂಲಕ ಧನಕರ್ ವಿರುದ್ಧದ ತಮ್ಮ ಆಕ್ರೋಶವನ್ನು ದೇಶದ ಮುಂದಿಡುವ ಪ್ರಯತ್ನ ಮಾಡಲಾಗುವುದು. ಶೀಘ್ರವೇ ನಿರ್ಣಯ ಮಂಡನೆಗೆ ಅವಕಾಶ ಕೋರಿ ನೋಟಿಸ್ ನೀಡಲಾಗುವುದು. ಇದಕ್ಕೆ ವಿಪಕ್ಷಗಳ 87 ಸದಸ್ಯರು ಸಮ್ಮತಿ ಸೂಚಿಸಿದ್ದಾರೆ ಎಂದು ವಿಪಕ್ಷಗಳ ಮೂಲಗಳು ತಿಳಿಸಿವೆ.
ಈ ಬಗ್ಗೆ ಮಾಹಿತಿ ನೀಡಿರುವ ಸಂಸದ ಅಜಯ್ ಮಾಕನ್,‘ರಾಜ್ಯಸಭೆಗೆ ತನ್ನದೇ ಆದ ಘನತೆ ಗೌರವ ಇರುತ್ತದೆ. ಆದರೆ ಸಭಾಪತಿ ಜಗದೀಪ್ ಧನಕರ್ ಅವರು ಎಲ್ಲ ಮಟ್ಟವನ್ನು ಮೀರಿದ್ದಾರೆ. ವಿಪಕ್ಷ ಸಂಸದರಿಗೆ ಸರಿಯಾದ ಗೌರವ ಸೂಚಿಸಿಲ್ಲ. ಏರುದನಿಯಲ್ಲಿ ಮಾತನಾಡಿ ಅಪಮಾನ ಮಾಡಿದ್ದಾರೆ. ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡದಂತೆ ಮೈಕ್ ಆಫ್ ಮಾಡಿದ್ದಾರೆ. ಅವರು ವಿಪಕ್ಷಗಳಿಗೆ ತನ್ನ ಪ್ರಾಮುಖ್ಯತೆಯನ್ನು ನೀಡುತ್ತಿಲ್ಲ’ ಎಂದು ಆರೋಪಿಸಿದರು.