ನಮ್ಮ ಔತಣಕೂಟ ರದ್ದಾಗಿಲ್ಲ, ಮುಂದೂಡಿದ್ದೇವಷ್ಟೆ: ಗೃಹ ಸಚಿವ ಡಾ. ಜಿ. ಪರಮೇಶ್ವರ್‌

| Published : Jan 09 2025, 11:37 AM IST

Dr G Parameshwara

ಸಾರಾಂಶ

ಎಸ್ಸಿ, ಎಸ್ಟಿ ಸಚಿವರು, ಶಾಸಕರು, ಸಂಸದರು ಮತ್ತು ಮುಖಂಡರ ಔತಣಕೂಟ ರದ್ದು ಮಾಡಿಲ್ಲ, ಮುಂದೂಡಿಕೆ ಮಾಡಿದ್ದೇವೆ ಅಷ್ಟೆ. ನಮ್ಮ ಔತಣಕೂಟಕ್ಕೆ ಹೈಕಮಾಂಡ್ ವಿರೋಧ ಇಲ್ಲ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಸ್ಪಷ್ಟಪಡಿಸಿದರು.

ಬೆಂಗಳೂರು : ಎಸ್ಸಿ, ಎಸ್ಟಿ ಸಚಿವರು, ಶಾಸಕರು, ಸಂಸದರು ಮತ್ತು ಮುಖಂಡರ ಔತಣಕೂಟ ರದ್ದು ಮಾಡಿಲ್ಲ, ಮುಂದೂಡಿಕೆ ಮಾಡಿದ್ದೇವೆ ಅಷ್ಟೆ. ನಮ್ಮ ಔತಣಕೂಟಕ್ಕೆ ಹೈಕಮಾಂಡ್ ವಿರೋಧ ಇಲ್ಲ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಸ್ಪಷ್ಟಪಡಿಸಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಚಿತ್ರದುರ್ಗದ ಸಮಾವೇಶದ ಬಗ್ಗೆ ಚರ್ಚೆ ಮಾಡಲು ಸಭೆ ಕರೆದಿದ್ದೆವು. ಈ ವಿಚಾರವನ್ನು ದೆಹಲಿ ನಾಯಕರ ಗಮನಕ್ಕೆ ತಂದಿರಲಿಲ್ಲ. ನಮ್ಮದೇ ಆಂತರಿಕ ವಿಚಾರ ಆಗಿರುವುದರಿಂದ ಹೇಳುವ ಅವಶ್ಯಕತೆ ಇಲ್ಲ ಎಂಬ ಕಾರಣದಿಂದ ಹೇಳಿರಲಿಲ್ಲ. ಶಾಸಕರ ಸಭೆ ಎಂದಾಗ ಹೈಕಮಾಂಡ್‌ ಗಮನಕ್ಕೆ ಹೋಗುವುದು ಸಹಜ. ರಣದೀಪ್ ಸುರ್ಜೇವಾಲ ಅವರು ಕರೆ ಮಾಡಿ‌ ಕೇಳಿದಾಗ ರಾಜಕೀಯ ಲೇಪನ ಇಲ್ಲ‌ ಎಂಬುದನ್ನು ಹೇಳಿದ್ದೇನೆ ಎಂದು ತಿಳಿಸಿದರು.

ಈ ಹಿಂದೆ ನಡೆದ ಚಿತ್ರದುರ್ಗ ಸಭೆಯಲ್ಲಿ ಹೈಕಮಾಂಡ್‌ ಭಾಗವಹಿಸಿತ್ತು. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾಯರ್ದರ್ಶಿಗಳು ಭಾಗವಹಿಸಿದ್ದರು. ಸಮಾವೇಶ ನಡೆಸಲು ಹೈಕಮಾಂಡ್ ವಿರೋಧ ವ್ಯಕ್ತಪಡಿಸಿಲ್ಲ. ವಿರೋಧ ಮಾಡಿದ್ದರೆ ನಿಲ್ಲಿಸಿ ಎಂದು ಹೇಳುತ್ತಿದ್ದರು. ಆ ರೀತಿ ಬೆಳವಣಿಗೆ ಏನೂ ಆಗಿಲ್ಲ. ಸಭೆ ಬೇರೆ ರೀತಿಯ ಆಯಾಮ ಪಡೆದುಕೊಳ್ಳುತ್ತದೆ ಎಂದು ಹೈಕಮಾಂಡ್‌ಗೆ ದೂರು ನೀಡಿರುವ ಬಗ್ಗೆ ನನಗೆ ಗೊತ್ತಿಲ್ಲ ಎಂದರು.

ಹೈಕಮಾಂಡ್​ಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ದೂರು ನೀಡಿದ್ದಾರೆಯೇ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಪರಮೇಶ್ವರ್, ಆ ಬಗ್ಗೆ ನನಗೆ ಗೊತ್ತಿಲ್ಲ. ಸಮ್ಮೇಳನದ ಪೂರ್ವಭಾವಿ ಸಭೆಗೆ ಡಿ.ಕೆ.ಶಿವಕುಮಾರ್​​ರನ್ನೂ ಕರೆಯಬೇಕು ಎಂದು ಚರ್ಚೆ ಆಗಿತ್ತು. ರಾಜಕಾರಣ ಮಾಡುವುದಾದರೆ ಬಹಿರಂಗವಾಗಿಯೇ ಮಾಡುತ್ತೇವೆ. ಮುಚ್ಚಿಟ್ಟು ಮಾಡುವಂಥದ್ದೇನೂ ಇಲ್ಲ ಎಂದು ಹೇಳಿದರು.