‘ನನ್ನ ತಂದೆಯವರ ಹೆಸರು ಕೆಡಿಸಲು ಸ್ಟಿಂಗ್ ವಿಚಾರವನ್ನು ಮುನ್ನೆಲೆಗೆ ತಂದಿದ್ದಾರೆ. ತಂದೆಯನ್ನು ತೇಜೋವಧೆ ಮಾಡಿ, ಅವರ ಪರಂಪತೆ ಹಾಳು ಮಾಡಿ, ಬ್ಲ್ಯಾಕ್‌ಮೇಲ್ ಮಾಡುವ ಪ್ರಯತ್ನ ಇದರ ಹಿಂದೆ ಅಡಗಿದೆ.

ಮೈಸೂರು : ‘ನನ್ನ ತಂದೆಯವರ ಹೆಸರು ಕೆಡಿಸಲು ಸ್ಟಿಂಗ್ ವಿಚಾರವನ್ನು ಮುನ್ನೆಲೆಗೆ ತಂದಿದ್ದಾರೆ. ತಂದೆಯನ್ನು ತೇಜೋವಧೆ ಮಾಡಿ, ಅವರ ಪರಂಪತೆ ಹಾಳು ಮಾಡಿ, ಬ್ಲ್ಯಾಕ್‌ಮೇಲ್ ಮಾಡುವ ಪ್ರಯತ್ನ ಇದರ ಹಿಂದೆ ಅಡಗಿದೆ. ಸ್ಟಿಂಗ್ ಪ್ರಕರಣದಲ್ಲಿ ನಮ್ಮ ಪಕ್ಷದವರೇ ಇದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪುತ್ರ, ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಹೊಸ ಬಾಂಬ್ ಸಿಡಿಸಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಪುತ್ತೂರು ಟಿಕೆಟ್‌ಗಾಗಿ ಸ್ಟಿಂಗ್‌ ಕಾರ್ಯಾಚರಣೆ ನಡೆದಿದ್ದು, ಓರ್ವ ಮಹಿಳೆ ಈ ಸ್ಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ. ಆ ಮಹಿಳೆ ನಮ್ಮ ಪಕ್ಷದವರು. ಸ್ಟಿಂಗ್ ಮಾಡಿ ಟಿಕೆಟ್‌ಗೆ ಬ್ಲ್ಯಾಕ್‌ಮೇಲ್ ಮಾಡಲು ಯತ್ನಿಸಿದ್ದಾರೆ ಎಂದು ಹೇಳಿದರು.

40 ವರ್ಷದ ರಾಜಕೀಯ ಜೀವನದಲ್ಲಿ ಯಾವುದೇ ಕಳಂಕ ಇಲ್ಲದೆ ರಾಜಕಾರಣ

ಈ ಪ್ರಕರಣದಿಂದ ತಾಯಿ ಬೇಜಾರಾಗಿದ್ದಾರಾ ಎಂಬ ಪ್ರಶ್ನೆಗೆ, ತಂದೆ ಬೇಜಾರಾಗಿದ್ದಾರೆ. 40 ವರ್ಷದ ರಾಜಕೀಯ ಜೀವನದಲ್ಲಿ ಯಾವುದೇ ಕಳಂಕ ಇಲ್ಲದೆ ರಾಜಕಾರಣ ಮಾಡಿದ್ದಾರೆ. ಆದರೆ, ಸತ್ಯ ನಮ್ಮ ಕಡೆ ಇದೆ. ಸತ್ಯ ಹೊರಗೆ ಬರುತ್ತೆ. ತಂದೆ ತಪ್ಪು ಮಾಡಿಲ್ಲ ಅಂದರೆ ತಾಯಿ ಖುಷಿ ಪಡುತ್ತಾರೆ ಎಂದು ಅವರು ತಿಳಿಸಿದರು.

ಪತ್ರಕರ್ತ ಸೇರಿದಂತೆ ಇಬ್ಬರನ್ನು ವಶಕ್ಕೆ

ಸ್ಟಿಂಗ್ ಪ್ರಕರಣದಲ್ಲಿ ಪತ್ರಕರ್ತ ಸೇರಿದಂತೆ ಇಬ್ಬರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ಮಾಡಿದ್ದಾರೆ. ತಂದೆಗೆ ಈ ಬಗ್ಗೆ ಮಾಹಿತಿ ಬಂದಿದೆ. ಪ್ರಕರಣದಲ್ಲಿ ಯಾರೇ ಇದ್ದರೂ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ತಂದೆ ಹೇಳಿದ್ದಾರೆ. ನಮ್ಮ ಸರ್ಕಾರದ ತನಿಖೆ ಮೇಲೆ ನಂಬಿಕೆ ಇದೆ. ತನಿಖೆ ಸರಿಯಾಗಿ ನಡೆಯುತ್ತಿದೆ. ಅಕಸ್ಮಾತ್ ತನಿಖೆ ಸರಿಯಾಗಿ ನಡೆಯಲಿಲ್ಲ ಅಂದರೆ ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸುತ್ತೇವೆ ಎಂದರು.