ಸಾರಾಂಶ
ಕನ್ನಡಪ್ರಭ ವಾರ್ತೆ ಬ್ಯಾಡಗಿ
ವಿಧಾನಸೌಧದಲ್ಲಿ ಮಂಗಳವಾರ ಸಂಜೆ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ಹಿನ್ನೆಲೆಯಲ್ಲಿ ಬ್ಯಾಡಗಿ ಮೆಣಸಿನಕಾಯಿ ವರ್ತಕ ಮಹ್ಮದ್‌ಶಫಿ ನಾಶಿಪುಡಿ ವಿರುದ್ಧ ಬಿಜೆಪಿ ಕಾರ್ಯಕರ್ತರು ಬುಧವಾರ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೇಶದ್ರೋಹ ಕಾನೂನಿನಡಿ ಪ್ರಕರಣ ದಾಖಲಿಸಿದ್ದಾರೆ.
ಬಳಿಕ ಮಾತನಾಡಿದ ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ದೇಶದ್ರೋಹದ ಹೇಳಿಕೆ ನೀಡಿದ ಮಹ್ಮದ್ ಶಫಿಯನ್ನು ಪೊಲೀಸರು ಸ್ಥಳದಲ್ಲೇ ಬಂಧಿಸದಿರುವುದು ದುರುದೃಷ್ಟಕರ ಸಂಗತಿ. ನಾಶಿಪುಡಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದರು.
ನಾನು ‘ಪಾಕಿಸ್ತಾನ ಜಿಂದಾಬಾದ್’ ಘೋಷಣೆ ಕೂಗಿಲ್ಲ: ಮಹ್ಮದ್ ಶಫಿ ಬ್ಯಾಡಗಿ : ನಾನು ‘ಪಾಕಿಸ್ತಾನ ಜಿಂದಾಬಾದ್’ ಎಂಬ ಘೋಷಣೆ ಕೂಗಿಲ್ಲ. ವಿಧಾನಸೌಧದಲ್ಲಿ ಮಂಗಳವಾರ ಸಂಜೆ ನಡೆದ ಘಟನೆಗೂ, ನನಗೂ ಸಂಬಂಧವಿಲ್ಲ. ಈ ಕುರಿತು ಯಾವುದೇ ತನಿಖೆಗೂ ನಾನು ಸಿದ್ಧನಿದ್ದೇನೆ ಎಂದು ಮಹ್ಮದ್ ಶಫಿ ನಾಶಿಪುಡಿ ಸ್ಪಷ್ಟನೆ ನೀಡಿದ್ದಾರೆ.
ನಾನು ಭಾರತಮಾತೆಯ ಮಗ. ಭಾರತದ ರಾಷ್ಟ್ರಧ್ವಜ ಹಾರಿಸುವ ಮೂಲಕ ಪ್ರತಿ ವರ್ಷ ನನ್ನ ವ್ಯವಹಾರದ ಜಾಗದಲ್ಲಿ ಎಲ್ಲಾ ರಾಷ್ಟ್ರೀಯ ಹಬ್ಬ ಆಚರಿಸಿದ್ದೇನೆ. ಎಲ್ಲರಂತೆ ನಾನೂ ಸಹ ‘ನಾಸೀರಖಾನ್ ಜಿಂದಾಬಾದ್’ ಎಂದು ಘೋಷಣೆ ಹಾಕಿದ್ದು ಸತ್ಯ.
ಒಂದು ವೇಳೆ ‘ಪಾಕಿಸ್ತಾನ ಜಿಂದಾಬಾದ್’ ಎಂಬ ಘೋಷಣೆ ನನ್ನ ಕಿವಿಗೆ ಬಿದ್ದಿದ್ದರೆ ನಾನೇ ಖುದ್ದಾಗಿ ಪೊಲೀಸರಿಗೆ ದೂರು ಸಲ್ಲಿಸುತ್ತಿದ್ದೆ ಎಂದರು. ನನ್ನ ಘೋಷಣೆಯನ್ನು ತಿರುಚಲಾಗಿದೆ.
ನನಗೆ ಕಾಂಗ್ರೆಸ್ ಅಥವಾ ಬಿಜೆಪಿ ಎಂಬ ರಾಜಕೀಯ ಪಕ್ಷ ಗೊತ್ತಿಲ್ಲ, ವ್ಯಕ್ತಿಗತವಾಗಿ ನಾನು ಪ್ರಚಾರ ಮಾಡುತ್ತೇನೆ. ಈ ವರ್ಷ ಕಾಂಗ್ರೆಸ್ ಪರವಾಗಿ ಪ್ರಚಾರಕ್ಕೆ ಹೋಗಿದ್ದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಪ್ರಚಾರ ಮಾಡಿದ್ದೆ ಎಂದು ಅವರು ತಿಳಿಸಿದರು.