ಪರಂ ಇಂದು ದೆಹಲಿಗೆ : ಕಾಂಗ್ರೆಸ್ಸಲ್ಲಿ ಕುತೂಹಲ - ಶೋಷಿತರ ಸಮಾವೇಶಕ್ಕೆ ಅನುಮತಿಗೆ ಕೋರಿಕೆ?

| N/A | Published : Feb 18 2025, 05:03 AM IST

Dr G Parameshwara

ಸಾರಾಂಶ

ರಾಜ್ಯ ಕಾಂಗ್ರೆಸ್‌ನಲ್ಲಿ ಬಣ ರಾಜಕಾರಣ ತೀವ್ರಗೊಳ್ಳುತ್ತಿರುವ ಈ ಹಂತದಲ್ಲೇ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರು ಹೈಕಮಾಂಡ್‌ ಭೇಟಿಗೆ ದೆಹಲಿಗೆ ತೆರಳುತ್ತಿದ್ದಾರೆ. ಪರಮೇಶ್ವರ್‌ ಅವರ ಈ ನಡೆ ತೀವ್ರ ಕುತೂಹಲ ಕೆರಳಿಸಿದೆ.

  ಬೆಂಗಳೂರು : ರಾಜ್ಯ ಕಾಂಗ್ರೆಸ್‌ನಲ್ಲಿ ಬಣ ರಾಜಕಾರಣ ತೀವ್ರಗೊಳ್ಳುತ್ತಿರುವ ಈ ಹಂತದಲ್ಲೇ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರು ಹೈಕಮಾಂಡ್‌ ಭೇಟಿಗೆ ದೆಹಲಿಗೆ ತೆರಳುತ್ತಿದ್ದಾರೆ. ಪರಮೇಶ್ವರ್‌ ಅವರ ಈ ನಡೆ ತೀವ್ರ ಕುತೂಹಲ ಕೆರಳಿಸಿದೆ.

ನಾಯಕತ್ವ ಬದಲಾವಣೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ, ಶೋಷಿತರ ಸಮಾವೇಶ ಕುರಿತು ಡಿ.ಕೆ.ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಬಣಗಳ ನಡುವೆ ಬಹಿರಂಗವಾಗಿ ಆರೋಪ-ಪ್ರತ್ಯಾರೋಪಗಳು ನಡೆಯುತ್ತಲೇ ಇವೆ. ಇದರ ನಡುವೆ ಡಾ. ಪರಮೇಶ್ವರ್‌ ಅವರು ಹೈಕಮಾಂಡ್‌ ಭೇಟಿಗಾಗಿ ಮಂಗಳವಾರ ದೆಹಲಿಗೆ ತೆರಳಲಿದ್ದಾರೆ.

ಪರಮೇಶ್ವರ್‌ ಅವರು ಶೋಷಿತರ ಸಮಾವೇಶ ನಡೆಸಲು ಅನುಮತಿ ಕೋರಿ ಆಹ್ವಾನ ನೀಡುವ ಸಾಧ್ಯತೆಯಿದೆ. ಇದೇ ವೇಳೆ ನಾಯಕತ್ವ ಬದಲಾವಣೆ ಬಗ್ಗೆ ಹೈಕಮಾಂಡ್‌ನಿಂದ ಸ್ಪಷ್ಟನೆ ನೀಡಬೇಕು. ಬದಲಾವಣೆ ಉದ್ದೇಶವಿದ್ದರೆ ತಮ್ಮನ್ನು ಕೂಡ ಪರಿಗಣಿಸಬೇಕು ಎಂಬ ವಾದವನ್ನು ಹೈಕಮಾಂಡ್ ಮುಂದಿಡುವ ಪ್ರಯತ್ನ ಮಾಡಲಿದ್ದಾರೆ ಎಂದು ಪರಮೇಶ್ವರ್ ಆಪ್ತ ಮೂಲಗಳು ತಿಳಿಸಿವೆ.

ಪರಮೇಶ್ವರ್‌ ಅವರು ಫೆ.9 ರಂದು ಭಾನುವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅವರ ಬೆಂಗಳೂರಿನ ನಿವಾಸದಲ್ಲಿ ಭೇಟಿ ಮಾಡಿ 45 ನಿಮಿಷಗಳ ಕಾಲ ಚರ್ಚೆ ನಡೆಸಿದ್ದರು. ಫೆ.12 ರಂದು ದೆಹಲಿಗೆ ಹೋಗಲು ದಿನಾಂಕ ನಿಗದಿಯಾಗಿತ್ತಾದರೂ ಅಂತಿಮ ಕ್ಷಣದಲ್ಲಿ ರದ್ದಾಗಿತ್ತು. ಇದೀಗ ದೆಹಲಿಗೆ ತೆರಳುತ್ತಿರುವುದರಿಂದ ರಾಜ್ಯ ಕಾಂಗ್ರೆಸ್‌ ವಲಯದಲ್ಲಿ ಕುತೂಹಲ ಮೂಡಿದೆ.