ನಿಮ್ಮ ಐಫೋನ್‌ಗಳ ಮೇಲೆ ಸರ್ಕಾರಿ ಪ್ರಾಯೋಜಿತ ಹ್ಯಾಕಿಂಗ್ (ದಾಳಿ) ನಡೆಯುತ್ತಿದೆ’ ಎಂದು ದೇಶದ ಪ್ರಮುಖ ವಿಪಕ್ಷ ಮುಖಂಡರು, ಪತ್ರಕರ್ತರು ಹಾಗೂ ಗಣ್ಯರಿಗೆ ಸಂದೇಶ ಕಳಿಸಿದ್ದ ಆ್ಯಪಲ್ ಸಂಸ್ಥೆಗೆ ಸಮನ್ಸ್ ಕಳಿಸಲು ಮಾಹಿತಿ ತಂತ್ರಜ್ಞಾನ ವಿಭಾಗದ ಸಂಸತ್ತಿನ ಸ್ಥಾಯಿ ಸಮಿತಿ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.
ಸರ್ಕಾರಿ ಪ್ರಾಯೋಜಿತ ದಾಳಿ ಸಂದೇಶ ವಿವಾದ ಆ್ಯಪಲ್ ಸಂಸ್ಥೆಯಿಂದ ವಿವರಣೆ ಪಡೆಯುವ ಸಾಧ್ಯತೆ ನಮಗೆ ರಕ್ಷಣೆ ನೀಡಿ: ಸ್ಪೀಕರ್‌ಗೆ ಮಹುವಾ ಪತ್ರ ಕೃತ್ಯದ ಹಿಂದೆ ಸರ್ಕಾರದ ಪಾತ್ರ ಹಿರಿದು: ಚಿದು ಸಂದೇಹ ನವದೆಹಲಿ: ‘ನಿಮ್ಮ ಐಫೋನ್‌ಗಳ ಮೇಲೆ ಸರ್ಕಾರಿ ಪ್ರಾಯೋಜಿತ ಹ್ಯಾಕಿಂಗ್ (ದಾಳಿ) ನಡೆಯುತ್ತಿದೆ’ ಎಂದು ದೇಶದ ಪ್ರಮುಖ ವಿಪಕ್ಷ ಮುಖಂಡರು, ಪತ್ರಕರ್ತರು ಹಾಗೂ ಗಣ್ಯರಿಗೆ ಸಂದೇಶ ಕಳಿಸಿದ್ದ ಆ್ಯಪಲ್ ಸಂಸ್ಥೆಗೆ ಸಮನ್ಸ್ ಕಳಿಸಲು ಮಾಹಿತಿ ತಂತ್ರಜ್ಞಾನ ವಿಭಾಗದ ಸಂಸತ್ತಿನ ಸ್ಥಾಯಿ ಸಮಿತಿ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ. ‘ಸಮಿತಿಯು ಈ ವಿಚಾರವನ್ನು ಅತ್ಯಂತ ಗಂಭೀರ ಮತ್ತು ತುರ್ತು ಎಂದು ಪರಿಗಣಿಸಿದ್ದು, ಈ ಹಿನ್ನೆಲೆಯಲ್ಲಿ ಆ್ಯಪಲ್ ಸಂಸ್ಥೆಗೆ ಸಮನ್ಸ್ ನೀಡಿ ವಿವರಣೆ ಪಡೆಯುವ ಬಗ್ಗೆ ಚಿಂತಿಸಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ನಡುವೆ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಅವರು ಐಟಿ ಇಲಾಖೆಯ ಸಂಸದೀಯ ಸ್ಥಾಯಿ ಸಮಿತಿ ಪ್ರಕರಣದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ಈ ನಡುವೆ ಹ್ಯಾಕಿಂಗ್ ಬಗ್ಗೆ ಲೋಕಸಭೆ ಸ್ಪೀಕರ್ ಓಂ ಬಿರ್ಲಾಗೆ ಪತ್ರ ಬರೆದಿರುವ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, ‘ನಾವು ಸುಗಮವಾಗಿ ಕೆಲಸ ಮಾಡುವಂತಾಗಲು ಇಂಥ ದಾಳಿಯಿಂದ ರಕ್ಷಣೆ ಕೊಡಿಸಬೇಕು’ ಎಂದು ಮನವಿ ಮಾಡಿದ್ದಾರೆ. ಅಲ್ಲದೇ ‘ಬರೀ ವಿಪಕ್ಷ ನಾಯಕರಿಗೆ ಐಫೋನ್ ಹ್ಯಾಕ್ ಆದ ಸಂದೇಶ ಏಕೆ ಬರುತ್ತಿವೆ? ಆಡಳಿತ ಪಕ್ಷದವರಿಗೆ ಏಕೆ ಬರುತ್ತಿಲ್ಲ? ಇದು ಸರ್ಕಾರವೇ ಹ್ಯಾಕಿಂಗ್ ಹಿಂದಿದೆ ಎಂಬ ಸಂದೇಹವನ್ನು ಪುಷ್ಟೀಕರಿಸುತ್ತದೆ’ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಪಿ.ಚಿದಂಬರಂ ಹೇಳಿದ್ದಾರೆ. ಆ್ಯಪಲ್ ಸಂಸ್ಥೆಯು ಮಲ್ಲಿಕಾರ್ಜುನ ಖರ್ಗೆ, ಮಹುವಾ ಮೊಯಿತ್ರಾ, ಶಶಿ ತರೂರ್, ಸೀತಾರಾಂ ಯೆಚೂರಿ, ಅಖಿಲೇಶ್ ಯಾದವ್, ರಾಹುಲ್ ಗಾಂಧಿಯ ಆಪ್ತರು, ರಾಘವ್ ಛಡ್ಡಾ, ಅಸಾಸುದ್ದೀನ್ ಓವೈಸಿ, ವೈರ್ ವೆಬ್‌ಸೈಟ್ ಸ್ಥಾಪಕ ಸಂಪಾದಕ ಸಿದ್ಧಾರ್ಥ್ ವರದರಾಜನ್ ಸೇರಿದಂತೆ ಹಲವು ಖ್ಯಾತನಾಮರಿಗೆ ಮಂಗಳವಾರ ದಾಳಿಕೋರರು ಲಗ್ಗೆ ಇಡುವ ಸಾಧ್ಯತೆಯಿದೆ ಎಂಬ ಸಂದೇಶ ರವಾನೆಯಾಗಿತ್ತು. ನಂತರ ಸ್ಪಷ್ಟೀಕರಣ ನೀಡಿದ್ದ ಸಂಸ್ಥೆಯು, ಇದು ಯಾವುದೇ ನಿರ್ದಿಷ್ಟ ಸಂಸ್ಥೆಯನ್ನು ಗುರಿಯಾಗಿಸಿಕೊಂಡು ಸಂದೇಶವನ್ನು ಕಳುಹಿಸಿಲ್ಲವೆಂದದೂ, ಈ ದಾಳಿಯ ಎಚ್ಚರಿಕೆ ಹುಸಿ ಆಗಿರಬಹುದು ಎಂದೂ ಹೇಳಿತ್ತು. ಇದರ ನಡುವೆ ದಾಳಿಯಲ್ಲಿ ತನ್ನ ಪಾತ್ರವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿತ್ತು.
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.