ವೈಟ್‌ ಟಾಪಿಂಗ್‌ ಪರಿಶೀಲನೆ ಹೆಸರಲ್ಲಿ ಫೋಟೋ ಶೂಟಿಂಗ್‌ : ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಲೇವಡಿ

| N/A | Published : Feb 17 2025, 01:31 AM IST / Updated: Feb 17 2025, 04:16 AM IST

R Ashok

ಸಾರಾಂಶ

ವೈಟ್ ಟಾಪಿಂಗ್ ಕಾಮಗಾರಿ ಪರಿಶೀಲನೆ ಹೆಸರಿನಲ್ಲಿ ಫೋಟೋ ಶೂಟಿಂಗ್ ಮಾಡಿದರೆ ಬೆಂಗಳೂರಿನ ಸಮಸ್ಯೆಗಳು ಪರಿಹಾರವಾಗಲಿದೆಯೇ ಎಂದು ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಲೇವಡಿ ಮಾಡಿದ್ದಾರೆ.

 ಬೆಂಗಳೂರು : ವೈಟ್ ಟಾಪಿಂಗ್ ಕಾಮಗಾರಿ ಪರಿಶೀಲನೆ ಹೆಸರಿನಲ್ಲಿ ಫೋಟೋ ಶೂಟಿಂಗ್ ಮಾಡಿದರೆ ಬೆಂಗಳೂರಿನ ಸಮಸ್ಯೆಗಳು ಪರಿಹಾರವಾಗಲಿದೆಯೇ ಎಂದು ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಲೇವಡಿ ಮಾಡಿದ್ದಾರೆ.

ಬೆಂಗಳೂರು ಅಭಿವೃದ್ಧಿ ಸಚಿವರಾಗಿ ತಮಗೆ ಬ್ರ್ಯಾಂಡ್ ಬೆಂಗಳೂರಿನ ಬಗ್ಗೆ ನಿಜವಾಗಿಯೂ ಕಾಳಜಿ ಇದ್ದರೆ, ನಿಮಗೆ ಮಾಡುವುದಕ್ಕೆ ಕೆಲಸ ಬೇಕಾದಷ್ಟಿದೆ. ₹660 ಕೋಟಿ ಖರ್ಚು ಮಾಡಿದರೂ ನಗರದಾದ್ಯಂತ ಇನ್ನೂ ಸಾವಿರಾರು ರಸ್ತೆಗುಂಡಿಗಳು ಬಾಯ್ತೆರೆದುಕೊಂಡಿವೆ. ಮಾರ್ಚ್, ಏಪ್ರಿಲ್‌ನ ಬೇಸಿಗೆ ಕಾಲದಲ್ಲಿ ರಸ್ತೆ ಗುಂಡಿ ಮುಚ್ಚುವುದಕ್ಕೆ, ರಸ್ತೆ ರಿಪೇರಿ ಮಾಡೋಕೆ ಒಳ್ಳೆ ಸಮಯವಾಗಿದೆ. ಸರ್ಕಾರ ಇನ್ನಾದರೂ ಎಚ್ಚೆತ್ತುಕೊಳ್ಳದಿದ್ದರೆ ಮಳೆಗಾಲದಲ್ಲಿ ರಸ್ತೆ ಗುಂಡಿಗಳು ಸಾರ್ವಜನಿಕರಿಗೆ ಮೃತ್ಯು ಕೂಪಗಳಾಗುವುದು ಖಚಿತ ಎಂದು ಸಾಮಾಜಿಕ ಜಾಲತಾಣದ ಮೂಲಕ ಕಿಡಿಕಾರಿದ್ದಾರೆ.

ಕಳೆದ ವರ್ಷ ಬೇಸಿಗೆಯಲ್ಲಿ ಟ್ಯಾಂಕರ್ ಮಾಫಿಯಾ ಜತೆಗೆ ಶಾಮೀಲಾಗಿ ಜನರನ್ನು ಸುಲಿಗೆ ಮಾಡಿದಿರಿ. ಈ ವರ್ಷವಾದರೂ ಬೇಸಿಗೆ ಕಾಲದಲ್ಲಿ ಬೆಂಗಳೂರಿನ ಜನತೆ ನೀರಿಗಾಗಿ ಬವಣೆ ಪಡದಂತೆ ಕ್ರಮ ಕೈಗೊಳ್ಳಿ. ಕೆಆರ್‌ಎಸ್ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಯದಂತೆ ಮುನ್ನೆಚ್ಚರಿಕೆ ವಹಿಸಿ. ಎಷ್ಟು ನೀರು ಬಿಟ್ಟರೂ ತಮಿಳುನಾಡಿನವರು ಕ್ಯಾತೆ ತೆಗೆಯುವುದಂತೂ ಖಚಿತ. ಅದಕ್ಕಾಗಿ ಈಗಲೇ ಕಾನೂನು ಹೋರಾಟಕ್ಕೆ ಸಿದ್ಧತೆ ಮಾಡಿಕೊಳ್ಳಿ. ರಾಜ್ಯದ ಪರವಾಗಿ ಗಟ್ಟಿಯಾದ ವಾದ ಮಂಡಿಸಲು ತಯಾರಾಗಿ ಎಂದು ಎಚ್ಚರಿಸಿದ್ದಾರೆ.