ಸಾರಾಂಶ
ರಾಂಚಿ : ಪ್ರಧಾನಿ ನರೇಂದ್ರ ಮೋದಿ ಅವರು ಚುನಾಯಿತ ಸರ್ಕಾರಗಳನ್ನು ಬೀಳಿಸುವ, ವಿಪಕ್ಷಗಳನ್ನು ಹತ್ತಿಕ್ಕುವ ಹಾಗೂ ವಿಪಕ್ಷ ಶಾಸಕರನ್ನು ಕುರಿಯಂತೆ ಖರೀದಿಸಿ ಕತ್ತರಿಸಿ ತಿನ್ನುವ ಚಾಳಿ ಹೊಂದಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸೋಮವಾರ ಜಾರ್ಖಂಡ್ ವಿಧಾನಸಭೆ ಚುನಾವಣೆ ನಿಮಿತ್ತ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಖರ್ಗೆ, ‘ಮೋದಿ-ಜಿ ಸರ್ಕಾರಗಳನ್ನು ಬೀಳಿಸುತ್ತಾರೆ. ಶಾಸಕರನ್ನು ಖರೀದಿಸುತ್ತಾರೆ. ಉನ್ಕಾ ಕಾಮ್ ಎಮ್ಮೆಲ್ಲೇಸ್ ಕೋ ಬಕ್ರಿ ಕೆ ಜೈಸೇ ಅಪ್ನೆ ಪಾಸ್ ರಖ್ ಲೇನಾ, ಪಾಲ್ನಾ ಔರ್ ಫಿರ್ ಬಾದ್ ಮೇ ಕಾಟ್ ಕರ್ ಖಾನಾ ಹೈ (ಮೋದಿ ಶಾಸಕರನ್ನು ಮೇಕೆಗಳಂತೆ ಇಟ್ಟುಕೊಳ್ಳುತ್ತಾರೆ, ಅವರಿಗೆ ಆಹಾರ ನೀಡುತ್ತಾರೆ ಮತ್ತು ನಂತರ ಅವರನ್ನು ಕತ್ತರಿಸಿ ತಿನ್ನುತ್ತಾರೆ)’ ಎಂದು ಆರೋಪಿಸಿದರು.
‘ಮೋದಿ ಮತ್ತು ಅಮಿತ್ ಶಾ ಅವರು ಕೇಂದ್ರ ಸರ್ಕಾರವನ್ನು ‘ಅದಾನಿ ಮತ್ತು ಅಂಬಾನಿ’ ಜತೆ ನಡೆಸುತ್ತಿದ್ದಾರೆ. ವಿರೋಧ ಪಕ್ಷದ ನಾಯಕರ ವಿರುದ್ಧ ಇ.ಡಿ., ಸಿಬಿಐ ಮತ್ತು ಇತರ ಕೇಂದ್ರೀಯ ಸಂಸ್ಥೆಗಳನ್ನು ಬಿಚ್ಚಿಟ್ಟಿದ್ದಾರೆ. ಆದರೆ ನಾವು ಹೆದರುವುದಿಲ್ಲ. ಏಕೆಂದರೆ ನಾವು ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದೇವೆ, ಪ್ರಾಣ ತ್ಯಾಗ ಮಾಡಿದ್ದೇವೆ’ ಎಂದರು.ಅಲ್ಲದೆ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ವೇಷಭೂಷಣಕ್ಕೂ ಮಾತಿಗೂ ವ್ಯತ್ಯಾಸವಿದೆ. ಅವರು ‘ಮುಖ್ ಮೇ ರಾಮ್, ಬಗಲ್ ಮೇ ಚೂರಿ’. ಅವರು ಕಾವಿ ಕಳಚಿ ಶ್ವೇತವಸ್ತ್ರ ಧರಿಸುವುದು ಉತ್ತಮ’ ಎಂದು ಆರೋಪಿಸಿದರು.
‘ಮೋದಿ ತಾವು ಜೈವಿಕ ವ್ಯಕ್ತಿ ಅಲ್ಲ ಎಂದು ನಂಬುತ್ತಾರೆ. ಅವರು ತಮ್ಮ ಭರವಸೆಗಳನ್ನು ಎಂದಿಗೂ ಈಡೇರಿಸದ ಅಭ್ಯಾಸ ಸುಳ್ಳುಗಾರರಾಗಿದ್ದಾರೆ. ಗುಜರಾತ್‌ಗೆ ಯಾವುದಾದರೂ ಸುವರ್ಣ ಯುಗ ಬಂದಿದೆಯೇ?’ ಎಂದೂ ಖರ್ಗೆ ಪ್ರಶ್ನಿಸಿದರು.‘ಸೋನಿಯಾ ಗಾಂಧಿ ಅವರು ರಾಜೀವ್ ಗಾಂಧಿ ಹಂತಕರಲ್ಲಿ ಒಬ್ಬನನ್ನು ಕ್ಷಮಿಸಿದರೆ, ಪ್ರಿಯಾಂಕಾ ಗಾಂಧಿ ಕೊಲೆಗಾರನನ್ನು ಅಪ್ಪಿಕೊಂಡರು, ಇದು ಸಹಾನುಭೂತಿ’ ಖರ್ಗೆ ಎಂದು ಹೇಳಿದರು.