ಸಾರಾಂಶ
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಮುಸ್ಲಿಂ ಲೀಗ್‌ನ ಛಾಯೆ ಕಾಣುತ್ತಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಟೀಕೆಗೆ ತಿರುಗೇಟು ನೀಡಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಈ ಬಾರಿ ಬಿಜೆಪಿ 180 ಸ್ಥಾನ ದಾಟುವುದೂ ಅನುಮಾನವಾಗಿದೆ.
ನವದೆಹಲಿ: ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಮುಸ್ಲಿಂ ಲೀಗ್‌ನ ಛಾಯೆ ಕಾಣುತ್ತಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಟೀಕೆಗೆ ತಿರುಗೇಟು ನೀಡಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಈ ಬಾರಿ ಬಿಜೆಪಿ 180 ಸ್ಥಾನ ದಾಟುವುದೂ ಅನುಮಾನವಾಗಿದೆ. ಹೀಗಾಗಿಯೇ ಪ್ರಧಾನಿ ನರೇಂದ್ರ ಮೋದಿ ಮತ್ತದೇ ಹಿಂದು- ಮುಸ್ಲಿಂ ದಾಳ ಎಸೆದಿದ್ದಾರೆ’ ಎಂದು ವ್ಯಂಗ್ಯವಾಡಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಖರ್ಗೆ, ‘ಬಿಜೆಪಿಯ ಚುನಾವಣಾ ಸ್ಥಿತಿ ದಿನೇ ದಿನೇ ಹದಗೆಡುತ್ತಿದೆ. ಹೀಗಾಗಿ ಆರ್‌ಎಸ್‌ಎಸ್,ಬ್ನ್ನ ಹಳೆಯ ಸ್ನೇಹಿತ ಮುಸ್ಲಿಂ ಲೀಗ್ ಅನ್ನು ಮತ್ತೆ ನೆನಪಿಸಿಕೊಳ್ಳುತ್ತಿದೆ. ಮೋದಿ ಮತ್ತು ಅಮಿತ್ ಶಾ ಅವರ ರಾಜಕೀಯ ಪೂರ್ವಜರು, ಭಾರತೀಯ ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧ ಬ್ರಿಟಿಷರು ಮತ್ತು ಮುಸ್ಲಿಂ ಲೀಗ್ ಅನ್ನು ಬೆಂಬಲಿಸಿದ್ದರು. 1942ರಲ್ಲಿ ಮಹಾತ್ಮಾ ಗಾಂಧೀಜಿ ಕರೆಕೊಟ್ಟಿದ್ದ ಕ್ವಿಟ್ ಇಂಡಿಯಾ ಚಳವಳಿಯನ್ನು ಈ ನಾಯಕರ ಪೂರ್ವಜರು ವಿರೋಧಿಸಿದ್ದರು. ಇದೀಗ ಜನರ ಸಹಯೋಗದಿಂದ ಸಿದ್ಧಪಡಿಸಲಾಗಿರುವ ನ್ಯಾಯಪತ್ರದ ವಿರುದ್ಧವೂ ಬಿಜೆಪಿ ನಾಯಕರು ಅದೇ ಮುಸ್ಲಿಂ ಲೀಗ್ ಅನ್ನು ಪ್ರಯೋಗಿಸಿದ್ದಾರೆ’ ಎಂದು ಟೀಕಿಸಿದ್ದಾರೆ.‘ನಿಮ್ಮ ಪೂರ್ವಜರು ಬಂಗಾಳ ಸಿಂಧ್ ಮತ್ತು 1940ರಲ್ಲಿ ಎನ್‌ಡಬ್ಲ್ಯುಎಫ್‌ಪಿಯಲ್ಲಿ ಮುಸ್ಲಿಂ ಲೀಗ್ ಜೊತೆಗೂಡಿ ಸರ್ಕಾರ ರಚಿಸಿದ್ದರು ಎಂಬುದು ಎಲ್ಲರಿಗೂ ಗೊತ್ತಿದೆ. ಕ್ವಿಟ್ ಇಂಡಿಯಾ ಚಳವಳಿಯನ್ನು ಹೇಗೆ ಹತ್ತಿಕ್ಕಬೇಕು ಎಂದು ಶ್ಯಾಮ್‌ಪ್ರಸಾದ್ ಮುಖರ್ಜಿ ಅವರು ಬ್ರಿಟಿಷರಿಗೆ ಪತ್ರ ಮುಖೇನ ಸಲಹೆ ನೀಡಿರಲಿಲ್ಲವೇ? ಇದಕ್ಕಾಗಿಯೇ ಅವರು ಬ್ರಿಟಿಷರನ್ನು ಬೆಂಬಲಿಸಲು ಮುಂದಾಗಿರಲಿಲ್ಲವೇ’ ಎಂದು ಖರ್ಗೆ ಪ್ರಶ್ನಿಸಿದ್ದಾರೆ.