ಬಿಜೆಪಿ ತಿರಂಗ ಯಾತ್ರೆಗೆ ಪೊಲೀಸರ ಅಡ್ಡಿ: ಧರಣಿ

| Published : Mar 05 2024, 01:31 AM IST / Updated: Mar 05 2024, 10:40 AM IST

ಸಾರಾಂಶ

ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಮತ್ತು ನಗರದಲ್ಲಿ ಸ್ಫೋಟ ಪ್ರಕರಣ ಖಂಡಿಸಿ ಬಿಜೆಪಿ ಹಮ್ಮಿಕೊಂಡಿದ್ದ ‘ತಿರಂಗಾ ಯಾತ್ರೆ’ಗೆ ಅವಕಾಶ ನೀಡದ ಪೊಲೀಸರು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರನ್ನು ಬಂಧಿಸಿ ಬಿಡುಗಡೆ ಮಾಡಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಮತ್ತು ನಗರದಲ್ಲಿ ಸ್ಫೋಟ ಪ್ರಕರಣ ಖಂಡಿಸಿ ಬಿಜೆಪಿ ಹಮ್ಮಿಕೊಂಡಿದ್ದ ‘ತಿರಂಗಾ ಯಾತ್ರೆ’ಗೆ ಅವಕಾಶ ನೀಡದ ಪೊಲೀಸರು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರನ್ನು ಬಂಧಿಸಿ ಬಿಡುಗಡೆ ಮಾಡಿದರು.

ಸೋಮವಾರ ನಗರದ ಪುರಭವನದ ಮುಂದೆ ಬಿಜೆಪಿ ಯುವಮೋರ್ಚಾ ರಾಜ್ಯಾಧ್ಯಕ್ಷ ಧೀರಜ್‌ ಮುನಿರಾಜು, ರಾಜ್ಯ ಪ್ರಧಾನ ಕಾರ್ಯದರ್ಶಿ ನಂದೀಶ್‌ ರೆಡ್ಡಿ, ಶಾಸಕ ಸಿ.ಕೆ.ರಾಮೂರ್ತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. 

ಈ ವೇಳೆ ಪುರಭವನದಿಂದ ಫ್ರೀಡಂ ಪಾರ್ಕ್‌ವರೆಗೆ ತಿರಂಗಾ ಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಆದರೆ ಪೊಲೀಸರು ಯಾತ್ರೆ ನಡೆಸಲು ಅವಕಾಶ ನೀಡಲಿಲ್ಲ. ಆದರೂ ಯಾತ್ರೆ ನಡೆಸಲು ಮುಂದಾದಾಗ ಬಿಜೆಪಿ ಮುಖಂಡರು, ಕಾರ್ಯಕರ್ತರನ್ನು ಬಂಧಿಸಿ ಬಿಡುಗಡೆ ಮಾಡಲಾಯಿತು.

ಬಿಜೆಪಿ ಕಾರ್ಯಕರ್ತರು ತಂದಿದ್ದ ರಾಷ್ಟ್ರಧ್ವಜವನ್ನು ಬಲವಂತವಾಗಿ ಕಸಿದು ವಶಕ್ಕೆ ಪಡೆದುಕೊಳ್ಳಲಾಯಿತು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾ ನಿರತರ ನಡುವೆ ತಳ್ಳಾಟ ನಡೆಯಿತು. 

ಪ್ರತಿಭಟನೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ವಿರುದ್ಧ ಘೋಷಣೆ ಕೂಗಲಾಯಿತು. ಪಕ್ಷದ ಮುಖಂಡರಾದ ಧೀರಜ್‌ ಮುನಿರಾಜು, ನಂದೀಶ್‌ ರೆಡ್ಡಿ, ಸಿ.ಕೆ.ರಾಮಮೂರ್ತಿ, ಎಸ್‌.ಹರಿಶ್‌, ಸಪ್ತಗಿರಿಗೌಡ ಸೇರಿದಂತೆ ಪಕ್ಷದ ನೂರಾರು ಕಾರ್ಯಕರ್ತರನ್ನು ಬಂಧಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷ ಧೀರಜ್‌ ಮುನಿರಾಜು, ದೇಶ ಮೊದಲು ಚಿಂತನೆಯಡಿ ‘ತಿರಂಗಾ ಯಾತ್ರೆ’ ಹಮ್ಮಿಕೊಳ್ಳುವುದರಲ್ಲಿ ತಪ್ಪೇನಿದೆ? ಆದರೆ, ಕಾರ್ಯಕರ್ತರು ತಂದ ಒಂದು ಸಾವಿರ ಅಡಿಯ ರಾಷ್ಟ್ರಧ್ವಜವನ್ನು ಕಸಿದುಕೊಂಡು ತುರ್ತು ಪರಿಸ್ಥಿತಿ ಹೇರಿದಂತೆ ಪೊಲೀಸರು ವರ್ತಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿಯು ದೇಶ ಮೊದಲು ಎಂಬ ಸಿದ್ಧಾಂತ ಹೊಂದಿದೆ. ರಾಷ್ಟ್ರಧ್ವಜಕ್ಕೆ ಸಂಬಂಧಿಸಿದ ತಿರಂಗಾ ಯಾತ್ರೆಗೆ ಪೊಲೀಸರು ಅನುಮತಿ ನಿರಾಕರಿಸಿದ್ದು ಖಂಡನೀಯ. ಪ್ರಜಾಪ್ರಭುತ್ವದ ದೇವಾಲಯ ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗುತ್ತಾರೆ. 

ಬಳಿಕ ಬಾಂಬ್ ಸ್ಫೋಟವೂ ಆಗಿದೆ. ಅದರ ಆರೋಪಿಗಳನ್ನು ಬಂಧಿಸುವ ಬದಲು ಪ್ರತಿಭಟನಾಕಾರರನ್ನು ಬಂಧಿಸಲಾಗುತ್ತಿದೆ. ಪೊಲೀಸರ ಈ ದೌರ್ಜನ್ಯ ಅತ್ಯಂತ ಖಂಡನಾರ್ಹ ಎಂದು ಆರೋಪಿಸಿದರು.