ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಜೆಡಿಎಸ್ ಪಕ್ಷದ ಸಾಮಾಜಿಕ ಜಾಲತಾಣ ಘಟಕದ ಮುಖ್ಯಸ್ಥ ಸೇರಿ ಇಬ್ಬರಿಗೆ ಸಿಸಿಬಿ ಸೈಬರ್ ಕ್ರೈಂ ಠಾಣೆ ಪೊಲೀಸರು ನೋಟಿಸ್ ನೀಡಿದ್ದಾರೆ.

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಜೆಡಿಎಸ್ ಪಕ್ಷದ ಸಾಮಾಜಿಕ ಜಾಲತಾಣ ಘಟಕದ ಮುಖ್ಯಸ್ಥ ಸೇರಿ ಇಬ್ಬರಿಗೆ ಸಿಸಿಬಿ ಸೈಬರ್ ಕ್ರೈಂ ಠಾಣೆ ಪೊಲೀಸರು ನೋಟಿಸ್ ನೀಡಿದ್ದಾರೆ.

ಘಟಕದ ಮುಖ್ಯಸ್ಥ ಚಂದನ್ ಹಾಗೂ ಮೋಹನ್ ಗೌಡ ಅವರಿಗೆ ತನಿಖೆ ಸಂಕಷ್ಟ ಎದುರಾಗಿದೆ. ಪ್ರಕರಣ ದಾಖಲಾದ ಬಳಿಕ ನಾಪತ್ತೆಯಾಗಿರುವ ಇಬ್ಬರಿಗೂ ವಿಚಾರಣೆಗೆ ಹಾಜರಾಗುವಂತೆ ಅ.13 ಹಾಗೂ 23 ರಂದು ಎರಡು ಬಾರಿ ಪೊಲೀಸರು ನೋಟಿಸ್ ನೀಡಿದ್ದಾರೆ. ಆದರೆ ತನಿಖಾಧಿಕಾರಿ ಮುಂದೆ ಅವರು ಹಾಜರಾಗಿಲ್ಲ.

ಲ್ಯಾಪ್‌ಟಾಪ್ ಸಮೇತ ಹಾಜರಾಗಿ:

ಸಾಮಾಜಿಕ ಜಾಲತಾಣಗಳಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗೌರವಕ್ಕೆ ಚ್ಯುತಿ ತರುವ ದುರುದ್ದೇಶದಿಂದ ಸ್ಟಿಂಗ್ ಆಪರೇಷನ್ ವಿಡಿಯೋ ಹರಿಬಿಡಲಾಗಿತ್ತು ಎಂಬ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಸಿಸಿಬಿ ಸೈಬರ್ ಕ್ರೈಂ ಠಾಣೆ ಪೊಲೀಸರಿಗೆ ತನಿಖೆ ಒತ್ತಾಯಿಸಿ ಸಿದ್ದರಾಮಯ್ಯ ದೂರು ನೀಡಿದ್ದರು. ಅದರನ್ವಯ ತನಿಖೆಗಿಳಿದ ಪೊಲೀಸರು, ವಿಡಿಯೋ ಅಪ್‌ಲೋಡ್ ಆಗಿದ್ದ ಯೂಟ್ಯೂಬ್‌ನ ‘ಕರ್ನಾಟಕ ಹನಿಟ್ರ್ಯಾಪ್ ಹೆಸರಿನ ಚಾನೆಲ್‌’ ಮೂಲ ಕೆದಕಿದಾಗ ಜೆಡಿಎಸ್‌ ಪಕ್ಷದ ಪದಾಧಿಕಾರಿಗಳ ಪಾತ್ರ ಪತ್ತೆಯಾಗಿದೆ ಎಂದು ಮೂಲಗಳು ಹೇಳಿವೆ.

ಈ ವಿಡಿಯೋ ಅಪ್‌ಲೋಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿಸಿದ್ದರ ಹಿಂದೆ ಶಾಮೀಲಾಗಿದ್ದಾರೆ ಎಂದು ಜೆಡಿಎಸ್ ಪಕ್ಷದ ಸಾಮಾಜಿಕ ಮಾಧ್ಯಮ ಘಟಕದ ಮುಖ್ಯಸ್ಥ ಚಂದನ್‌, ಮೋಹನ್ ಗೌಡ ಹಾಗೂ ಮುಖ್ಯಸ್ಥ ಶಂಕರ್ ವಿರುದ್ಧ ಆರೋಪ ಬಂದಿದೆ.

ಚಂದನ್ ಹಾಗೂ ಮೋಹನ್ ನಾಪತ್ತೆ

ಇನ್ನೊಂದೆಡೆ ಕೃತ್ಯ ಬಯಲಾದ ಬಳಿಕ ಚಂದನ್ ಹಾಗೂ ಮೋಹನ್ ನಾಪತ್ತೆಯಾಗಿದ್ದಾರೆ. ಶಂಕರ್‌ನನ್ನು ವಶಕ್ಕೆ ಪಡೆದು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಅಲ್ಲದೆ ಡಾಲರ್ಸ್ ಕಾಲೋನಿಯಲ್ಲಿರುವ ಚಂದನ್ ಹಾಗೂ ಗೊಲ್ಲರಹಟ್ಟಿಯಲ್ಲಿರುವ ಮೋಹನ್ ಗೌಡ ಮನೆಗಳ ಮೇಲೆ ಸಿಸಿಬಿ ದಾಳಿ ನಡೆಸಿ ಪರಿಶೀಲಿಸಿದೆ. ಈ ಇಬ್ಬರಿಗೂ ತಾವು ಬ‍ಳಸುವ ಮೊಬೈಲ್‌ಗಳು ಹಾಗೂ ಲ್ಯಾಪ್‌ ಟಾಪ್ ಸೇರಿ ಇತರೆ ಎಲೆಕ್ಟ್ರಾನಿಕ್ ವಸ್ತುಗಳ ಸಮೇತ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಎರಡು ಬಾರಿ ನೋಟಿಸ್ ನೀಡಿದೆ.