ಸಾರಾಂಶ
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಕುಟುಂಬದ ವಿರುದ್ಧ ರಾಜಕೀಯ ಪಿತೂರಿ ನಡೆಯುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.
ಬೆಳಗಾವಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಕುಟುಂಬದ ವಿರುದ್ಧ ರಾಜಕೀಯ ಪಿತೂರಿ ನಡೆಯುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮುಡಾ ಸೈಟು ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿಯಾಗಲಿ, ಅವರ ಧರ್ಮಪತ್ನಿಯಾಗಲಿ ಯಾವುದೇ ಅಕ್ರಮದಲ್ಲಿ ಭಾಗಿಯಾಗಿಲ್ಲ. ಮುಖ್ಯಮಂತ್ರಿ ಹಾಗೂ ಅವರ ಕುಟುಂಬದ ವಿರುದ್ಧ ರಾಜಕೀಯ ಪಿತೂರಿ ನಡೆಯುತ್ತಿದೆ. ಮುಡಾ ಪ್ರಕರಣ ಕುರಿತು ಇ.ಡಿ. (ಜಾರಿ ನಿರ್ದೇಶನಾಲಯ) ಸುದೀರ್ಘ ತನಿಖೆ ನಡೆಸಿದೆ. ಇಲ್ಲಿ ಅಕ್ರಮ ನಡೆದಿದೆಯೋ, ಇಲ್ಲವೋ ಎಂದು ನ್ಯಾಯಾಲಯ ವಿಚಾರಣೆ ಮಾಡಬೇಕೇ ಹೊರತು, ನೀವು, ನಾನು ವಿಚಾರಣೆ ಮಾಡುವಂತಹದ್ದಲ್ಲ. ನಾನು ಇ.ಡಿ. ತನಿಖೆ ನೋಡಿದ್ದೇನೆ. ಈ ಪ್ರಕರಣದ ಬಗ್ಗೆ ನಾನು ಹೆಚ್ಚಿಗೆ ಏನೂ ಹೇಳಲ್ಲ ಎಂದರು.
ಮುಡಾ ಹಗರಣದಲ್ಲಿ ಭಂಡತನ ಬಿಟ್ಟು ಸಿಎಂ ರಾಜೀನಾಮೆ ನೀಡಲಿ: ಬಿವೈವಿ
ಮುಡಾ ಹಗರಣ ವಿಚಾರದಲ್ಲಿ ಮುಖ್ಯಮಂತ್ರಿಗಳು ಭಂಡತನ ಬಿಟ್ಟು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಮತ್ತು ಅದಕ್ಕೂ ಮುನ್ನ ಪ್ರಕರಣವನ್ನು ಸಿಬಿಐ ತನಿಖೆಗೆ ಹಸ್ತಾಂತರಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ.
ಶನಿವಾರ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿ, ಮುಡಾ ಹಗರಣದ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ಬಯಲಿಗೆಳೆದಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ಪಕ್ಷ ಈ ಹಗರಣದ ವಿರುದ್ಧ ಸದನದೊಳಗೆ ಮತ್ತು ಹೊರಗೆ ಹೋರಾಟ ಮಾಡುತ್ತಾ ಬಂದಿದೆ. ಕಾಂಗ್ರೆಸ್ ಸರ್ಕಾರ ಮತ್ತು ಮುಖ್ಯಮಂತ್ರಿಗಳನ್ನು ತುದಿಗಾಲಲ್ಲಿ ನಿಲ್ಲಿಸಿತ್ತು ಎಂದು ಹೇಳಿದರು.
ಮೇಲ್ನೋಟಕ್ಕೆ ಅಕ್ರಮ ಸ್ಪಷ್ಟ: ಮುಡಾ ಹಗರಣ ಇದೀಗ ಮಹತ್ವದ ತಿರುವು ಪಡೆದುಕೊಂಡಿದ್ದು, ಜಾರಿ ನಿರ್ದೇಶನಾಲಯ(ಇ.ಡಿ) 300 ಕೋಟಿ ರು.ಗಿಂತ ಹೆಚ್ಚು ಬೆಲೆಬಾಳುವ ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ. ಈ ಹಗರಣದಲ್ಲಿ ಮುಖ್ಯಮಂತ್ರಿಗಳು ತಮ್ಮ ಕುಟುಂಬಕ್ಕೆ ಅಕ್ರಮವಾಗಿ 14 ನಿವೇಶನ ಪಡೆದುಕೊಂಡಿದ್ದಾರೆ ಎಂಬುದು ಮೇಲ್ನೋಟಕ್ಕೆ ಸ್ಪಷ್ಟ. ಹಗರಣದಿಂದ ಮುಡಾಕ್ಕೆ ಕೋಟಿಗಟ್ಟಲೆ ನಷ್ಟವಾಗಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಡವರಿಗೆ ಮಂಜೂರಾಗಬೇಕಿದ್ದ ನಿವೇಶನಗಳನ್ನು ರಿಯಲ್ ಎಸ್ಟೇಟ್ ಉದ್ಯಮಿಗಳು, ದಲ್ಲಾಳಿಗಳಿಗೆ ನೀಡಿದ್ದು ಸ್ಪಷ್ಟ ಎಂದು ಟೀಕಾಪ್ರಹಾರ ನಡೆಸಿದರು.
ಸ್ನೇಹಮಯಿ ಕೃಷ್ಣ ಅವರ ಮೇಲೆ ಆರೋಪ ಹೊರಿಸಿ ಅವರನ್ನು ಬಂಧಿಸುವ ಹಂತಕ್ಕೂ ರಾಜ್ಯ ಸರ್ಕಾರ ಹೋಗಿತ್ತು. ಇ.ಡಿ. ಕೈಗೊಂಡ ಕ್ರಮಗಳಿಂದ ಸಿದ್ದರಾಮಯ್ಯ ಮತ್ತೊಮ್ಮೆ ಅಪರಾಧಿ ಸ್ಥಾನದಲ್ಲಿ ನಿಂತಿದ್ದಾರೆ. ಸಿದ್ದರಾಮಯ್ಯನವರ ವಿರುದ್ಧ ಪ್ರಾಸಿಕ್ಯೂಶನ್‍ಗೆ ಅನುಮತಿ ಕೊಟ್ಟ ರಾಜ್ಯಪಾಲರ ಮೇಲೂ ಅಪವಾದ ಹೊರಿಸುವ ಕೆಲಸವನ್ನು ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಸಚಿವರು ಮಾಡಿದ್ದರು. ರಾಜ್ಯಪಾಲರು ಪ್ರಾಸಿಕ್ಯೂಶನ್‍ಗೆ ಅನುಮತಿ ಕೊಟ್ಟದ್ದೇ ಅಪರಾಧ ಎಂಬಂತೆ ಬಿಂಬಿಸಲು ಯತ್ನಿಸಿದ್ದರು. ನಂತರ ರಾಜ್ಯ ಹೈಕೋರ್ಟ್, ರಾಜ್ಯಪಾಲರು ಪ್ರಾಸಿಕ್ಯೂಶನ್‍ಗೆ ಅನುಮತಿ ಕೊಟ್ಟದ್ದು ಸರಿಯಾಗಿದೆ. ಮೇಲ್ನೋಟಕ್ಕೆ ಮುಡಾ ಹಗರಣದಲ್ಲಿ ಅವ್ಯವಹಾರ ನಡೆದಿದೆ ಎಂದಿತ್ತು. ಅಲ್ಲದೆ, ಸಿಎಂ ಕುಟುಂಬಕ್ಕೆ ಅಕ್ರಮವಾಗಿ 14 ನಿವೇಶನ ಕೊಟ್ಟಿದ್ದಾರೆ ಎಂಬುದು ಮೇಲ್ನೋಟಕ್ಕೇ ಋಜುವಾತು ಆದುದನ್ನು ಹೈಕೋರ್ಟ್ ಮತ್ತೊಮ್ಮೆ ಹೇಳಿತ್ತು ಎಂದರು.
ಸಿದ್ದರಾಮಯ್ಯ ಬಗ್ಗೆ ನಮಗೆ ದ್ವೇಷ ಇಲ್ಲ. ಆದರೆ, ಅಪರಾಧ ಆಗಿರುವ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಈಗಾಗಲೇ ರಾಜೀನಾಮೆ ಕೊಡಬೇಕಾಗಿತ್ತು. ಮುಖ್ಯಮಂತ್ರಿಗಳು ಸ್ವಯಂಪ್ರೇರಿತರಾಗಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕಿತ್ತು ಎಂದು ತಿಳಿಸಿದರು.