'ಚುನಾವಣಾ ಸಮಯದಲ್ಲಿ ರಾಜಕೀಯ ಮಾಡಬಹುದು ಆದರೆ ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡಬಾರದು'

| Published : Sep 17 2024, 12:50 AM IST / Updated: Sep 17 2024, 04:24 AM IST

ಸಾರಾಂಶ

ಚುನಾವಣಾ ಸಮಯದಲ್ಲಿ ರಾಜಕೀಯ ಮಾಡಬಹುದು ಆದರೆ ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡಬಾರದು ಎಂದು ಬಿಎಂಟಿಸಿ ಮಾಜಿ ಉಪಾಧ್ಯಕ್ಷ ಕೆ.ವಿ.ನವೀನ್‌ ಕಿರಣ್ ತಿಳಿಸಿದರು.  

 ಚಿಕ್ಕಬಳ್ಳಾಪುರ : ಚುನಾವಣಾ ಸಮಯದಲ್ಲಿ ರಾಜಕೀಯ ಮಾಡಬೇಕು, ಆದರೆ ಅಭಿವೃದ್ಧಿ ವಿಷಯದಲ್ಲಿ ಯಾರೇ ಆಗಲಿ ರಾಜಕೀಯ ಮಾಡಬಾರದು ಎಂದು ಬಿಎಂಟಿಸಿ ಮಾಜಿ ಉಪಾಧ್ಯಕ್ಷ ಕೆ.ವಿ.ನವೀನ್‌ ಕಿರಣ್ ತಿಳಿಸಿದರು.

ನಗರದ ಸಂಸದರ ಗೃಹ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಚಿಕ್ಕಬಳ್ಳಾಪುರ ಕ್ಷೇತ್ರದ ರಾಜಕಾರಣದಲ್ಲಿ ಇತ್ತೀಚೆಗೆ ಬಳಕೆಯಾಗುತ್ತಿರುವ ಭಾಷೆ ನೋಡಿದರೆ ಸಾರ್ವಜನಿಕ ಜೀವನದಲ್ಲಿ ಗುರುತಿಸಿಕೊಳ್ಳುವುದಕ್ಕೆ ಬೇಸರವಾಗುತ್ತದೆ ಎಂದರು.

ಯಾರೇ ಆಗಲಿ ಜನಪ್ರತಿನಿಧಿಗಳ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವ ಮುನ್ನ ಈ ಸಮಾಜಕ್ಕೆ ನನ್ನ ಕಾಣಿಕೆ ಏನಿದೆ ಎಂದು ಅರಿತು ಮಾತನಾಡುವುದು ಒಳಿತು. ಕಾಂಗ್ರೆಸ್‌ನ ಕೆಲ ಮುಖಂಡರು ಮಾತನಾಡಿರುವ ರೀತಿ ಖಂಡನೀಯ. ಮುಂದಿನ ದಿನಗಳಲ್ಲಿ ಇದಕ್ಕೆ ಏನು ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ತೀರ್ಮಾನಿಸಲಾಗುವುದು ಎಂದರು.ಬಹಿರಂಗ ಕ್ಷಮೆ ಕೇಳಬೇಕು

ಖಾದಿ ಮಂಡಳಿ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್ ಮಾತನಾಡಿ, ಇತ್ತೀಚಿಗೆ ಕಾಂಗ್ರೆಸ್‌ನ ಕೆಲ ಮುಖಂಡರು ಸುದ್ದಿಗೋಷ್ಠಿಯಲ್ಲಿ ಆಡಿದ ಮಾತುಗಳು ಖಂಡನೀಯ. ಇಷ್ಟು ಹೊಲಸು ಪದಗಳ ಬಳಕೆ ಸುದ್ದಿಗೋಷ್ಟಿಯಲ್ಲಿ ಹಿಂದೆ ಎಂದೂ ಬಳಸಿಲ್ಲ. ಸಂಸದರ ತೇಜೋವಧೆ ಮಾಡಿರುವ ವ್ಯಕ್ತಿಯ ಬಳಿ ಬಹಿರಂಗವಾಗಿ ಕ್ಷಮಾಪಣೆ ಕೇಳಿಸಬೇಕು. ಇಲ್ಲವಾದಲ್ಲಿ ಈ ನೆಲದ ಕಾನೂನಿನಂತೆ ಕ್ರಮಕ್ಕೆ ಮುಂದಾಗುವುದಾಗಿ ಎಚ್ಚರಿಸಿದರು.ಜೆಡಿಎಸ್ ಜಿಲ್ಲಾಧ್ಯಕ್ಷ ಮುಕ್ತ ಮುನಿಯಪ್ಪ ಮಾತನಾಡಿ, ಲೋಕಸಭಾ ಕ್ಷೇತ್ರದ ಪ್ರತಿನಿಧಿಯನ್ನು ಏಕವಚನದಲ್ಲಿ ಸಂಬೋಧಿಸಿ ಮಾತನಾಡುವುದು ಯಾರೇ ಆಗಲಿ ತಪ್ಪು. ಕೊರೋನಾ ಚುನಾವಣೆಯಲ್ಲಿ ಸಂಸದ ಡಾ.ಕೆ.ಸುಧಾಕರ್ ತಪ್ಪು ಮಾಡಿದ್ದರೆ ಕಾನೂನಿನಲ್ಲಿ ಏನೇನು ಆಗಬೇಕೋ ಅದಾಗುತ್ತದೆ. ಡಾ.ಕೆ.ಸುಧಾಕರ್ ಅವರ ಬಗ್ಗೆ ಹಗುರವಾಗಿ ಮಾತನಾಡುವ ಯಾರೇ ಆಗಲಿ ಅವರಿಗೆ ಸಂವಿಧಾನದಡಿಯೇ ಗುಣಪಾಠ ಕಲಿಸಲಾಗುವುದು ಎಂದರು.

ಶಾಸಕರ ಮಾತು ಕೇಳೊಲ್ಲ

ನಗರಸಭಾ ನಿಯೋಜಿತ ಅಧ್ಯಕ್ಷ ಗಜೇಂದ್ರ ಮಾತನಾಡಿ, ಶಾಸಕ ಪ್ರದೀಪ್ ಈಶ್ವರ್ ನೀವು ನನಗೆ ಮತ ಹಾಕಿಲ್ಲ,ನಗರಸಭಾ ಚುನಾವಣೆಯಲ್ಲಿ ಅಧ್ಯಕ್ಷನನ್ನಾಗಿ ಮಾಡಲು ಗುಲಗಂಜಿಯಷ್ಟು ಪಾತ್ರ ವಹಿಸಿಲ್ಲ, ನಿಮ್ಮ ಮಾತನ್ನು ನಾನ್ಯಾಕೆ ಕೇಳಬೇಕು? ನೆನೆಪಿಟ್ಟುಕೊಳ್ಳಿ ನಮ್ಮ ನಾಯಕರು ಸಂಸದ ಡಾ.ಕೆ.ಸುಧಾಕರ್ ಮಾತ್ರ. 

ನಾನು ಅವರ ಮಾತನ್ನು ಕೇಳುತ್ತೇನೆ ವಿನಃ ನಿನ್ನೆ ಮೊನ್ನೆ ಬಂದ ನಿಮ್ಮ ಮಾತಲ್ಲ ಎಂದರು. ಸುದ್ದಿಗೋಷ್ಟಿಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮರಳುಕುಂಟೆ ಕೃಷ್ಣಮೂರ್ತಿ, ನಗರಸಭಾ ನಿಯೋಜಿತ ಉಪಾಧ್ಯಕ್ಷ ನಾಗರಾಜ್, ಜೆಡಿಎಸ್, ಬಿಜೆಪಿ ಮುಖಂಡರು ಇದ್ದರು.