ಪ್ರಜ್ವಲ್‌ ರೇವಣ್ಣ 400 ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ, ವಿಡಿಯೋ ಮಾಡಿದ್ದಾರೆ. ಇದು ಗೊತ್ತಿದ್ದರೂ ಅತ್ಯಾಚಾರಿಯೊಬ್ಬನ ಪರ ಮತಯಾಚಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಮಹಿಳೆಯರ ಕ್ಷಮೆ ಕೋರಬೇಕು ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಆಗ್ರಹಿಸಿದ್ದಾರೆ.

ಶಿವಮೊಗ್ಗ/ರಾಯಚೂರು : ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅವರದು ಕೇವಲ ಸೆಕ್ಸ್‌ ಸ್ಕ್ಯಾಂಡಲ್‌ (ಲೈಂಗಿಕ ಹಗರಣ) ಅಲ್ಲ, ಅದೊಂದು ಮಾಸ್‌ ರೇಪ್‌(ಸಾಮೂಹಿಕ ಅತ್ಯಾಚಾರ). ಪ್ರಜ್ವಲ್‌ ರೇವಣ್ಣ 400 ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ, ವಿಡಿಯೋ ಮಾಡಿದ್ದಾರೆ. ಇದು ಗೊತ್ತಿದ್ದರೂ ಅತ್ಯಾಚಾರಿಯೊಬ್ಬನ ಪರ ಮತಯಾಚಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಮಹಿಳೆಯರ ಕ್ಷಮೆ ಕೋರಬೇಕು ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಆಗ್ರಹಿಸಿದ್ದಾರೆ.

ಶಿವಮೊಗ್ಗ ಹಾಗೂ ರಾಯಚೂರಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ಭಾಷಣದಲ್ಲಿ ಗುರುವಾರ ಮಾತನಾಡಿದ ಅವರು ದೇಶಾದ್ಯಂತ ಚರ್ಚೆಗೆ ಕಾರಣವಾಗಿರುವ ಜೆಡಿಎಸ್‌-ಬಿಜೆಪಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಪ್ರಕರಣ ಮುಂದಿಟ್ಟುಕೊಂಡು ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

ಪ್ರಧಾನಿ ಮೋದಿ ಅವರು ಮಾಸ್‌ ರೇಪಿಸ್ಟ್‌ ಅನ್ನು ವೇದಿಕೆಯಲ್ಲೇ ಬೆಂಬಲಿಸಿದ್ದಾರೆ. ಈ ಮಾಸ್‌ ರೇಪಿಸ್ಟ್‌ಗೆ ಮತ ಹಾಕಿದರೆ ನನಗೆ ಅನುಕೂಲವಾಗುತ್ತದೆ ಎಂದು ಕರ್ನಾಟಕದ ಜನತೆಗೆ ಹೇಳಿದ್ದಾರೆ. ಹೀಗೆ ಪ್ರಜ್ವಲ್‌ ರೇವಣ್ಣ ಪರ ಮತಯಾಚಿಸುವಾಗ ಆತ ಏನು ಮಾಡಿದ್ದಾನೆಂಬ ಅರಿವು ಪ್ರಧಾನಿ ಮೋದಿ ಅವರಿಗೆ ಮೊದಲೇ ಇತ್ತು ಎಂಬ ವಿಚಾರವನ್ನು ಕರ್ನಾಟಕದ ಎಲ್ಲ ಮಹಿಳೆಯರು ತಿಳಿದುಕೊಳ್ಳಬೇಕು ಎಂದರು.

''''ಮೋದಿ ಅವರಿಗೆ ಪ್ರಜ್ವಲ್‌ ಲೈಂಗಿಕ ಹಗರಣದ ಕುರಿತು ಅರಿವಿತ್ತು. ಸಿಬಿಐ, ಇ.ಡಿ, ವಲಸೆ ಇಲಾಖೆಯಂಥ ಎಲ್ಲ ಸಂಸ್ಥೆಗಳು ಮೋದಿ ಅವರ ಕೈಯಲ್ಲೇ ಇವೆ. ಮನಸ್ಸು ಮಾಡಿದ್ದರೆ ಅರೆಕ್ಷಣದಲ್ಲೇ ಪ್ರಜ್ವಲ್‌ ಬಂಧನಕ್ಕೊಳಪಡಿಸಬಹುದಿತ್ತು. ಆದರೆ ಮೋದಿ ಅವರು ಪ್ರಜ್ವಲ್‌ ದೇಶ ಬಿಟ್ಟು ಪರಾರಿಯಾಗಲು ಅವಕಾಶ ಮಾಡಿಕೊಟ್ಟಿದ್ದಾರೆ. ಅತ್ಯಾಚಾರಿ ವಿದೇಶಕ್ಕೆ ಪರಾರಿಯಾಗಲು ಅವಕಾಶ ಮಾಡಿಕೊಡುವುದು ಮೋದಿ ಗ್ಯಾರಂಟಿ ಎಂದು ರಾಹುಲ್‌ ಗಾಂಧಿ ಲೇವಡಿ ಮಾಡಿದರು.

ಅಮಿತ್‌ ಶಾ ಅವರಿಗೂ ಪ್ರಜ್ವಲ್‌ ಹಗರಣದ ಕುರಿತು ಮೊದಲೇ ಮಾಹಿತಿ ಇತ್ತು. ಶಾ ಅವರಿಗೆ ಗೊತ್ತಿದೆಯೆಂದರೆ ಪ್ರಧಾನಿಗೂ ಆ ಕುರಿತು ಮಾಹಿತಿ ಇರುತ್ತದೆಂದೇ ಅರ್ಥ. ಪ್ರಧಾನಿ ಅವರಿಗೆ ಅಧಿಕಾರ ಮತ್ತು ಮೈತ್ರಿ ಬೇಕಿತ್ತು. ಅದಕ್ಕಾಗಿ ಪ್ರಜ್ವಲ್‌ನನ್ನು ರಕ್ಷಿಸಿದರು ಎಂಬುದು ರಾಜ್ಯದ ಎಲ್ಲಾ ಮಹಿಳೆಯರಿಗೆ ಗೊತ್ತಿದೆ. ಬಿಜೆಪಿ ಮತ್ತು ಕಾಂಗ್ರೆಸ್‌ ನಡುವಿನ ವ್ಯತ್ಯಾಸವೇ ಇದು. ಬಿಜೆಪಿಯವರು ಅಧಿಕಾರಕ್ಕಾಗಿ ಯಾವಮಟ್ಟಕ್ಕಾದ್ದರೂ ಇಳಿಯಬಲ್ಲರು. ಅದಕ್ಕೆ ಮಿತಿಯೆಂಬುದೇ ಇಲ್ಲ. ಮಹಿಳೆಯರ ನೋವಿಗೆ ಅವರ ಮುಂದೆ ಅರ್ಥವೇ ಇಲ್ಲ ಎಂದು ಆರೋಪಿಸಿದರು.

ಪ್ರಜ್ವಲ್‌ನನ್ನು ಯಾಕೆ ರಕ್ಷಣೆ ಮಾಡಿದರು? ಯಾಕೆ ಆತ ದೇಶಬಿಟ್ಟು ಪಲಾಯನ ಮಾಡಲು ಅವಕಾಶ ಮಾಡಿಕೊಟ್ಟೆ ಎಂಬುದಕ್ಕೆ ಮೋದಿ ಅವರು ಈ ದೇಶದ ಪ್ರತಿಯೊಬ್ಬ ಮಹಿಳೆಯರಿಗೂ ಉತ್ತರ ಕೊಡಬೇಕು ಎಂದರು.

ವಿಶ್ವದ ಯಾವೊಬ್ಬ ನಾಯಕನೂ ಮಾಸ್‌ ರೇಪಿಸ್ಟ್‌ ಪರ ಮತ ಯಾಚಿಸುವುದಿಲ್ಲ. ಆದರೆ ಪ್ರಜ್ವಲ್ ಕುಕೃತ್ಯಗಳ ಮಾಹಿತಿ ಇದ್ದರೂ ಆತನನ್ನು ಬೆಂಬಲಿಸಿದ, ಜೆಡಿಎಸ್‌ ಜತೆಗೆ ಮೈತ್ರಿ ಮಾಡಿಕೊಂಡಿರುವ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್‌ ಶಾ ಮತ್ತು ಎಲ್ಲ ಬಿಜೆಪಿ ನಾಯಕರು ದೇಶದ ಎಲ್ಲ ಮಹಿಳೆಯರಿಗೆ ಅವಮಾನ ಮಾಡಿದ್ದಾರೆ. ಇದಕ್ಕಾಗಿ ಪ್ರಧಾನಿ ಮೋದಿ ಮತ್ತು ಅಮಿತ್‌ ಶಾ ಅವರು ದೇಶದ ಮಹಿಳೆಯರ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.