ಬಣ ಜಗಳದ ವಿರುದ್ಧ ಪ್ರಹ್ಲಾದ್‌ ಜೋಶಿ ನೇತೃತ್ವದ ನಿಯೋಗ ಅಮಿತ್‌ ಶಾಗೆ ದೂರು - ರಾಜ್ಯ ಬಿಜೆಪಿ ಸಂಘರ್ಷ ದಿಲ್ಲಿಗೆ

| Published : Dec 01 2024, 09:55 AM IST

Amith Shah
ಬಣ ಜಗಳದ ವಿರುದ್ಧ ಪ್ರಹ್ಲಾದ್‌ ಜೋಶಿ ನೇತೃತ್ವದ ನಿಯೋಗ ಅಮಿತ್‌ ಶಾಗೆ ದೂರು - ರಾಜ್ಯ ಬಿಜೆಪಿ ಸಂಘರ್ಷ ದಿಲ್ಲಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ಬಣ ಜಗಳದ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ನೇತೃತ್ವದ ಸಂಸದರ ತಂಡವೊಂದು ಶನಿವಾರ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ದೂರು ನೀಡಿದೆ

ನವದೆಹಲಿ : ರಾಜ್ಯ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ವಿಜಯಪುರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಬಣಗಳ ನಡುವಿನ ಬಡಿದಾಟ ತಾರಕಕ್ಕೇರಿರುವ ಬೆನ್ನಹಿಂದೆಯೇ ಈ ಬಣ ಜಗಳದ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ನೇತೃತ್ವದ ಸಂಸದರ ತಂಡವೊಂದು ಶನಿವಾರ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ದೂರು ನೀಡಿದೆ. ಹೈಕಮಾಂಡ್‌ ಮಧ್ಯ ಪ್ರವೇಶಿಸಿ, ಈ ಬಣ ಜಗಳ ನಿಲ್ಲಿಸಬೇಕು ಎಂದು ಮನವಿ ಮಾಡಿದೆ.

ಪ್ರಹ್ಲಾದ್‌ ಜೋಶಿ ನೇತೃತ್ವದಲ್ಲಿ ಈರಣ್ಣ ಕಡಾಡಿ, ಬಿ.ವೈ.ರಾಘವೇಂದ್ರ, ಜಗದೀಶ್ ಶೆಟ್ಟರ್ ಸೇರಿ ವಿವಿಧ ಸಂಸದರು ದೆಹಲಿಯಲ್ಲಿ ಶನಿವಾರ ಅಮಿತ್ ಶಾರನ್ನು ಭೇಟಿ ಮಾಡಿದರು. ಯತ್ನಾಳ್‌ ಹಾಗೂ ವಿಜಯೇಂದ್ರ ಅವರ ಎರಡೂ ಬಣಗಳ ನಡುವಿನ ಹೇಳಿಕೆ-ಪ್ರತಿಹೇಳಿಕೆಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಇಬ್ಬರೂ ನಾಯಕರು ತಾವು ಯಾರಿಗೂ ಕಡಿಮೆ ಇಲ್ಲ ಎನ್ನುವ ರೀತಿಯಲ್ಲಿ ಬೀದಿ ಜಗಳಕ್ಕೆ ನಿಂತಿದ್ದಾರೆ. ಇದರಿಂದ ಪಕ್ಷದ ವರ್ಚಸ್ಸು ಕುಂದುತ್ತಿದೆ. ಕಾರ್ಯಕರ್ತರಿಗೆ, ಜನರಿಗೆ ತಪ್ಪು ಸಂದೇಶ ರವಾನೆಯಾಗುತ್ತಿದೆ. ಈ ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸಿ ಎಂದು ಮನವಿ ಮಾಡಿದರು.

ಇನ್ನೇನು ಒಂದೆರಡು ತಿಂಗಳಲ್ಲಿ ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯಿತಿ ಚುನಾವಣೆಗಳು ಬರಲಿವೆ. ಹೀಗಾಗಿ, ಬಣ ಜಗಳ ಇತ್ಯರ್ಥ ಮಾಡುವ ಬಗ್ಗೆ ತಕ್ಷಣ ಗಮನ ಹರಿಸಿ ಎಂದು ನಿಯೋಗ ಕೋರಿತು.

ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಸಂಸದರ ಅಹವಾಲು ಆಲಿಸಿದ ಶಾ, ಪಕ್ಷದಲ್ಲಿ ಉಂಟಾಗಿರುವ ಬಣ ಜಗಳಕ್ಕೆ ಕಡಿವಾಣ ಹಾಕುವುದಾಗಿ ಸಂಸದರ ನಿಯೋಗಕ್ಕೆ ಭರವಸೆ ನೀಡಿದರು.

‘ಯತ್ನಾಳ್‌ ಉಚ್ಚಾಟನೆ ಬೇಡ, ಮಾತುಕತೆಯ ಮೂಲಕವೇ ಬಗೆಹರಿಸಿ’

ವಿಜಯೇಂದ್ರ ಮತ್ತು ಯತ್ನಾಳ್‌ ನಡುವೆ ಉಂಟಾಗಿರುವ ಮನಸ್ತಾಪವನ್ನು ಮಾತುಕತೆ ಮೂಲಕವೇ ಬಗೆಹರಿಸಬೇಕು. ಯತ್ನಾಳ್‌ ಅಸಮಾಧಾನ ವ್ಯಕ್ತಪಡಿಸಿದ ಮಾತ್ರಕ್ಕೆ ಅವರನ್ನು ಉಚ್ಚಾಟನೆ ಮಾಡುವುದು ಸರಿಯಲ್ಲ. ಬಿಜೆಪಿಯ ಹಿಂದೆ ಬಲವಾಗಿ ನಿಂತಿರುವುದು ಲಿಂಗಾಯತ ಸಮುದಾಯ. ಅದರಲ್ಲೂ ಪಂಚಮಸಾಲಿಗಳು ಬಲವಾಗಿ ನಿಂತಿದ್ದಾರೆ. ಹೀಗಾಗಿ ಉಚ್ಚಾಟನಾ ಕ್ರಮ ಮತ್ತೊಂದು ಹಂತಕ್ಕೆ ಹೋಗಬಹುದು. ಸಮುದಾಯಕ್ಕೆ ಕೆಟ್ಟ ಸಂದೇಶ ರವಾನೆ ಆಗಬಹುದು. ಹೀಗಾಗಿ, ಇಬ್ಬರನ್ನೂ ಒಂದು ವೇದಿಕೆಗೆ ಕರೆ ತನ್ನಿ, ಅಸಮಾಧಾನಗಳನ್ನು ಪರಿಹರಿಸಿ ಎಂದು ಸಂಸದರು ಮನವಿ ಮಾಡಿದರು ಎಂದು ಮೂಲಗಳು ಹೇಳಿವೆ.