ಸಾರಾಂಶ
ಮೈಸೂರು : ಮಹರ್ಷಿ ವಾಲ್ಮೀಕಿ ನಿಗಮ ಹಗರಣ ಸಂಬಂಧ ಸೂಕ್ತ ತನಿಖೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಸೆ.17ಕ್ಕೆ ಬಿಜೆಪಿ ನೇತಾರ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ಪಾದಯಾತ್ರೆ ನಡೆಸಲು ನಿರ್ಧರಿಸಲಾಗಿದೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದರು.
ಬುಧವಾರ ಸುದ್ದಿಗಾರರೊಡನೆ ಮಾತನಾಡಿ, ಪಾದಯಾತ್ರೆ ಸಂಬಂಧ ಬೆಳಗಾವಿಯಲ್ಲಿ ಸಭೆ ನಡೆಸಲಾಗಿದೆ. ಅದು ಅತೃಪ್ತರ, ಬಂಡಾಯಗಾರರ ಸಭೆಯಲ್ಲ. ಬಿಜೆಪಿಯ ಜನಪ್ರಿಯ ನೇತಾರ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ನಡೆದ ಸಭೆ. ಸಭೆಯಲ್ಲಿ ನಾನು ಮೈಸೂರು ಚಲೋ ಪಾದಯಾತ್ರೆ ಅನುಭವ ಹಂಚಿಕೊಂಡಿದ್ದೇನೆ ಎಂದರು.
ವಾಲ್ಮೀಕಿ ಹಗರಣದ ವಿರುದ್ಧ ಸರಿಯಾದ ಹೋರಾಟ ನಡೆದರೆ ಮುಖ್ಯಮಂತ್ರಿಗಳ ಕುರ್ಚಿ ಅಲ್ಲಾಡುತ್ತದೆ. ಬಸನಗೌಡ ಯತ್ನಾಳ್ ಅವರಂಥ ದೊಡ್ಡ ನಾಯಕರು ಕರೆದ ಕಾರಣ ನಾನು ಹೋಗಿದ್ದೆ. ಈ ಪಾದಯಾತ್ರೆ ಯಾರದ್ದೋ ಮೇಲಾಟದ ಕಾರ್ಯಕ್ರಮವಲ್ಲ. ಯಾರ ನಾಯಕತ್ವ ಪ್ರದರ್ಶನವೂ ಅಲ್ಲ. ಪಾದಯಾತ್ರೆಗೆ ಹೈಕಮಾಂಡ್ ಅನುಮತಿ ಕೊಡುತ್ತದೆ. ಅವರ ಅನುಮತಿಯೊಂದಿಗೆ ಪಾದಯಾತ್ರೆ ಮಾಡಲಾಗುವುದು. ಬಿಜೆಪಿ ರಾಜ್ಯಾಧ್ಯಕ್ಷರಾದಿಯಾಗಿ ಎಲ್ಲರನ್ನೂ ಪಾದಯಾತ್ರೆಗೆ ಕರೆಯುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ರಾಜ್ಯದಲ್ಲೇ ಇರಲು ಹೇಳಿದ್ದಾರೆ: ಕೇಂದ್ರಕ್ಕೆ ಹೋಗಬೇಡಿ ರಾಜ್ಯದಲ್ಲೇ ಇರಿ ಎಂಬ ಸಂದೇಶವನ್ನು ವರಿಷ್ಠರು ನೀಡಿದ್ದಾರೆ. ಅದಕ್ಕೆ ಇಲ್ಲೇ ಇದ್ದೇನೆ. ನಾನು ಅನ್ಯಾಯದ ವಿರುದ್ಧವಷ್ಟೆ ರೆಬೆಲ್, ಪಕ್ಷದ ವಿರುದ್ಧ ಅಲ್ಲ. ಬಿಜೆಪಿಯ ದೊಡ್ಡ ದೊಡ್ಡ ನಾಯಕರಿಗಿಂತ ನಾನು ಪಕ್ಷದಲ್ಲಿ ಹಿರಿಯ. ಯಾಕೆಂದರೆ ನನ್ನ ತಂದೆ ಆರೆಸ್ಸೆಸ್‌ನಲ್ಲಿದ್ದವರು. ನಾನು ಪಕ್ಷಕ್ಕಾಗಿ ಬ್ಯಾನರ್, ಬಂಟಿಂಗ್ ಕಟ್ಟಿಲ್ಲದೇ ಇರಬಹುದು. ಆದರೆ ಯುವ ಸಮೂಹವನ್ನು ಪಕ್ಷಕ್ಕೆ ಸೆಳೆಯುವಲ್ಲಿ ಯಶಸ್ವಿಯಾಗಿದ್ದೇನೆ ಎಂದು ಹೇಳಿದರು.
ಯಡಿಯೂರಪ್ಪರಂಥವರು ನೇಪಥ್ಯಕ್ಕೆ ಸರಿಯುತ್ತಿರುವ ಕಾರಣ ನನ್ನಂಥ ಯುವ ರಕ್ತ ಪಕ್ಷಕ್ಕೆ ಬರಬೇಕಿದೆ. ಹೀಗಾಗಿ ನನ್ನನ್ನು ರಾಜ್ಯದಲ್ಲೇ ಉಳಿಸಿದ್ದಾರೆ. ನಾನು ಯಾರನ್ನೋ ಓಲೈಸಲು, ಮೆಚ್ಚಿಸಲು ರಾಜಕಾರಣ ಮಾಡಲ್ಲ. ಯಾರ ಮನೆ ಬಾಗಿಲೂ ತಟ್ಟಲ್ಲ. ನನಗೆ ಟಿಕೆಟ್ ಕೊಟ್ಟಿದ್ದು ಬಿಜೆಪಿ ಅಲ್ಲ. ಆರೆಸ್ಸೆಸ್ ಎಂದು ತಿಳಿಸಿದರು.ಕ್ಷೇತ್ರ, ಜಾತಿ ಆಚೆಗೆ ಜನಪ್ರಿಯತೆ ಇರುವ ಬಸನಗೌಡ ಯತ್ನಾಳ್‌ರಂಥವರಲ್ಲಿ ನಾನು ಕೂಡ ಒಬ್ಬ. ಇದರ ಬಗ್ಗೆ ಯಾರಿಗಾದರೂ ಅನುಮಾನ ಇದೆಯಾ? ಮೈಸೂರಲ್ಲಿ ನೆಲೆ, ಪ್ರೀತಿ ಸಿಕ್ಕಿದೆ. ನಾನು ಮೈಸೂರಲ್ಲೇ ಇರುತ್ತೇನೆ ಎಂದು ಹೇಳಿದರು.