ದಾಖಲೆಯ 16ನೇ ಬಜೆಟ್‌ ಮಂಡನೆಗೆ ಸಿದ್ದು ಸಿದ್ಧತೆ! -ಸಿಎಂ ಆಗಿ ಸಿದ್ದು ಪಾಲಿಗಿದು 9ನೇ ಬಜೆಟ್‌

| N/A | Published : Feb 18 2025, 05:21 AM IST

Siddaramaiah

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾ.7ರಂದು ದಾಖಲೆಯ 16ನೇ ಬಜೆಟ್‌ ಹಾಗೂ ಮುಖ್ಯಮಂತ್ರಿ ಆಗಿ 9ನೇ ಬಜೆಟ್‌ ಮಂಡನೆ ಮಾಡಲಿದ್ದಾರೆ.

  ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾ.7ರಂದು ದಾಖಲೆಯ 16ನೇ ಬಜೆಟ್‌ ಹಾಗೂ ಮುಖ್ಯಮಂತ್ರಿ ಆಗಿ 9ನೇ ಬಜೆಟ್‌ ಮಂಡನೆ ಮಾಡಲಿದ್ದಾರೆ.

ರಾಜ್ಯದ ಮಟ್ಟಿಗೆ ಅತ್ಯಧಿಕ ಬಜೆಟ್‌ ಮಂಡನೆ ಮಾಡಿರುವ ದಾಖಲೆಯನ್ನು ಈಗಾಗಲೇ ಹೊಂದಿರುವ ಸಿದ್ದರಾಮಯ್ಯ ಈಗ ರಾಷ್ಟ್ರೀಯ ದಾಖಲೆ ಮೇಲೆ ಕಣ್ಣಿಟ್ಟಿದ್ದಾರೆ.

ರಾಜ್ಯದ ಮಟ್ಟಿಗೆ 13 ಬಜೆಟ್‌ ಮಂಡಿಸಿದ್ದ ಮಾಜಿ ಮುಖ್ಯಮಂತ್ರಿ ದಿ. ರಾಮಕೃಷ್ಣ ಹೆಗಡೆ ಅವರ ದಾಖಲೆಯನ್ನು 2023ರಲ್ಲೇ ತಮ್ಮ 14ನೇ ಬಜೆಟ್‌ ಮಂಡಿಸುವ ಮೂಲಕ ಸಿದ್ದರಾಮಯ್ಯ ಮುರಿದಿದ್ದರು. ಇದೀಗ ರಾಷ್ಟ್ರ ಮಟ್ಟದ ದಾಖಲೆಯತ್ತ ದಾಪುಗಾಲಿಡುತ್ತಿದ್ದಾರೆ.

ಅದರೆ ಆ ಸಾಧನೆ ಮಾಡಲು ಇನ್ನೂ ಮೂರು ಬಾರಿ ಬಜೆಟ್ ಮಂಡಿಸಬೇಕು. ಏಕೆಂದರೆ, ರಾಜ್ಯದ ಮಾಜಿ ರಾಜ್ಯಪಾಲರಾದ ವಜುಭಾಯಿ ವಾಲ (ವಿ.ಆರ್‌.ವಾಲ) ಅವರು ಗುಜರಾತ್‌ನಲ್ಲಿ ಹಣಕಾಸು ಸಚಿವರಾಗಿ ಬರೋಬ್ಬರಿ 18 ಬಜೆಟ್ ಮಂಡನೆ ಮಾಡಿದ್ದಾರೆ. ರಾಷ್ಟ್ರಮಟ್ಟದಲ್ಲಿ ಅತಿ ಹೆಚ್ಚು ಬಜೆಟ್‌ ಮಂಡನೆ ಮಾಡಿದ ದಾಖಲೆ ವಿ.ಆರ್‌.ವಾಲ ಅವರ ಹೆಸರಿನಲ್ಲಿದೆ.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಪೂರ್ಣಾವಧಿ ಪೂರೈಸಿ 2027ರಲ್ಲಿ ಚುನಾವಣಾ ಪೂರ್ವ ಬಜೆಟ್ ಮಂಡಿಸಿದರೆ ವಿ.ಆರ್.ವಾಲ ಅವರ ಹೆಸರಿನಲ್ಲಿರುವ ರಾಷ್ಟ್ರೀಯ ದಾಖಲೆ ಸರಿಗಟ್ಟಬಹುದಾಗಿದೆ.

ಕೇಂದ್ರದ ಪಾಲು ಕೊಡುತ್ತಿಲ್ಲ:

ಜನಜೀವನ್‌ ಮಿಷನ್ ಯೋಜನೆ ಕುರಿತು ವಾಗ್ವಾದ ವಿಚಾರವಾಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಸೋಮಣ್ಣ ಹೇಳಿಕೆಯಲ್ಲಿ ಅರ್ಥವಿಲ್ಲ. ನಾವು ವೇಗವಾಗಿ ಕೆಲಸ ಮಾಡುತ್ತಿದ್ದೇವೆ. ಜತೆಗೆ ರಾಜ್ಯದ ಪಾಲಿನ ಹಣವನ್ನೂ ಶೇ.85 ರಷ್ಟು ಬಿಡುಗಡೆ ಮಾಡಿದ್ದೇವೆ. ಆದರೆ ಕೇಂದ್ರದ ಪಾಲನ್ನು ಅವರು ಕೊಡುತ್ತಿಲ್ಲ. ಹಾಗಾಗಿ, ಅದರ ಬಗ್ಗೆ ಟ್ವೀಟ್ ಮಾಡಿದ್ದೇನೆ ಎಂದು ಹೇಳಿದರು.

ಯಾವ ಗ್ಯಾರಂಟಿಯನ್ನೂ ನಿಲ್ಲಿಸಲ್ಲ: ಸಿಎಂ

ಗೃಹಲಕ್ಷ್ಮೀ, ಅನ್ನಭಾಗ್ಯ ಹಣ ಬಿಡುಗಡೆ ವಿಳಂಬದ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಹಣ ಬಿಡುಗಡೆ ವಿಳಂಬವಾಗಿದೆ ಎಂದು ಯಾರು ಹೇಳಿದರು? ಆ ಬಗ್ಗೆ ನನಗೆ ಗೊತ್ತಿಲ್ಲ. ಈ ಬಗ್ಗೆ ಪರಿಶೀಲಿಸಿ ವಿಳಂಬವಾಗಿದ್ದರೆ ಕೂಡಲೇ ಹಣ ಬಿಡುಗಡೆ ಮಾಡುತ್ತೇವೆ. ಯಾವ ಗ್ಯಾರಂಟಿ ಯೋಜನೆಯನ್ನೂ ನಿಲ್ಲಿಸುವ ಪ್ರಶ್ನೆಯೇ ಇಲ್ಲ. ಇಲ್ಲಿಯವರೆಗೆ ಮಾಡಿದ್ದೇವೆ, ಮುಂದೆಯೂ ಮಾಡುತ್ತೇವೆ ಎಂದು ಹೇಳಿದರು.