ಅಧ್ಯಕ್ಷ ವಿಜಯೇಂದ್ರ ಮೊದಲ ಸೈಲೆಂಟ್‌ ಆಪರೇಷನ್‌ ಯಶಸ್ವಿ; ಹುದ್ದೆ ವಹಿಸಿಕೊಳ್ಳುತ್ತಿದ್ದಂತೆ ಘರ್‌ ವಾಪ್ಸಿ ಆರಂಭ

| Published : Jan 26 2024, 01:48 AM IST

ಅಧ್ಯಕ್ಷ ವಿಜಯೇಂದ್ರ ಮೊದಲ ಸೈಲೆಂಟ್‌ ಆಪರೇಷನ್‌ ಯಶಸ್ವಿ; ಹುದ್ದೆ ವಹಿಸಿಕೊಳ್ಳುತ್ತಿದ್ದಂತೆ ಘರ್‌ ವಾಪ್ಸಿ ಆರಂಭ
Share this Article
  • FB
  • TW
  • Linkdin
  • Email

ಸಾರಾಂಶ

ಅಧ್ಯಕ್ಷ ವಿಜಯೇಂದ್ರ ಮೊದಲ ಸೈಲೆಂಟ್‌ ಆಪರೇಷನ್‌ ಯಶಸ್ವಿ; ಹುದ್ದೆ ವಹಿಸಿಕೊಳ್ಳುತ್ತಿದ್ದಂತೆ ಘರ್‌ ವಾಪ್ಸಿ ಆರಂಭ

ಕನ್ನಡಪ್ರಭ ವಾರ್ತೆ ಬೆಂಗಳೂರು

ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಆರಂಭಗೊಂಡ ಪ್ರಯತ್ನ ಗುರುವಾರ ಯಶಸ್ವಿಯಾಗಿದೆ.ಬಹುಶಃ ಇತ್ತೀಚಿನ ದಿನಗಳಲ್ಲಿ ಹೆಚ್ಚು ಸದ್ದು ಇಲ್ಲದೆ, ಸುದ್ದಿ ಮಾಡದೆ ಕೈಗೊಂಡಿರುವ ರಾಜಕೀಯ ಆಪರೇಷನ್ ಇದು ಎನ್ನಬಹುದೇನೋ. ಕಳೆದ ಎರಡು-ಮೂರು ದಿನಗಳ ಹಿಂದೆ ಶೆಟ್ಟರ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರಬಹುದು ಎಂಬ ವದಂತಿ ದಟ್ಟವಾಗಿ ಹಬ್ಬಿತು. ಅದರ ಸಾಧ್ಯತೆ ಬಗ್ಗೆ ಚರ್ಚೆ ಆರಂಭವಾಗುವ ಮೊದಲೇ ಶೆಟ್ಟರ್‌ ಬಿಜೆಪಿ ಸೇರ್ಪಡೆಯಾದರು.ಕಳೆದ ನವೆಂಬರ್‌ 10ರಂದು ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡ ಬಳಿಕ ಪಕ್ಷ ತೊರೆದವರನ್ನು ವಾಪಸ್ ಕರೆತರುವ ನಿರ್ಧಾರ ಕೈಗೊಂಡು ಕಾರ್ಯಪ್ರವೃತ್ತರಾದರು. ಆ ಪೈಕಿ ಜಗದೀಶ್ ಶೆಟ್ಟರ್ ಅವರ ಹೆಸರು ಮುಂಚೂಣಿಯಲ್ಲಿತ್ತು. ಪ್ರಬಲ ಲಿಂಗಾಯತ ಸಮುದಾಯದ ನಾಯಕರಾಗಿರುವ ಹಾಗೂ ಮಾಜಿ ಮುಖ್ಯಮಂತ್ರಿಯೂ ಆಗಿರುವ ಶೆಟ್ಟರ್ ಅವರನ್ನು ವಾಪಸ್ ಕರೆತಂದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಶಾಕ್ ಉಂಟಾಗಲಿದೆ ಎಂಬ ತಂತ್ರ ರೂಪಿಸಿದರು.ಶೆಟ್ಟರ್ ಮತ್ತಿತರ ನಾಯಕರು ಪಕ್ಷ ತೊರೆದಿದ್ದು ಸೋಲಿಗೆ ಕಾರಣ ಎಂಬ ಹೇಳಿಕೆಗಳು ಪಕ್ಷದ ರಾಜ್ಯ ಮುಖಂಡರಿಂದ ಹೊರಬೀಳತೊಡಗಿದವು. ಹೀಗಾಗಿ ನಾಯಕರ ವಾಪಸಿಗೆ ಪೂರಕವಾಗಿ ಮುಂಚೂಣಿಗೆ ನಿಂತವರು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ. ಜತೆಗೆ ಶೆಟ್ಟರ್ ಆಪ್ತರಾಗಿರುವ ಮಾಜಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ. ಇದಕ್ಕೆ ಬೆಂಬಲ ನೀಡಿದ್ದು ಸಂಘ ಪರಿವಾರದ ಉತ್ತರ ಪ್ರಾಂತ್ಯದ ಮುಖಂಡರು. ರಾಮಮಂದಿರ ಉದ್ಘಾಟನೆ ಮುಗಿಯಲಿ ಎಂದು ಕಾಯುತ್ತಿದ್ದ ವಿಜಯೇಂದ್ರ ಹಾಗೂ ಯಡಿಯೂರಪ್ಪ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಸಂಪರ್ಕಿಸಿ ಬುಧವಾರ ದಿಢೀರನೆ ದೆಹಲಿಗೆ ತೆರಳಿದರು. ಅದರ ಬೆನ್ನಲ್ಲೇ ಶೆಟ್ಟರ್ ಕೂಡ ದೆಹಲಿಗೆ ದೌಡಾಯಿಸಿದರು. ಇದಕ್ಕೂ ಮೊದಲೇ ವಿಜಯೇಂದ್ರ ಹಾಗೂ ಯಡಿಯೂರಪ್ಪ ಅವರು ಶೆಟ್ಟರ್ ಜತೆ ಹಲವು ಸುತ್ತಿನ ಮಾತುಕತೆ ನಡೆಸಿದ್ದರು.ಗುರುವಾರ ಬೆಳಗ್ಗೆ ಅಮಿತ್ ಶಾ ಅವರನ್ನು ಭೇಟಿ ಮಾಡಿದ ಶೆಟ್ಚರ್‌, ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರು ಸುದೀರ್ಘ ಮಾತುಕತೆ ನಡೆಸಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಿಮಗೆ ಆಗಿರುವ ಅಗೌರವ, ಅನ್ಯಾಯ ಸರಿಪಡಿಸಲಾಗುವುದು. ಆ ಬಗ್ಗೆ ನಂಬಿಕೆ ಇಡಿ. ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸುವ ಸಂಕಲ್ಪದೊಂದಿಗೆ ಬನ್ನಿ ಎಂಬ ಆಹ್ವಾನ ನೀಡಿದರು. ಶೆಟ್ಟರ್ ಅಸ್ತು ಎಂದರು.ಬಳಿಕ ಅಲ್ಲಿಂದ ನೇರವಾಗಿ ಪಕ್ಷದ ಕೇಂದ್ರ ಕಚೇರಿಗೆ ಆಗಮಿಸಿ ಸಾಂಕೇತಿಕವಾಗಿ ಅಮಿತ್ ಶಾ ಅವರ ಆಪ್ತರೂ ಆಗಿರುವ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವ ಭೂಪೇಂದ್ರ ಯಾದವ್ ಅವರ ಸಮ್ಮುಖದಲ್ಲಿ ಶೆಟ್ಟರ್‌ ಅವರು ಬಿಜೆಪಿ ಸೇರ್ಪಡೆಯಾದರು. ನಂತರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿ ರಾತ್ರಿ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರೊಂದಿಗೆ ಬೆಂಗಳೂರಿಗೆ ವಾಪಸಾದರು.