ಪ್ರಧಾನಿ ಒಂದು ರಾಜ್ಯದ ಪರ ಇರಲು ಆಗೋಲ್ಲ: ಸುಮಲತಾ
KannadaprabhaNewsNetwork | Published : Oct 10 2023, 01:01 AM IST
ಪ್ರಧಾನಿ ಒಂದು ರಾಜ್ಯದ ಪರ ಇರಲು ಆಗೋಲ್ಲ: ಸುಮಲತಾ
ಸಾರಾಂಶ
ಪ್ರಧಾನಿ ಒಂದು ರಾಜ್ಯದ ಪರ ಇರಲು ಆಗೋಲ್ಲ: ಸುಮಲತಾ
- ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಬೇಕೆಂಬ ಟೀಕೆಗೆ ಎದುರೇಟು - ಒಕ್ಕೂಟ ಮಾಡಿಕೊಂಡಿದ್ದಾರೆ, ಮಾತನಾಡಿ ಬಗೆಹರಿಸಲಿ ಕನ್ನಡಪ್ರಭ ವಾರ್ತೆ ಮದ್ದೂರು ಕಾವೇರಿ ನದಿ ನೀರು ಹಂಚಿಕೆ ವಿಷಯದಲ್ಲಿ ಪ್ರಧಾನಿ ಮಧ್ಯಪ್ರವೇಶ ಮಾಡಬೇಕೆನ್ನುವವರಿಗೆ ತಿರುಗೇಟು ನೀಡಿರುವ ಸಂಸದೆ ಸುಮಲತಾ, ಮುಖ್ಯಮಂತ್ರಿ ಹೇಗೆ ಒಂದು ಜಿಲ್ಲೆಯ ಪರ ಇರಲು ಸಾಧ್ಯವಿಲ್ಲವೋ ಅದೇ ರೀತಿ ದೇಶದ ಪ್ರಧಾನಿ ಕೂಡ ಒಂದು ರಾಜ್ಯದ ಪರವಾಗಿರಲು ಸಾಧ್ಯವಿಲ್ಲ ಎಂದು ಖಡಕ್ಕಾಗಿ ಹೇಳಿದರು. ಪಟ್ಟಣದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿ, ನದಿ ನೀರು ಹಂಚಿಕೆ ವಿಚಾರದಲ್ಲಿ ಪ್ರಾಧಿಕಾರದ ನಿರ್ಧಾರವೇ ಅಂತಿಮ. ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಕೂಡ ಮಧ್ಯಪ್ರವೇಶ ಮಾಡುವುದಿಲ್ಲ ಎಂದಿದೆ. ಸುಪ್ರೀಂ ಕೋರ್ಟೇ ಹೇಳಿದ ಮೇಲೆ ಇನ್ಯಾರು ಮಧ್ಯಪ್ರವೇಶ ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು. ಕಾವೇರಿ ನೀರಿನ ವಿಚಾರದಲ್ಲಿ ತಮಿಳುನಾಡು ಮೊದಲಿನಿಂದಲೂ ಒತ್ತಡ ಹೇರುತ್ತಿದೆ. ನಮ್ಮ ಅಧಿಕಾರಿಗಳು ಸರಿಯಾದ ವಾದ ಮಂಡಿಸುವಲ್ಲಿ ವಿಫಲರಾಗಿದ್ದಾರೆ. ಸರ್ಕಾರ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಸಮಸ್ಯೆಗೆ ಪರಿಹಾರ ಹುಡುಕಬೇಕು ಎಂದು ಒತ್ತಾಯಿಸಿದರು. ಇಂಡಿಯಾ ಒಕ್ಕೂಟ ಮಾಡಿಕೊಂಡಿದ್ದಾರೆ. ಎರಡೂ ರಾಜ್ಯದವರು ಒಟ್ಟಿಗೆ ಕುಳಿತು ಮಾತನಾಡಿ ಸಮಸ್ಯೆ ಬಗೆಹರಿಸಬಹುದು. ಪಾಕಿಸ್ತಾನ, ಭಾರತ ಕುಳಿತು ಮಾತನಾಡಲು ಸಾಧ್ಯವಿರುವಾಗ ಎರಡು ರಾಜ್ಯಗಳು ಕುಳಿತು ಮಾತನಾಡಲು ಏಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದ ಸುಮಲತಾ, ಸರ್ಕಾರದ ಜೊತೆ ಮೂರು ಸಭೆಯಲ್ಲಿ ಭಾಗವಹಿಸಿದ್ದೇನೆ. ಕೇವಲ ಚರ್ಚೆ ಆಗಿದೆ ಎನ್ನುವುದು ಬಿಟ್ಟರೆ ಪರಿಹಾರ ಕ್ರಮ ಈವರೆಗೆ ಆಗಿಲ್ಲ ಎಂದಿರು. ದಶಪಥ ಹೆದ್ದಾರಿಯಲ್ಲಿ ಎಂಟ್ರಿ, ಎಕ್ಸಿಟ್ ಮುಚ್ಚಿರುವ ವಿಚಾರವಾಗಿ ಕೇಳಿದ ಪ್ರಶ್ನೆಗೆ, ಮೊದಲೇ ತಾತ್ಕಾಲಿಕ ಎಂಟ್ರಿ, ಎಕ್ಸಿಟ್ ಎಂದು ಹೇಳಲಾಗಿತ್ತು. ಹೆದ್ದಾರಿ ನಿಯಮಾವಳಿ ಅನ್ವಯ ಬಂದ್ ಮಾಡಲಾಗುತ್ತಿದೆ. ಎಲ್ಲಾ ಕಡೆ ಎಂಟ್ರಿ, ಎಕ್ಸಿಟ್ ಬೇಕು ಎಂದರೆ ಅದು ಸಾಧ್ಯವಾಗುವುದಿಲ್ಲ. ಮುಂದಿನ ದಿಶಾ ಸಭೆಯಲ್ಲಿ ಈ ವಿಚಾರದ ಬಗ್ಗೆ ಚರ್ಚೆ ಮಾಡುತ್ತೇನೆ ಎಂದರು. ಮನ್‌ಮುಲ್ ಅಗ್ನಿ ಅವಘಡ ವಿಚಾರಕ್ಕೆ ಪ್ರತಿಕ್ರಿಯಿಸಿ, ಅಗ್ನಿಶಾಮಕ ದಳದಿಂದ ನಿರಾಕ್ಷೇಪಣಾ ಪತ್ರ ಪಡೆಯದೆ ಕಟ್ಟಡ ನಿರ್ಮಿಸಿರುವುದು ತಪ್ಪು. ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸದೆ ಯಾವುದೇ ಕಟ್ಟಡ ಕಟ್ಟಬಾರದು. ತಪ್ಪು ಮಾಡಿದವರ ವಿರುದ್ಧ ತನಿಖೆಯಾಗಿ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು. ಜೆಡಿಎಸ್-ಬಿಜೆಪಿ ಮೈತ್ರಿ ವಿಚಾರದ ಬಗ್ಗೆ ಕೇಳಿದಾಗ, ಮೈತ್ರಿ ವಿಷಯವಾಗಿ ಬಿಜೆಪಿಯಿಂದ ನನಗೆ ಇದುವರೆಗೂ ಯಾವುದೇ ಮಾಹಿತಿ ಬಂದಿಲ್ಲ. ಯಾವ ನಾಯಕರೂ ನನ್ನನ್ನು ಸಂಪರ್ಕಿಸಿಲ್ಲ. ಹಾಗಾಗಿ ಅದರ ಬಗ್ಗೆ ಮಾತನಾಡಿದರೆ ತಪ್ಪಾಗುತ್ತದೆ. ಈ ಬಗ್ಗೆ ಈಗ ನಾನು ಮಾತನಾಡುವುದಿಲ್ಲ. ಏಕೆ ಈ ನಿರ್ಧಾರವಾಯಿತು, ಏನೆಲ್ಲಾ ಚರ್ಚೆಯಾಗಿದೆ ಎಂಬುದನ್ನೆಲ್ಲಾ ಕೇಳಿ ತಿಳಿಯಬೇಕಿದೆ. ಎರಡೂಊ ಪಕ್ಷಗಳ ಮೈತ್ರಿ ಬಗ್ಗೆ ನಾನಾಗಿಯೇ ಏನನ್ನೂ ಕೇಳುವುದಿಲ್ಲ. ಅವರಿಂದ ಕರೆ ಬರಬೇಕು. ಅಲ್ಲಿಯವರೆಗೆ ನಾನು ಮಾತನಾಡುವುದಿಲ್ಲ. ಎಲ್ಲವನ್ನೂ ತಿಳಿದುಕೊಂಡು ನಂತರ ನನ್ನ ನಿರ್ಧಾರ ತಿಳಿಸುವುದಾಗಿ ಹೇಳಿದರು. ಈಗಿನ ಪರಿಸ್ಥಿತಿಯಲ್ಲಿ ರಾಜಕಾರಣ, ಚುನಾವಣೆ ಬಗ್ಗೆ ಹೆಚ್ಚಾಗಿ ಮಾತನಾಡುವುದಿಲ್ಲ. ಸಮಯ ಬಂದಾಗ ಎಲ್ಲಾ ಮಾತನಾಡುತ್ತೇನೆ ಎಂದಷ್ಟೇ ತಿಳಿಸಿದರು.ಜಿಪಂ ಮಾಜಿ ಅಧ್ಯಕ್ಷ ಬಿ.ವಿವೇಕಾನಂದ, ಪಿಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಬೇಲೂರು ಸೋಮಶೇಖರ್ , ತಾಲೂಕು ಅಂಬರೀಶ್ ಅಭಿಮಾನಿ ಒಕ್ಕೂಟದ ಅಧ್ಯಕ್ಷ ಮುಟ್ಟನಹಳ್ಳಿ ಮಹೇಂದ್ರ, ಪ್ರಧಾನ ಕಾರ್ಯದರ್ಶಿ ಹಾಗಲಹಳ್ಳಿ ಬಸವರಾಜು, ಉಪಾಧ್ಯಕ್ಷ ಕೋಣಸಾಲೆ ಜಯರಾಂ, ಮುಖಂಡರಾದ ಹೊನ್ನಲಗೆರೆ ಶಿವು, ರುದ್ರಾಕ್ಷಿಪುರ ಮಹದೇವು ಇದ್ದರು.