ವಾರಾಣಸಿಯಲ್ಲಿ ನಾಳೆ ಮೋದಿ ನಾಮಪತ್ರ

| Published : May 13 2024, 12:00 AM IST / Updated: May 13 2024, 04:32 AM IST

ಸಾರಾಂಶ

ಸತತ ಮೂರನೇ ಬಾರಿಗೆ ಪ್ರಧಾನಿ ಹುದ್ದೆ ಏರುವ ನಿರೀಕ್ಷೆಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಉತ್ತರಪ್ರದೇಶದ ವಾರಾಣಸಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಮಂಗಳವಾರ ನಾಮಪತ್ರ ಸಲ್ಲಿಸಲಿದ್ದಾರೆ.

ವಾರಾಣಸಿ: ಸತತ ಮೂರನೇ ಬಾರಿಗೆ ಪ್ರಧಾನಿ ಹುದ್ದೆ ಏರುವ ನಿರೀಕ್ಷೆಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಉತ್ತರಪ್ರದೇಶದ ವಾರಾಣಸಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಮಂಗಳವಾರ ನಾಮಪತ್ರ ಸಲ್ಲಿಸಲಿದ್ದಾರೆ. ಈ ಹಿಂದಿನ ಎರಡು ಚುನಾವಣೆಯಲ್ಲೂ ಮೋದಿ ಇದೇ ಕ್ಷೇತ್ರದಿಂದಲೇ ಲೋಕಸಭೆಗೆ ಆಯ್ಕೆಯಾಗಿದ್ದರು.

ಇತ್ತೀಚೆಗೆ ಅಯೋಧ್ಯೆ ರಾಮಮಂದಿರದಲ್ಲಿ ನಡೆದ ಬಾಲಕ ರಾಮನ ಪ್ರಾಣಪ್ರತಿಷ್ಠಾಪನೆ ನೆರವೇರಿಸಿದ ಗಣೇಶ್ವರ ಶಾಸ್ತ್ರಿಗಳು ಪ್ರಧಾನಿ ನರೇಂದ್ರ ಮೋದಿ ನಾಮಪತ್ರಕ್ಕೆ ಸೂಚಕರಾಗಿ ಸಹಿ ಹಾಕಲಿದ್ದಾರೆ ಎನ್ನಲಾಗಿದೆ. ಇವರ ಜೊತೆಗೆ ಪಶ್ಚಿಮ ಬಂಗಾಳದ ಖ್ಯಾತ ಕಲಾವಿದೆ, ಪದ್ಮಶ್ರೀ ಪುರಸ್ಕೃತ ಸೊಮಾ ಘೋಷ್‌ ಅವರು ಮತ್ತೊಬ್ಬ ಸೂಚಕರಾಗಲಿದ್ದಾರೆ ಎನ್ನಲಾಗಿದೆ.

ನಾಮಪತ್ರ ಸಲ್ಲಿಕೆ:

ಮಂಗಳವಾರ ಬೆಳಗ್ಗೆ ಪ್ರಧಾನಿ ಮೋದಿ ಕಾಲಭೈರವನ ದರ್ಶನ ಪಡೆದು ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರೊಂದಿಗೆ ಸಭೆ ನಡೆಸಲಿದ್ದಾರೆ. ಬಳಿಕ 11:40ಕ್ಕೆ ಸಲ್ಲುವ ಶುಭ ಅಭಿಜಿತ್‌ ಮುಹೂರ್ತದಲ್ಲಿ ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲಿದ್ದಾರೆ. ಇವರಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಸಾಥ್‌ ನೀಡಲಿದ್ದಾರೆ. ವಾರಾಣಸಿಯಲ್ಲಿ ಜೂ 1ರಂದು ನಡೆಯುವ ಕಡೆಯ ಹಂತದಲ್ಲಿ ಮತದಾನ ನಡೆಯಲಿದ್ದು, ಜೂ 4ರಂದು ಫಲಿತಾಂಶ ಹೊರಬರಲಿದೆ.

ಮೆಗಾ ರೋಡ್‌ಶೋ:

ಸಂಜೆ 5 ಗಂಟೆಗೆ ಪ್ರಧಾನಿ ಮೋದಿ ವಾರಾಣಸಿಯಲ್ಲಿ ಮೆಗಾ ರೋಡ್‌ಶೋ ನಡೆಸಲಿದ್ದು, 5 ಕಿ.ಮೀ ಉದ್ದಕ್ಕೂ ಜನಸ್ತೋಮದತ್ತ ಕೈ ಬೀಸುತ್ತಾ ಕಾಶಿ ವಿಶ್ವನಾಥನ ಸನ್ನಿಧಾನ ತಲುಪಲಿದ್ದಾರೆ. ಬಳಿಕ ಅಲ್ಲಿ ಪೂಜೆ ಮತ್ತು ಗಂಗಾರತಿಯಲ್ಲಿ ಭಾಗಿಯಾಗುವ ನಿರೀಕ್ಷೆಯಿದೆ.

ದಾಖಲೆ ಗೆಲುವಿನ ನಿರೀಕ್ಷೆ:

ವಾರಾಣಸಿಯಲ್ಲಿ ಮೋದಿ 2014ರಲ್ಲಿ 3.7 ಲಕ್ಷ ಹಾಗೂ 2019ರಲ್ಲಿ 4.8 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಈ ಬಾರಿ 7 ಲಕ್ಷ ಮತಗಳ ಅಂತರದಲ್ಲಿ ಗೆಲ್ಲಿಸುವ ಪಣವನ್ನು ಪಕ್ಷದ ಕಾರ್ಯಕರ್ತರ ತೊಟ್ಟಿದ್ದಾರೆ. ಮೋದಿಗೆ ಎದುರಾಳಿಯಾಗಿ ಕಾಂಗ್ರೆಸ್‌ನಿಂದ ಅಜಯ್‌ ರಾಯ್‌ ಕಣಕ್ಕೆ ಇಳಿದಿದ್ದಾರೆ.