ಪ್ರೊ.ಕೆ.ಎಸ್.ಭಗವಾನ್ ಜಾತಿ-ಧರ್ಮ ಸಂಘರ್ಷದ ಮೂಲ: ತಿಮ್ಮೇಗೌಡ

| Published : Oct 17 2023, 12:30 AM IST

ಸಾರಾಂಶ

ಪ್ರೊ.ಕೆ.ಎಸ್. ಭಗವಾನ್ ಒಬ್ಬ ಪ್ರಚಾರ ಪ್ರಿಯ. ಹಿಂದೂ ಧರ್ಮವನ್ನು ಅವಹೇಳನ ಮಾಡುವುದು, ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಟೀಕಿಸುವುದು ಅವರ ಹುಟ್ಟುಗುಣವಾಗಿದೆ. ಇಂತಹವರು ಜಾತಿ-ಧರ್ಮ ಸಂಘರ್ಷಕ್ಕೆ ಮೂಲ ಕಾರಣಕರ್ತರು ಎಂದು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ತಿಮ್ಮೇಗೌಡ ಆರೋಪಿಸಿದರು.
ಅನಾಗರಿಕರಿಂದ ಸಂಸ್ಕೃತಿಯ ಪಾಠ ಕಲಿಯುವ ಅಗತ್ಯವಿಲ್ಲ ಕನ್ನಡಪ್ರಭ ವಾರ್ತೆ ಮಂಡ್ಯ ಪ್ರೊ.ಕೆ.ಎಸ್. ಭಗವಾನ್ ಒಬ್ಬ ಪ್ರಚಾರ ಪ್ರಿಯ. ಹಿಂದೂ ಧರ್ಮವನ್ನು ಅವಹೇಳನ ಮಾಡುವುದು, ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಟೀಕಿಸುವುದು ಅವರ ಹುಟ್ಟುಗುಣವಾಗಿದೆ. ಇಂತಹವರು ಜಾತಿ-ಧರ್ಮ ಸಂಘರ್ಷಕ್ಕೆ ಮೂಲ ಕಾರಣಕರ್ತರು ಎಂದು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ತಿಮ್ಮೇಗೌಡ ಆರೋಪಿಸಿದರು. ವಿವಾದದ ಮೂಲವೇ ಕೆ.ಎಸ್.ಭಗವಾನ್. ಆಯಾ ಪರಿಸ್ಥಿತಿ, ಸನ್ನಿವೇಶಗಳಿಗೆ ತಕ್ಕಂತೆ ಯಾರೋ ಎಂದೋ ಆಡಿದ ಮಾತುಗಳು ಪ್ರಸ್ತುತ ಅನ್ವಯವಾಗದಿದ್ದರೂ ಆ ಮಾತುಗಳನ್ನಾಡಿ ಸಮುದಾಯದವರಲ್ಲಿ, ಧರ್ಮದವರಲ್ಲಿ ಹಿಂದಿನಿಂದಲೂ ವಿವಾದದ ಕಿಡಿ ಎಬ್ಬಿಸುತ್ತಲೇ ಬರುತ್ತಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂಷಿಸಿದರು. ಹಿಂದೂ ಧರ್ಮವನ್ನು ಗುರಿಯಾಗಿಸಿಕೊಂಡು ಟೀಕಿಸುವ ಪ್ರೊ.ಕೆ.ಎಸ್. ಭಗವಾನ್ ಅವರಿಗೆ ಮುಸ್ಲಿಂ, ಕ್ರೈಸ್ತ ಧರ್ಮ ಸೇರಿದಂತೆ ಬೇರೆ ಧರ್ಮಗಳನ್ನು ಅವಹೇಳನ ಮಾಡುವ ಧೈರ್ಯವಿಲ್ಲ. ಇಂತಹವರು ಸಮಾಜಕ್ಕೆ ಮಾರಕ. ಎಲ್ಲಿ ಯಾವ ಮಾತುಗಳನ್ನಾಡಬೇಕು ಎಂಬ ಅರಿವನ್ನೇ ಕಳೆದುಕೊಂಡಿದ್ದಾರೆ. ಇಂತಹವರ ಮಾತುಗಳು ಸಮಾಜದಲ್ಲಿ ಸಂಘರ್ಷವನ್ನು ಉಂಟುಮಾಡುತ್ತಿವೆ. ಬಾಯಿಗೆ ಬಂದಂತೆಲ್ಲಾ ಮಾತನಾಡುತ್ತಾ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು. ಮಹಿಷ ಉತ್ಸವ ಕಾರ್ಯಕ್ರಮದಲ್ಲಿ ಒಕ್ಕಲಿಗರು ಸಂಸ್ಕೃತಿ ಹೀನರು ಎಂದು ಕುವೆಂಪು ಹೇಳಿಕೆಯನ್ನು ಪ್ರಸ್ತಾಪಿಸುವುದರೊಂದಿಗೆ ಒಕ್ಕಲಿಗ ಸಮುದಾಯವನ್ನು ಅಪಮಾನಿಸಿದ್ದಾರೆ. ಕುವೆಂಪು ಯಾವ ಸಂದರ್ಭ, ಪರಿಸ್ಥಿತಿಯಲ್ಲಿ ಆ ಮಾತನ್ನು ಹೇಳಿದ್ದಾರೆ. ಅವರು ಹೇಳಿದ ಕಾಲ ಘಟ್ಟಕ್ಕೂ ಈಗಿನ ಪರಿಸ್ಥಿತಿಗೂ ಏನು ಸಂಬಂಧ. ಅದನ್ನು ಅರಿಯದೆ ನಾಲಿಗೆಯನ್ನು ಹರಿಯಬಿಡುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. ನಾಲಿಗೆ ನಾಗರೀಕತೆಯನ್ನು ಹೇಳಬೇಕು. ಆದರೆ, ಪ್ರೊ.ಕೆ.ಎಸ್. ಭಗವಾನ್ ಅವರ ನಾಲಿಗೆಯಿಂದ ಸದಾ ಅನಾಗರಿಕತೆಯ ಮಾತುಗಳೇ ಹೊರಡುತ್ತಿರುತ್ತವೆ. ಸಮುದಾಯದವರ, ಧರ್ಮದವರ ಭಾವನೆಗಳಿಗೆ ನೋವುಂಟು ಮಾಡುವುದೇ ಅವರ ಮುಖ್ಯ ಗುರಿಯಾಗಿರುವಂತೆ ಕಂಡು ಬರುತ್ತಿದ್ದಾರೆ. ಸಂಸ್ಕಾರ, ಸಂಸ್ಕೃತಿ ಇಲ್ಲದ ಇವರಿಂದ ಯಾವುದೇ ಸಮುದಾಯ, ಧರ್ಮದವರು ಪಾಠ ಕಲಿಯಬೇಕಿಲ್ಲ ಎಂದು ನಿಷ್ಠುರವಾಗಿ ಹೇಳಿದರು. ನಿಮಗೆ ಮಾತನಾಡುವ ಗೀಳಿದ್ದರೆ ಅಥವಾ ಇಂತಹ ಮಾತುಗಳಿಂದ ಪುಕ್ಕಟ್ಟೆ ಪ್ರಚಾರ ಪಡೆಯಬೇಕಾದರೆ ಬೇರೆ ವಿಚಾರಗಳನ್ನು ಮಾತನಾಡಿ ಪ್ರಚಾರ ಪಡೆದುಕೊಳ್ಳಿ. ಅದು ಬಿಟ್ಟು ಸಮುದಾಯಗಳ ಬಗ್ಗೆ ಮಾತನಾಡುವುದು ನಿಮ್ಮ ಸಣ್ಣತನವನ್ನು ತೋರಿಸುತ್ತದೆ. ಒಕ್ಕಲಿಗ ಜನಾಂಗದವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ಅಪಮಾನಿಸಿರುವ ಕೆ.ಎಸ್. ಭಗವಾನ್ ಅವರನ್ನು ತಕ್ಷಣ ಬಂಧಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಮುಖಂಡರಾದ ನಾಗೇಶ್, ಕೆಂಪರಾಜು, ಸ್ವಾಮಿಗೌಡ, ಕೇಶವ, ರಾಕೇಶ, ವೀರೇಶ್, ತಮ್ಮೇಗೌಡ ಗೋಷ್ಠಿಯಲ್ಲಿದ್ದರು.