ಆಡಳಿತ ವೈಫಲ್ಯ ಮುಚ್ಚಿಕೊಳ್ಳಲು ಕಾಂಗ್ರೆಸ್‌ನಿಂದ ಪ್ರತಿಭಟನೆ ನಾಟಕ: ಬಿ.ವೈ.ವಿಜಯೇಂದ್ರ

| Published : Feb 12 2024, 01:30 AM IST / Updated: Feb 12 2024, 09:03 AM IST

Siddaramaiah BY Vijayendra
ಆಡಳಿತ ವೈಫಲ್ಯ ಮುಚ್ಚಿಕೊಳ್ಳಲು ಕಾಂಗ್ರೆಸ್‌ನಿಂದ ಪ್ರತಿಭಟನೆ ನಾಟಕ: ಬಿ.ವೈ.ವಿಜಯೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದ ಕಾಂಗ್ರೆಸ್‌ ಸರ್ಕಾರವು ತನ್ನ ಆಡಳಿತ ವೈಫಲ್ಯ ಮುಚ್ಚಿಕೊಳ್ಳಲು ನಮ್ಮ ತೆರಿಗೆ ನಮ್ಮ ಹಕ್ಕು ಎಂಬ ಹೊಸ ನಾಟಕ ಆಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವ್ಯಂಗ್ಯವಾಡಿದರು.

ಕನ್ನಡಪ್ರಭ ವಾರ್ತೆ ಮೈಸೂರು

ರಾಜ್ಯದ ಕಾಂಗ್ರೆಸ್‌ ಸರ್ಕಾರವು ತನ್ನ ಆಡಳಿತ ವೈಫಲ್ಯ ಮುಚ್ಚಿಕೊಳ್ಳಲು ನಮ್ಮ ತೆರಿಗೆ ನಮ್ಮ ಹಕ್ಕು ಎಂಬ ಹೊಸ ನಾಟಕ ಆಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವ್ಯಂಗ್ಯವಾಡಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 8 ತಿಂಗಳಾಗಿದೆ. ಘೋಷಣೆ ಮಾಡಿದ್ದ ಯೋಜನೆಗಳನ್ನೇ ಸರಿಯಾಗಿ ಜಾರಿಗೊಳಿಸಿಲ್ಲ. 

ರಾಜ್ಯದಲ್ಲಿ ಯಾವುದಾದರೊಂದು ಅಭಿವೃದ್ಧಿ ಕೆಲಸವನ್ನೂ ಮಾಡಿಲ್ಲ. ಈ ಬಗ್ಗೆ ಬಿಜೆಪಿಯಿಂದ ಪ್ರಶ್ನೆಗಳನ್ನು ಕೇಳಿದ್ದೇವೆ. 

ಅದಕ್ಕೆ ಉತ್ತರಿಸಲಾಗದ ಕಾಂಗ್ರೆಸ್‌ ನವರು ತಮ್ಮ ಆಡಳಿತ ವೈಫಲ್ಯ ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಹೊಸ ನಾಟಕ ಆಡುತ್ತಿದ್ದಾರೆ ಎಂದು ದೂರಿದರು.

ಜನರು ಇವರ ಮಾತಿಗೆ ಮರುಳಾಗುವುದಿಲ್ಲ. ಮೈಸೂರಿಗೆ ಅಮಿತ್‌ ಶಾ ಅವರು ಬಂದಿರುವುದು ರಾಜ್ಯದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. 

ಎಲ್ಲಾ ಕ್ಷೇತ್ರದಲ್ಲೂ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ಅವರ ಅವರ ಛಾಪು ಇರುವುದನ್ನು ನೋಡಿದ್ದೇವೆ. 

ಬಿಜೆಪಿ ಕೋರ್ ಕಮಿಟಿಯಲ್ಲಿ ರಾಜ್ಯದ 28 ಸ್ಥಾನ ಗೆಲ್ಲುವ ಕುರಿತು ಕಾರ್ಯತಂತ್ರರೂಪಿಸಿ, ರಣ ಕಳಹೆ ಮೊಳಗಿಸಿದ್ದೇವೆ. ಎಲ್ಲಾ ಕ್ಷೇತ್ರಗಳನ್ನು ನಿಶ್ಚಿತವಾಗಿ ಗೆಲ್ಲುತ್ತೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ನಾಡ ದೇವತೆ ಚಾಮುಂಡೇಶ್ವರಿ ದರ್ಶನ ಪಡೆದ ಅಮಿತ್ ಶಾ
ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಅವರು ಮೈಸೂರಿನ ಚಾಮುಂಡಿಬೆಟ್ಟಕ್ಕೆ ಭಾನುವಾರ ಮಧ್ಯಾಹ್ನ ಭೇಟಿ ನೀಡಿ, ನಾಡ ದೇವತೆ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದರು.

ಚಾಮುಂಡಿಬೆಟ್ಟಕ್ಕೆ ಆಗಮಿಸಿದ ಅಮಿತ್ ಶಾ ಅವರಿಗೆ ಚಾಮುಂಡೇಶ್ವರಿ ದೇವಸ್ಥಾನ ವತಿಯಿಂದ ಪೂರ್ಣಕುಂಭ ಸ್ವಾಗತ ಕೋರಲಾಯಿತು. 

ನಂತರ ಅಮಿತ್ ಶಾ ಅವರು ಚಾಮುಂಡೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ನೇತೃತ್ವದಲ್ಲಿ ವಿಶೇಷ ಪೂಜೆ ನೆರವೇರಿಸಿದರು.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಸಂಸದ ಪ್ರತಾಪ್ ಸಿಂಹ, ಮಾಜಿ ಶಾಸಕ ಎಲ್. ನಾಗೇಂದ್ರ ಹಾಗೂ ಹಲವು ಮುಖಂಡರು ಪಾಲ್ಗೊಂಡಿದ್ದರು.