ಸ್ಟಿಂಗ್‌ ಆಪರೇಷನ್‌ ಪ್ರಕರಣಕ್ಕೆ ಸಂಬಂಧಿಸಿ ನನ್ನ ಹೋರಾಟವನ್ನು ಇಲ್ಲಿಗೇ ಬಿಡುವುದಿಲ್ಲ, ವಿಜಯದಶಮಿ ನಂತರ ಮತ್ತೆ ಬೀದಿಗೆ ಇಳಿಯುತ್ತೇನೆ. ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುತ್ತೇನೆ ಎಂದು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಗುಡುಗಿದ್ದಾರೆ.

 ಬೆಂಗಳೂರು : ಸ್ಟಿಂಗ್‌ ಆಪರೇಷನ್‌ ಪ್ರಕರಣಕ್ಕೆ ಸಂಬಂಧಿಸಿ ನನ್ನ ಹೋರಾಟವನ್ನು ಇಲ್ಲಿಗೇ ಬಿಡುವುದಿಲ್ಲ, ವಿಜಯದಶಮಿ ನಂತರ ಮತ್ತೆ ಬೀದಿಗೆ ಇಳಿಯುತ್ತೇನೆ. ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುತ್ತೇನೆ ಎಂದು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಗುಡುಗಿದ್ದಾರೆ.

ರಾಜ್ಯ ಪೊಲೀಸ್ ಮಹಾನಿರ್ದೇಶಕರ (ಡಿ.ಜಿ) ಕಚೇರಿ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ಪ್ರಕರಣವನ್ನು ನಾನು ಇಲ್ಲಿಗೆ ಬಿಡುವ ಪ್ರಶ್ನೆ ಇಲ್ಲ. ಈಗಾಗಲೇ ಪೊಲೀಸ್ ಆಯುಕ್ತರಿಗೆ, ಇದೀಗ ಪೊಲೀಸ್ ಮಹಾ ನಿರ್ದೇಶಕರಿಗೆ ದೂರು ನೀಡಿದ್ದೇವೆ. ಇದರ ಮೇಲೆ ಪೊಲೀಸರು ಕ್ರಮ ಜರುಗಿಸದೇ ಇದ್ದರೆ ಮುಂದೆ ಏನು ಮಾಡಬೇಕು ಎಂಬುದನ್ನು ತೀರ್ಮಾನ ಮಾಡುತ್ತೇವೆ. ಸ್ಟಿಂಗ್ ಮಾಡಿದ ಕಿರಾತಕರನ್ನು ಬಂಧಿಸದ ಹೊರತು ನಾವು ವಿಶ್ರಮಿಸುವುದಿಲ್ಲ ಎಂದು ನುಡಿದರು.

ಈ ಬಗ್ಗೆ ಪೊಲೀಸ್ ಮಹಾನಿರ್ದೇಶಕರಿಗೆ ಸುದೀರ್ಘವಾದ ದೂರನ್ನು ಕೊಟ್ಟಿದ್ದೇವೆ. ಖಾಸಗಿ ಸುದ್ದಿ ವಾಹಿನಿಯ ಮುಖ್ಯಸ್ಥ ಮತ್ತು ಆತನ ಸಹಚರರು ನಡೆಸಿರುವ ಅಕ್ರಮಗಳು, ರಹಸ್ಯ ಕಾರ್ಯಾಚರಣೆ ಹೆಸರಿನಲ್ಲಿ ಮಾಡಿರುವ ಹಣ ವಸೂಲಿ, ರಾಜಕಾರಣಿಗಳು, ಪೊಲೀಸರು ಮತ್ತು ಸರ್ಕಾರದ ಅಧಿಕಾರಿಗಳನ್ನು ಹೆದರಿಸಿ ಬೆದರಿಸಿ ಬ್ಲ್ಯಾಕ್‌ಮೇಲ್ ಮಾಡಿರುವ ಎಲ್ಲಾ ಅಂಶಗಳನ್ನು ಅವರಿಗೆ ಮನವರಿಕೆ ಮಾಡಿದ್ದೇವೆ. ಅವನ ಬಂಧನಕ್ಕೆ ಪೊಲೀಸರು ಕ್ರಮ ಕೈಗೊಳ್ಳದಿದ್ದರೆ ವಿಜಯದಶಮಿ ನಂತರ ಸ್ವತಃ ನಾನೇ ಮತ್ತೊಮ್ಮೆ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ನೇರ ಎಚ್ಚರಿಕೆ ನೀಡಿದರು.

ಸಿದ್ದು ಅವರೇ ನಿಮ್ಮ ರಕ್ತ ಕುದಿಯುತ್ತಿಲ್ವಾ?:

ಅತ್ಯಂತ ಅಪಮಾನಕರವಾಗಿ ಅಧಿಕಾರದಿಂದ ಕೆಳಗಿಳಿದ ಸಿದ್ದರಾಮಯ್ಯನವರಿಗೆ ತಮ್ಮ ವಿರುದ್ಧ ನಡೆದಿರುವ ಸಂಚಿನ ಬಗ್ಗೆ ರಕ್ತ ಕುದಿಯುತ್ತಿಲ್ಲವೇ ಎಂದು ಇದೇ ವೇಳೆ ಕುಮಾರಸ್ವಾಮಿ ಪ್ರಶ್ನಿಸಿದರು. ನನಗೆ ಬಹಳ ಆಶ್ಚರ್ಯವಾಗುತ್ತಿದೆ. ಸಿದ್ದರಾಮಯ್ಯನವರು ಮೌನದಿಂದ ಇರುವ ವ್ಯಕ್ತಿಯಲ್ಲ. ತಮ್ಮ ವಿರುದ್ಧ ಅನ್ಯಾಯ ನಡೆದರೆ ಸಹಿಸುವ ಜಾಯಮಾನದವರಲ್ಲ. ತಮ್ಮ ವಿರುದ್ಧ ರಾಜ್ಯದ ಈಗಿನ ಮುಖ್ಯಮಂತ್ರಿ ಮತ್ತು ಖಾಸಗಿ ಸುದ್ದಿ ವಾಹಿನಿ ಮುಖ್ಯಸ್ಥ ಸೇರಿ ನಡೆಸಿದ ಸಂಚಿನ ಕುರಿತು ಅವರು ಮೌನ ವಹಿಸಿರುವುದು ನನಗೆ ನೋವು ತಂದಿದೆ ಎಂದು ಹೇಳಿದರು.

ಸಿದ್ದರಾಮಯ್ಯ ಅವರ ವರ್ಚಸ್ಸು ಹಾಳು ಮಾಡಲು ಈ ಸ್ಟಿಂಗ್ ಆಪರೇಷನ್ ಮಾಡಲಾಗಿದೆ. ಸಿದ್ದರಾಮಯ್ಯ ಅವರು ಯಾವುದೇ ತಪ್ಪು ಮಾಡಿಲ್ಲ. ಆದರೆ ಅವರ ಹೆಸರು ಹಾಳು ಮಾಡಲು, ಆ ಮೂಲಕ ಹಣ ವಸೂಲಿ ಮಾಡಲು ಈ ವಿಡಿಯೋ ಮಾಡಲಾಗಿದೆ. ಇದೆಲ್ಲವನ್ನೂ ನೋಡಿ ಸಿದ್ದರಾಮಯ್ಯ ಅವರಿಗೆ ರಕ್ತ ಕುದಿಯುತ್ತಿಲ್ಲವೇ ಎಂದು ಪ್ರಶ್ನಿಸಿದರು.

ನಾನು ಮತ್ತು ಸಿದ್ದರಾಮಯ್ಯ ಅವರು ಅನೇಕ ವಿಷಯಗಳಲ್ಲಿ ಸಂಘರ್ಷ ಮಾಡಿಕೊಂಡಿದ್ದೇವೆ. ವಿಧಾನಸಭೆಯಲ್ಲಿ ವಾಗ್ವಾದ ನಡೆಸಿದ್ದೇವೆ. ಆದರೆ ಇಂಥ ವಿಷಯಕ್ಕೆ ನನ್ನ ಬೆಂಬಲ ಇಲ್ಲ. ಅವರ ವಿರುದ್ಧ ನಡೆದಿರುವ ಸಂಚನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ. ಈ ವಿಷಯವನ್ನು ಅವರು ಬಿಟ್ಟರೂ ನಾನು ಬಿಡುವ ಪ್ರಶ್ನೆಯೇ ಇಲ್ಲ ಎಂದರು.----

ಸರ್ಕಾರದಿಂದ ಕಿರಾತಕನ ಬೂಟ್ ಪಾಲಿಶ್‌: ಆಕ್ರೋಶ

ಡಿಜಿ ಅವರು ನಾವು ಕೊಟ್ಟ ದೂರನ್ನು ಮೌನದಿಂದ ಸ್ವೀಕಾರ ಮಾಡಿದ್ದಾರೆ‌. ಪೊಲೀಸ್ ಆಯುಕ್ತರದ್ದು ಆಯಿತು, ಈಗ ಡಿ.ಜಿ. ಏನು ಮಾಡುತ್ತಾರೋ ನೋಡೋಣ. ಮಂತ್ರಿಗಳ ವಿರುದ್ಧ ಸ್ಟಿಂಗ್ ಮಾಡಲಾಗಿದೆ ಎಂದು ಮುಖ್ಯಮಂತ್ರಿಯೇ ಸಂಪುಟ ಸಭೆಯಲ್ಲಿ ಹೇಳುತ್ತಾರೆ ಎಂದರೆ ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಇನ್ನೊಂದು ಇದೆಯೇ ಎಂದು ಕಿಡಿಕಾರಿದರು.

ಸ್ಟಿಂಗ್‌ ವ್ಯಕ್ತಿ ಜತೆ ಡಿಕೆ ನಿರಂತರ ಸಂಪರ್ಕ

ಸ್ಟಿಂಗ್ ಆರೋಪಿಯನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಿರಂತರವಾಗಿ ಭೇಟಿಯಾಗುತ್ತಿದ್ದರು. ಸಿದ್ದರಾಮಯ್ಯ ವಿರುದ್ಧ ನಾನೇ ವೀಡಿಯೋ ಮಾಡಿದ್ದೇನೆ, ಅವರ ವಿರುದ್ಧ ಸ್ಟಿಂಗ್ ನಡೆಸಿದ್ದು ನಾನೇ, ಅದರಲ್ಲಿರುವ ಧ್ವನಿ ನನ್ನದೇ ಎಂದು ಖಾಸಗಿ ಸುದ್ದಿವಾಹಿನಿ ಮುಖ್ಯಸ್ಥನೇ ಒಪ್ಪಿಕೊಂಡಿದ್ದಾರೆ. ತಾನು ನಡೆಸುವ ಸುದ್ದಿವಾಹಿನಿಯಲ್ಲಿ ಈ ಎಲ್ಲಾ ತಪ್ಪುಗಳನ್ನು ಒಪ್ಪಿಕೊಂಡಿದ್ದಾರೆ ಎಂದು ಕೇಂದ್ರ ಸಚಿವ ಎಚ್‌.ಡಿ ಕುಮಾರಸ್ವಾಮಿ ಅವರು ಫ್ರೀಡಂ ಪಾರ್ಕ್‌ ಬಳಿ ಸುದ್ದಿಗಾರರೊಂದಿಗೆ ಹೇಳಿದ್ದಾರೆ.

ಆ ಕ್ರಿಮಿನಲ್‌ಗೆ ಕರ್ನಾಟಕ ರತ್ನ ಪ್ರಶಸ್ತಿ ಕೊಟ್ಟುಬಿಡಿ: ಕುಮಾರಸ್ವಾಮಿ

ಮಂತ್ರಿಗಳು ಮತ್ತು ಶಾಸಕರನ್ನು ತಮ್ಮ ಕಪಿಮುಷ್ಟಿಯಲ್ಲಿ ಇಟ್ಟುಕೊಳ್ಳಲು ಮುಖ್ಯಮಂತ್ರಿ, ಖಾಸಗಿ ಸುದ್ದಿ ವಾಹಿನಿ ಮುಖ್ಯಸ್ಥ ಜತೆ ಸೇರಿ ಸ್ಟಿಂಗ್ ರೀತಿಯ ಹೀನ ಕೃತ್ಯಗಳನ್ನು ಎಸಗುತ್ತಿದ್ದಾರೆ. ಇಷ್ಟೆಲ್ಲಾ ಆದರೂ ಗೃಹಮಂತ್ರಿ ರಾಜಾರೋಷವಾಗಿ ಲಜ್ಜೆಗೆಟ್ಟು ಮಾತನಾಡುತ್ತಿದ್ದಾರೆ. ಇನ್ನು ಪೊಲೀಸರಿಂದ ನಾವು ಏನು ನಿರೀಕ್ಷೆ ಮಾಡಲು ಸಾಧ್ಯ? ಈ ಸರ್ಕಾರ ಸ್ಟಿಂಗ್ ನಡೆಸುವ ಅಪರಾಧಿಯ ಬೂಟ್ ಪಾಲಿಶ್ ಮಾಡಿಕೊಂಡು ಕೂತಿದೆ. ನಾಚಿಕೆಯಾಗಬೇಕು ಇವರಿಗೆ. ನವೆಂಬರ್ ಒಂದರಂದು ಕನ್ನಡ ರಾಜ್ಯೋತ್ಸವ ಮಾಡುತ್ತರಲ್ವಾ? ಅಂದು ಸಿದ್ದರಾಮಯ್ಯರನ್ನು ಸಂಚು ರೂಪಿಸಿ ಅಧಿಕಾರದಿಂದ ಕೆಳಗಿಳಿಸಿ ತನಗೆ ಮುಖ್ಯಮಂತ್ರಿಯಾಗುವ ಅವಕಾಶ ಕಲ್ಪಿಸಿದ ಆ ಕ್ರಿಮಿನಲ್‌ಗೆ ಕರ್ನಾಟಕ ರತ್ನ ಪ್ರಶಸ್ತಿ ಕೊಟ್ಟುಬಿಡಿ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.