ಸಾರಾಂಶ
ಚಂಡೀಗಢ/ನವದೆಹಲಿ: ಲೋಕಸಭೆ ಚುನಾವಣೆ ನಂತರ ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಅವರು ಆಪ್‌ನಿಂದ ಹೊರಬಂದು ಆಪ್ (ಪಂಜಾಬ್) ಎಂಬ ಪ್ರತ್ಯೇಕ ಪಕ್ಷ ಸ್ಥಾಪಿಸಲು ಸಿದ್ಧರಾಗಿದ್ದಾರೆ ಎಂದು ಶಿರೋಮಣಿ ಅಕಾಲಿ ದಳ ಅಧ್ಯಕ್ಷ ಸುಖಬೀರ್ ಸಿಂಗ್ ಬಾದಲ್ ಹೊಸ ಬಾಂಬ್ ಸಿಡಿಸಿದ್ದಾರೆ.
ಇದರ ಬೆನ್ನಲ್ಲೇ ಆಪ್ ನೇತಾರ ಅರವಿಂದ ಕೇಜ್ರಿವಾಲ್ ಭಾನುವಾರ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ‘ನನ್ನ ಬಂಧನಕ್ಕೆ ಮೊದಲು ದಿಲ್ಲಿ ಹಾಗೂ ಪಂಜಾಬ್ ಆಪ್ ಘಟಕಗಳನ್ನು ಒಡೆದು ಸರ್ಕಾರಗಳನ್ನು ಕೆಡವಲು ಬಿಜೆಪಿ ಯತ್ನಿಸಿತ್ತು. ಆದರೆ ಇದು ಸಾಧ್ಯವಾಗಲಿಲ್ಲ. ನನ್ನ ಬಂಧನದ ನಂತರ ಪಕ್ಷ ಇನ್ನಷ್ಟು ಗಟ್ಟಿಯಾಗಿದೆ’ ಎಂದಿದ್ದಾರೆ.
ಶಾ ಜತೆ ಮಾನ್ ಹೊಂದಾಣಿಕೆ- ಬಾದಲ್:
ಚಂಡೀಗಢದಲ್ಲಿ ಮಾತನಾಡಿದ ಅಕಾಲಿದಳ ನಾಯಕ ಸುಖಬೀರ್ ಬಾದಲ್, ‘ಮುಖ್ಯಮಂತ್ರಿ ಮಾನ್ ಅವರು ಗೃಹ ಸಚಿವ ಅಮಿತ್ ಶಾ ಅವರ ಜತೆ ಒಪ್ಪಂದ ಮಾಡಿಕೊಂಡಿದ್ದಾರೆ. ಮಹಾರಾಷ್ಟ್ರದಲ್ಲಿ ಏಕನಾಥ್ ಶಿಂಧೆ ಮಾಡಿದಂತೆಯೇ ಚುನಾವಣೆ ನಂತರ ಕೇಜ್ರಿವಾಲ್‌ಗೆ ಕೈಕೊಟ್ಟು ಪ್ರತ್ಯೇಕ ಎಎಪಿ (ಪಂಜಾಬ್) ಸ್ಥಾಪಿಸಲಿದ್ದಾರೆ’ ಎಂದರು.
‘ದಿಲ್ಲಿಯಲ್ಲಿ ಆಪ್ ಮಾಡಿದ ಮದ್ಯದ ಹಗರಣ ರೀತಿ ಪಂಜಾಬಲ್ಲೂ ಮಾನ್ ಮದ್ಯ ಹಗರಣ ನಡೆಸಿದ್ದಾರೆ. ಹೀಗಾಗಿ ಅವರಿಗೆ ಬಂಧನದ ಭೀತಿ ಇದೆ. ಆ ಕಾರಣ ಬಿಜೆಪಿ ಜತೆ ಈಗ ರಾಜಿ ಮಾಡಿಕೊಂಡಿದ್ದು, ಬಂಧನದಿಂದ ರಕ್ಷಿಸಿಕೊಂಡಿದ್ದಾರೆ’ ಎಂದರು.ಅಲ್ಲದೆ, ‘ಮಾನ್ ಪಂಜಾಬ್‌ನಲ್ಲಿ ಕಾಂಗ್ರೆಸ್ ಜತೆ ಫ್ರೆಂಡ್ಲಿ ಫೈಟ್ ಮಾಡುತ್ತಿದ್ದು, ಹಲವು ಕ್ಷೇತ್ರಗಳಲ್ಲಿ ಡಮ್ಮಿ ಆಪ್ ಅಭ್ಯರ್ಥಿಗಳನ್ನು ಹಾಕಿದ್ದಾರೆ’ ಎಂದು ಬಾದಲ್ ಆರೋಪಿಸಿದರು.