ವಯನಾಡು ಕಾಂಗ್ರೆಸ್‌ ಅಭ್ಯರ್ಥಿಯಾಗಿ ರಾಹುಲ್‌ ನಾಮಪತ್ರ

| Published : Apr 04 2024, 01:04 AM IST / Updated: Apr 04 2024, 05:09 AM IST

ಸಾರಾಂಶ

ಸತತ 2ನೇ ಗೆಲುವಿನ ನಿರೀಕ್ಷೆಯಲ್ಲಿರುವ ರಾಹುಲ್‌ ಗಾಂಧಿ ಕೇರಳದ ವಯನಾಡು ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಬುಧವಾರ ನಾಮಪತ್ರ ಸಲ್ಲಿಸಿದರು

ವಯನಾಡು: ಸತತ 2ನೇ ಗೆಲುವಿನ ನಿರೀಕ್ಷೆಯಲ್ಲಿರುವ ರಾಹುಲ್‌ ಗಾಂಧಿ ಕೇರಳದ ವಯನಾಡು ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಬುಧವಾರ ನಾಮಪತ್ರ ಸಲ್ಲಿಸಿದರು. ಈ ವೇಳೆ ಸೋದರಿ ಪ್ರಿಯಾಂಕಾ ಗಾಂಧಿ, ಪಕ್ಷದ ಸಂಘಟನಾ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಸೇರಿ ಹಲವು ನಾಯಕರು ಉಪಸ್ಥಿತರಿದ್ದರು.

ನಾಮಪತ್ರ ಸಲ್ಲಿಕೆಗೂ ಮುನ್ನ ಕಲ್ಪೆಟ್ಟಾದಿಂದ ಸಿವಿಲ್‌ ಸ್ಟೇಷನ್‌ವರೆಗೂ ರಾಹುಲ್‌ ಗಾಂಧಿ ಭರ್ಜರಿ ರೋಡ್‌ ಶೋ ನಡೆಸಿದರು. ಈ ವೇಳೆ ಅವರೊಂದಿಗೆ ಸಾವಿರಾರು ಕಾಂಗ್ರೆಸ್‌ ಕಾರ್ಯಕರ್ತರು ಹೆಜ್ಜೆ ಹಾಕಿದರು. 2019ರಲ್ಲಿ ರಾಹುಲ್‌ ಗಾಂಧಿ 4 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಸಿಪಿಐನ ಪಿ.ಪಿ.ಸುನೀರ್ ವಿರುದ್ಧ ಗೆಲುವು ಸಾಧಿಸಿದ್ದರು.

ಈ ಬಾರಿ ರಾಹುಲ್‌ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್‌ ಮತ್ತು ಸಿಪಿಐನಿಂದ ಆ್ಯನ್ನಿ ರಾಜಾ ಕಣಕ್ಕಿಳಿದಿದ್ದು, ತ್ರಿಕೋನ ಸ್ಪರ್ಧೆ ಎದುರಾಗಿದೆ. ಏ.26ರಂದು ಕೇರಳದಲ್ಲಿ ಚುನಾವಣೆ ನಡೆಯಲಿದೆ.