ಕಾಂಗ್ರೆಸ್ ಗೆಲ್ಲಲಿದೆ ಎಂದು ಮಾಜಿ ಕೇಂದ್ರ ಸಚಿವ ಶಶಿ ತರೂರ್‌ ನೀಡಿದ ಹೇಳಿಕೆಗೆ ಕೇಂದ್ರ ಸಚಿವ ಹಾಗೂ ತಿರುವನಂತಪುರದ ಬಿಜೆಪಿ ಅಭ್ಯರ್ಥಿ ರಾಜೀವ್‌ ಚಂದ್ರಶೇಖರ್‌ ತಿರುಗೇಟು ನೀಡಿದ್ದಾರೆ.

ನವದೆಹಲಿ: ಕಾಂಗ್ರೆಸ್ ಗೆಲ್ಲಲಿದೆ ಎಂದು ಮಾಜಿ ಕೇಂದ್ರ ಸಚಿವ ಶಶಿ ತರೂರ್‌ ನೀಡಿದ ಹೇಳಿಕೆಗೆ ಕೇಂದ್ರ ಸಚಿವ ಹಾಗೂ ತಿರುವನಂತಪುರದ ಬಿಜೆಪಿ ಅಭ್ಯರ್ಥಿ ರಾಜೀವ್‌ ಚಂದ್ರಶೇಖರ್‌ ತಿರುಗೇಟು ನೀಡಿದ್ದಾರೆ.

ಸೋಮವಾರ ಸುದ್ದಿಸಂಸ್ಥೆ ಜತೆ ಮಾತನಾಡಿದ ಅವರು, ‘ಫಲಿತಾಂಶದ ನಂತರ ರಾಹುಲ್ ಗಾಂಧಿ ಜಿಮ್ ಆರಂಭಿಸಬೇಕು. ಶಶಿ ತರೂರ್ ಅವರು ಇಂಗ್ಲಿಷ್ ತರಬೇತಿ ಸಂಸ್ಥೆ ಆರಂಭಿಸಬೇಕು. ಕಾಂಗ್ರೆಸ್ ಪಕ್ಷವು ಭಾಷಾ ಪಾರಂಗತರು ಮತ್ತು ಬಹಳ ನಿರರ್ಗಳವಾಗಿ ಮಾತನಾಡುವ ಅನೇಕ ಜನರನ್ನು ಹೊಂದಿದೆ ಮತ್ತು ಈ ಚುನಾವಣೆಗಳು ಅವರನ್ನು ಹೊಸ ಉದ್ಯೋಗದತ್ತ ತೋರಿಸುತ್ತವೆ ಎಂದು ನಾನು ಭಾವಿಸುತ್ತೇನೆ’ ಎಂದು ವ್ಯಂಗ್ಯವಾಡಿದರು.

ಎಐಸಿಸಿ ಕಚೇರಿಯಲ್ಲಿ ಸಂಭ್ರಮಾಚರಣೆಗೆ ಸಿದ್ಧತೆ!

ನವದೆಹಲಿ: ಲೋಕಸಭೆ ಚುನಾವಣೆಯ ಎಕ್ಸಿಟ್‌ ಪೋಲ್‌ಗಳಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿ ಕಾಂಗ್ರೆಸ್‌ ಸೋಲಲಿದೆ ಎಂದು ಎಕ್ಸಿಟ್‌ ಪೋಲ್‌ಗಳು ಹೇಳಿದ್ದರೂ ಎಐಸಿಸಿ ಕಚೇರಿಯಲ್ಲಿ ಸೋಮವಾರ ಸಂಭ್ರಮಾಚರಣೆಗೆ ಸಿದ್ಧತೆ ನಡೆಸಲಾಗಿದೆ. ಕಚೇರಿಯಲ್ಲಿ ವೇದಿಕೆ, ಕುರ್ಚಿ ಗಳನ್ನು ಅಲಂಕರಿಸಿ ಸಿದ್ಧಪಡಿಸಲಾಗಿದೆ. ಈ ನಡುವೆ ಇಂಡಿಯಾ ಕೂಟದ ನಾಯಕರೂ ದಿಲ್ಲಿಯಲ್ಲಿ ಮಂಗಳವಾರ ಸಭೆ ಸೇರಿ ಮತ ಎಣಿಕೆ ನಂತರದ ಕಾರ್ಯ ತಂತ್ರಗಳ ಬಗ್ಗೆ ಚರ್ಚಿಸಲಿದ್ದಾರೆ. ‘ಎಕ್ಸಿಟ್‌ ಪೋಲ್‌ಗಳು ಸುಳ್ಳು ಹಾಗೂ ಇಂಡಿಯಾ ಕೂಟಕ್ಕೆ ಜಯ ಖಚಿತ’ ಎಂಬುದು ವಿಪಕ್ಷ ನಾಯಕರ ವಿಶ್ವಾಸವಾಗಿದೆ.