ಬಿಜೆಪಿ ಸೇರ್ಪಡೆಗೆ ರಾಜಣ್ಣ ಅರ್ಜಿ: ಬಾಲಕೃಷ್ಣ ‘ಬಾಂಬ್‌’

| Published : Sep 03 2025, 01:01 AM IST

ಸಾರಾಂಶ

ಮಾಜಿ ಸಚಿವ ಕೆ.ಎನ್.ರಾಜಣ್ಣ ಈಗಾಗಲೇ ಬಿಜೆಪಿ ಸೇರ್ಪಡೆಗೆ ಅರ್ಜಿ ಹಾಕಿದ್ದಾರೆ. ಅವರು ಹೋಗುವ ಮುನ್ನ ನಮ್ಮ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಗಡಿ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಎಚ್.ಸಿ.ಬಾಲಕೃಷ್ಣ ಆರೋಪಿಸಿದ್ದಾರೆ.

- ರಾಜಣ್ಣನ ಬ್ರೈನ್‌ ಮ್ಯಾಪಿಂಗ್‌ ಮಾಡಿಸಿ

- ಬಿಜೆಪಿ ಸೇರುವ ವಿಷಯ ಗೊತ್ತಾಗುತ್ತೆ

--

ಬಾಲಕೃಷ್ಣ ಹೇಳಿದ್ದೇನು?

- ಪದಚ್ಯುತ ಸಚಿವ ರಾಜಣ್ಣ ವಿಚಾರದಲ್ಲಿ ಕಾಂಗ್ರೆಸ್ಸಲ್ಲಿ ಒಡಕು ಸೃಷ್ಟಿ

- ರಾಜಣ್ಣ ಬಿಜೆಪಿ ಸೇರಲಿದ್ದಾರೆ ಎಂದ ಮಾಗಡಿ ಕಾಂಗ್ರೆಸ್ ಶಾಸಕ

- 1 ಕಾಲು ಬಿಜೆಪಿಯಲ್ಲಿ ಇಟ್ಟಿದ್ದಾರೆ, ನೂರಕ್ಕೆ ನೂರು ಸೇರ್ತಾರೆ

- ನಮ್ಮ ಸರ್ಕಾರ ಇಲ್ಲದೆ ಹೋಗಿದ್ದರೆ ಇಷ್ಟೊತ್ತಿಗೆ ಬಿಜೆಪಿ ಸೇರ್ತಿದ್ರು

- ಅವರು ಪಕ್ಷ ತೊರೆದರೆ ನಮ್ಮಲ್ಲಿ ಯಾವುದೇ ನಷ್ಟ ಇಲ್ಲ: ಬಾಲಕೃಷ್ಣ

=-

ಕನ್ನಡಪ್ರಭ ವಾರ್ತೆ ರಾಮನಗರ

ಮಾಜಿ ಸಚಿವ ಕೆ.ಎನ್.ರಾಜಣ್ಣ ಈಗಾಗಲೇ ಬಿಜೆಪಿ ಸೇರ್ಪಡೆಗೆ ಅರ್ಜಿ ಹಾಕಿದ್ದಾರೆ. ಅವರು ಹೋಗುವ ಮುನ್ನ ನಮ್ಮ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಗಡಿ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಎಚ್.ಸಿ.ಬಾಲಕೃಷ್ಣ ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಣ್ಣ ಅವರು ಬಿಜೆಪಿಗೆ ಹೋಗುತ್ತಿದ್ದಾರೋ ಇಲ್ಲವೋ ಅಂತ ಅವರ ಬ್ರೈನ್ ಮ್ಯಾಪಿಂಗ್ ಮಾಡಿಸಿದರೆ ಗೊತ್ತಾಗುತ್ತದೆ. ರಾಜಣ್ಣ ಅವರನ್ನು ಬಿಜೆಪಿ ನಾಯಕರೇ ಸ್ವಾಗತಿಸುತ್ತಿದ್ದಾರೆ. ಈಗಾಗಲೇ ಒಂದು ಕಾಲು ಬಿಜೆಪಿಯಲ್ಲಿ ಇಟ್ಟಿರುವ ಅವರು, ನೂರಕ್ಕೆ ನೂರು ಬಿಜೆಪಿ ಸೇರ್ಪಡೆ ಆಗುತ್ತಾರೆ. ನಮ್ಮ ಸರ್ಕಾರ ಇಲ್ಲದೆ ಹೋಗಿದ್ದರೆ ಇಷ್ಟೊತ್ತಿಗಾಗಲೇ ಅವರು ಬಿಜೆಪಿ ಸೇರ್ಪಡೆ ಆಗಿರುತ್ತಿದ್ದರು ಎಂದು ವ್ಯಂಗ್ಯವಾಡಿದರು.

ಬಿಜೆಪಿಯ ಕೇಂದ್ರ ಮತ್ತು ರಾಜ್ಯ ನಾಯಕರ ಜೊತೆ ಸತತ ಸಂಪರ್ಕದಲ್ಲಿರುವ ರಾಜಣ್ಣ, ಈಗಾಗಲೇ ಹಲವಾರು ಸುತ್ತು ಮಾತುಕತೆ ನಡೆಸಿದ್ದಾರೆ. ದೆಹಲಿಯಲ್ಲಿ ಸಮಾವೇಶ ಮಾಡುತ್ತಾರಂತೆ ಮಾಡಲಿ. ಈ ಹಿಂದೆ ಅವರೇ ನನಗೆ ಯಾವ ಪಕ್ಷವೂ ಅವಶ್ಯಕತೆ ಇಲ್ಲ ಎಂದಿದ್ದರು. ಅವರು ಪಕ್ಷ ತೊರೆಯುವುದರಿಂದ ನಮ್ಮಲ್ಲಿ ಯಾವುದೇ ವ್ಯತ್ಯಾಸ ಉಂಟಾಗುವುದಿಲ್ಲ ಎಂದು ತಿಳಿಸಿದರು.

ಕೆ.ಎನ್.ರಾಜಣ್ಣ ಅವರು ಸಚಿವರಾಗಿದ್ದಾಗ ಯಾವ ರೀತಿ ನಡೆದುಕೊಂಡರು ಎನ್ನುವುದು ಜಗಜ್ಜಾಹೀರು. ಸಚಿವ ಸ್ಥಾನದಿಂದ ವಜಾಗೊಂಡಿರುವುದು ಹೈಕಮಾಂಡ್ ವಿರುದ್ಧ ಅವರಾಡಿದ ಮಾತಿನಿಂದಲೇ ಹೊರತು ಅದರ ಹಿಂದೆ ಯಾವ ಷಡ್ಯಂತ್ರವೂ ಇಲ್ಲ ಎಂದು ಬಾಲಕೃಷ್ಣ ಸ್ಪಷ್ಟಪಡಿಸಿದರು.

ಡ್ರಾಮಾ ಕಂಪನಿಯ ಮಾಸ್ಟರ್‌ಗಳು:

ಎಸ್ಐಟಿ ತನಿಖೆ ಬಳಿಕ ಧರ್ಮಸ್ಥಳದಲ್ಲಿ ನಿರಾಳವಾದ ವಾತಾವರಣ ಇದೆ. ಧರ್ಮಾಧಿಕಾರಿಗಳಿಗೂ ನಿರಾಳತೆ ದೊರಕಿದೆ. ಬಿಜೆಪಿ-ಜೆಡಿಎಸ್ ನಾಯಕರು ನಾಟಕ ಆಡಲು ಧರ್ಮಸ್ಥಳಕ್ಕೆ ಹೋಗಿದ್ದಾರೆ. ಇವರೆಲ್ಲ ಡ್ರಾಮಾ ಕಂಪನಿಯ ಮಾಸ್ಟರ್‌ಗಳು ಎಂದು ಬಾಲಕೃಷ್ಣ ವ್ಯಂಗ್ಯವಾಡಿದರು.

ಧರ್ಮಸ್ಥಳ ಕ್ಷೇತ್ರದ ವಿರುದ್ಧ ನಡೆಯುತ್ತಿದ್ದ ಅಪಪ್ರಚಾರ ತಡೆಯಲೆಂದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಎಸ್ಐಟಿ ರಚನೆ ಮಾಡಿದ್ದರು. ಇದೀಗ ಎಸ್ಐಟಿ ತನಿಖೆ ಬಳಿಕ ಸತ್ಯ ಹೊರಬಂದಿದೆ. ಈ ಎಲ್ಲಾ ಕ್ರೆಡಿಟ್ ಕಾಂಗ್ರೆಸ್ ಸರ್ಕಾರಕ್ಕೆ ಹೋಗುತ್ತದೆ ಎಂಬ ಭಯದಿಂದ ಎಸ್ಐಟಿ ವರದಿ ಬರುವ ಮೊದಲೇ ಇವರು ಧರ್ಮಸ್ಥಳಕ್ಕೆ ಓಡಿ ಹೋಗಿದ್ದಾರೆ. ಒಬ್ಬರ ಮೇಲೆ ಒಬ್ಬರು ಬಿದ್ದು ಅಪ್ಪಟ ಭಕ್ತರೆಂದು ಎದೆ ಬಿಟ್ಟುಕೊಂಡು ಶ್ರೀರಾಮ, ಆಂಜನೇಯನನ್ನು ತೋರಿಸಲು ಪೈಪೋಟಿಗೆ ಇಳಿದಿದ್ದಾರೆ ಎಂದು ಟೀಕಿಸಿದರು.

ಎಸ್ಐಟಿ ರಚನೆಯಾದಾಗ ಬಿಜೆಪಿಯವರು ಸ್ವಾಗತ ಮಾಡಿದ್ದರು. ಇದೀಗ ವರದಿ ಬರುವ ಮುನ್ನವೇ ಎನ್ಐಎ ತನಿಖೆಗೆ ಒತ್ತಾಯ ಮಾಡುತ್ತಿದ್ದಾರೆ. ಇದೊಂದು ಪ್ರಕರಣ ಅಲ್ಲ. ಸಮಯ ಸಿಕ್ಕಾಗಲೆಲ್ಲಾ ಕಾಂಗ್ರೆಸ್ ಪಕ್ಷವನ್ನು ಹಿಂದೂ ವಿರೋಧಿ ಎಂದು ಬಿಂಬಿಸುತ್ತಿದ್ದಾರೆ. ನಾವೂ ಕೂಡ ಹಿಂದೂಗಳೇ, ಅದನ್ನು ಹೇಳಿಸಿಕೊಳ್ಳುವ ಅವಶ್ಯಕತೆ ಇಲ್ಲ. ನಾವು ಜಾತ್ಯತೀತ ತತ್ವವನ್ನು ಇಟ್ಟುಕೊಂಡು ಬದುಕುತ್ತಿದ್ದೇವೆ ಎಂದು ಹೇಳಿದರು.

ಸೌಜನ್ಯ ಪ್ರಕರಣದಲ್ಲೂ ಬಿಜೆಪಿ ಈಗ ರಾಜಕೀಯ ಮಾಡುತ್ತಿದೆ. ಸೌಜನ್ಯ ಕೊಲೆ ನಡೆದಾಗ ಬಿಜೆಪಿ ಅಧಿಕಾರದಲ್ಲಿತ್ತು. ಆಗ ಏಕೆ ಸೌಜನ್ಯಾ ಪೋಷಕರಿಗೆ ನ್ಯಾಯ ಕೊಡಿಸಲಿಲ್ಲ. ಈಗ ಎದೆ ಬಡಿದುಕೊಂಡು ಧರ್ಮಸ್ಥಳಕ್ಕೆ ಹೋಗಿ, ಸೌಜನ್ಯಾ ಪೋಷಕರನ್ನೂ ಭೇಟಿ ಮಾಡಿದ್ದಾರೆ. ಬಿಜೆಪಿ ನಾಯಕರು ಮಗುವನ್ನೂ ಚಿವುಟಿ, ತೊಟ್ಟಿಲನ್ನೂ ತೂಗುತ್ತಿದ್ದಾರೆ ಎಂದು ಬಾಲಕೃಷ್ಣ ವಾಗ್ದಾಳಿ ನಡೆಸಿದರು.

ಯತ್ನಾಳ್‌ನಿಂದ ಡಿಕೆಶಿ ಪಾಠ ಕಲಿಯಬೇಕಿಲ್ಲ:ಬಿಜೆಪಿಯು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಅವಕಾಶ ಮತ್ತು ಅಧಿಕಾರ ಎರಡನ್ನೂ ನೀಡಿದೆ. ಅದೇ ಪಕ್ಷದ ನಾಯಕರನ್ನು ವಾಚಾಮಗೋಚರ ನಿಂದಿಸುವ ಯತ್ನಾಳ್ ಅವರಿಗೆ ಪಕ್ಷ ನಿಷ್ಠೆ ಎಂಬುದಿಲ್ಲ. ಇದೀಗ ಅವರು ತಮ್ಮ ಬೇಳೆ ಬೇಯಿಸಿಕೊಳ್ಳಲು ನಮ್ಮ ನಾಯಕರಾದ ಡಿ.ಕೆ.ಶಿವಕುಮಾರ್ ವಿರುದ್ಧ ಕಪೋಲಕಲ್ಪಿತವಾಗಿ ಮಾತನಾಡುತ್ತಿದ್ದಾರೆ. ಅವರ ರೀತಿಯಲ್ಲೇ ಅವರಿಗೆ ತಿರುಗೇಟು ನೀಡಬಹುದು. ಆದರೆ, ನಾವು ನಾಲಿಗೆ ಕೆಡಿಸಿಕೊಳ್ಳುವುದಿಲ್ಲ ಎಂದು ಬಾಲಕೃಷ್ಣ ಹರಿಹಾಯ್ದರು.ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿರುವ ಡಿ.ಕೆ.ಶಿವಕುಮಾರ್ ಅವರು ಇಂದು ನಾಯಕರಾಗಿ ಬೆಳೆದಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ದೊರೆಯದಿದ್ದಾಗ ಸ್ವತಂತ್ರವಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಅಧಿಕಾರವೇ ಮುಖ್ಯ ಎಂದಿದ್ದರೆ ಅಂದು ಅಧಿಕಾರದಲ್ಲಿದ್ದ ಜನತಾದಳ ಸೇರಬಹುದಿತ್ತು. ಆದರೆ, ಕಾಂಗ್ರೆಸ್ ಪಕ್ಷ ಸೇರಿದ ಅವರು ಪಕ್ಷ ಸಂಘಟನೆ ಮಾಡಿದರು. ಯತ್ನಾಳ್ ಅವರಿಂದ ಡಿಕೆಶಿ ಪಾಠ ಕಲಿಯುವ ಅವಶ್ಯಕತೆ ಇಲ್ಲ ಎಂದರು.ಯತ್ನಾಳ್ ಅವರ ನಡವಳಿಕೆ ಯಾವ ರೀತಿ ಇದೆ ಎಂದು ಎಲ್ಲರಿಗೂ ಗೊತ್ತು. ಜನತಾ ದಳಕ್ಕೆ ಬಂದಿದ್ದ ಅವರು ಯಡಿಯೂರಪ್ಪ ಅವರನ್ನು ನಿಂದಿಸಿದ್ದರು. ಈಗ ಬಿಜೆಪಿಯಲ್ಲಿ ಪಕ್ಷದ ಶಿಸ್ತು ಉಲ್ಲಂಘಿಸಿ ವಜಾಗೊಂಡಿದ್ದಾರೆ. ಅವರಿಗೆ ಹೊಟ್ಟೆ ತುಂಬುವುದಾದರೆ ನಮ್ಮ ನಾಯಕರ ಬಗ್ಗೆ ಮಾತನಾಡಲಿ. ಅದರಿಂದ ನಮ್ಮ ನಾಯಕರ ರಾಜಕೀಯ ಜೀವನ ಬದಲಾಗದು ಎಂದು ಹೇಳಿದರು.