ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯದ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಸೋಮವಾರ ಚುನಾವಣಾ ವೇಳಾಪಟ್ಟಿ ಪ್ರಕಟಗೊಂಡಿದ್ದು, ಬರುವ ಫೆ.27ರಂದು ಮತದಾನ ನಡೆಯಲಿದೆ.
ಪ್ರಸ್ತುತ ರಾಜ್ಯದಿಂದ ರಾಜ್ಯಸಭೆಯ ಪ್ರತಿನಿಧಿಗಳಾಗಿರುವ ಬಿಜೆಪಿಯ ರಾಜೀವ್ ಚಂದ್ರಶೇಖರ್, ಕಾಂಗ್ರೆಸ್ಸಿನ ಜಿ.ಸಿ.ಚಂದ್ರಶೇಖರ್, ಡಾ.ಎಲ್.ಹನುಮಂತಯ್ಯ ಹಾಗೂ ಸೈಯದ್ ನಾಸಿರ್ ಹುಸೇನ್ ಅವರ ಅಧಿಕಾರಾವಧಿ ಏ.2ರಂದು ಕೊನೆಗೊಳ್ಳಲಿದ್ದು, ಇವರುಗಳಿಂದ ತೆರವಾಗಲಿರುವ ನಾಲ್ಕು ಸ್ಥಾನಗಳಿಗೆ ಈ ಚುನಾವಣೆ ನಡೆಯಲಿದೆ.
ಅಂದು ಬೆಳಗ್ಗೆ 9ರಿಂದ ಸಂಜೆ 4ರವರೆಗೆ ಮತದಾನ ಮಾಡಲಾಗುವುದು. ಮತದಾನ ಪ್ರಕ್ರಿಯೆ ಮುಗಿದ ಬಳಿಕ ಅದೇ ದಿನ ಸಂಜೆ 5 ಗಂಟೆಯಿಂದ ಮತ ಎಣಿಕೆ ನಡೆಯಲಿದೆ.
ಯಾವುದೇ ಅಡ್ಡಮತದಾನ ಅಥವಾ ರಾಜಕೀಯ ತಂತ್ರಗಾರಿಕೆ ನಡೆಯದೇ ಇದ್ದರೆ ಈ ನಾಲ್ಕು ಸ್ಥಾನಗಳ ಪೈಕಿ ವಿಧಾನಸಭೆಯ ಸಂಖ್ಯಾಬಲದ ಆಧಾರದ ಮೇಲೆ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಮೂರು ಸ್ಥಾನ ಮತ್ತು ಪ್ರತಿಪಕ್ಷ ಬಿಜೆಪಿಗೆ ಒಂದು ಸ್ಥಾನ ಲಭಿಸಲಿದೆ.
ನಾಲ್ಕು ಸ್ಥಾನಗಳಿಗೆ ನಾಲ್ಕು ಅಭ್ಯರ್ಥಿಗಳು ಕಣಕ್ಕಿಳಿದಲ್ಲಿ ಅವಿರೋಧವಾಗಿಯೇ ಚುನಾವಣಾ ಪ್ರಕ್ರಿಯೆ ಸುಗಮವಾಗಿ ಮುಗಿದು ಹೋಗುತ್ತದೆ.
ಆದರೆ, ಸದ್ಯದ ರಾಜಕೀಯ ಸನ್ನಿವೇಶ ಗಮನಿಸಿದರೆ ಐದನೇ ಅಭ್ಯರ್ಥಿ ಕಣಕ್ಕಿಳಿಯುವ ಸಂಭವ ಕಂಡು ಬರುತ್ತಿದೆ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಾಗಿರುವುದರಿಂದ ಅಷ್ಟು ಸುಲಭವಾಗಿ ಬಿಡುವ ಸಾಧ್ಯತೆ ಇಲ್ಲ ಎನ್ನಲಾಗುತ್ತಿದೆ.
ಒಂದು ಸ್ಥಾನ ಗೆಲ್ಲಲು 45 ಶಾಸಕರ ಮತಗಳ ಅಗತ್ಯವಿದೆ. ಮೇಲ್ನೋಟಕ್ಕೆ ಕಾಂಗ್ರೆಸ್ 135 ಶಾಸಕರ ಬಲ ಹೊಂದಿರುವುದರಿಂದ ಮೂರು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಬಹುದಾಗಿದೆ.
ಜತೆಗೆ ಪಕ್ಷೇತರ ಶಾಸಕರಾದ ಲತಾ ಮಲ್ಲಿಕಾರ್ಜುನ್, ಕೆ.ಎಚ್.ಪುಟ್ಟಸ್ವಾಮಿಗೌಡ ಹಾಗೂ ಕರ್ನಾಟಕ ಸರ್ವೋದಯ ಪಕ್ಷದ ದರ್ಶನ್ ಪುಟ್ಟಣ್ಣಯ್ಯ ಅವರು ಕಾಂಗ್ರೆಸ್ ಪಕ್ಷವನ್ನೇ ಬೆಂಬಲಿಸುವ ಸಂಭವವಿದೆ.
ಇನ್ನು ಬಿಜೆಪಿ ಮತ್ತು ಜೆಡಿಎಸ್ ಸಂಖ್ಯಾಬಲ ಒಟ್ಟುಗೂಡಿದರೆ 85 ಆಗಲಿದೆ. ಒಂದು ಸ್ಥಾನಕ್ಕೆ 45 ಅಥವಾ ಮುನ್ನೆಚ್ಚರಿಕೆ ಕ್ರಮವಾಗಿ 46 ಮತಗಳನ್ನು ಹಂಚಿದರೂ ಬಾಕಿ 39 ಸ್ಥಾನಗಳು ಉಳಿಯಲಿವೆ.
ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷದ ಗಾಲಿ ಜನಾರ್ದನ ರೆಡ್ಡಿ ಅಗತ್ಯ ಬಿದ್ದರೆ ಬಿಜೆಪಿ-ಜೆಡಿಎಸ್ ಪರ ನಿಲ್ಲುವ ಸಾಧ್ಯತೆಯಿದೆ. ಹೀಗಾಗಿ, ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟ ತನ್ನ ಎರಡನೇ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ಮಾಡುವ ನಿರೀಕ್ಷೆಯಿದೆ.
ಗೆಲ್ಲಲು 45 ಮತ ಬೇಕು: ಚುನಾವಣೆಯಲ್ಲಿ ನಾಲ್ಕು ಅಭ್ಯರ್ಥಿಗಳು ಮಾತ್ರ ಕಣದಲ್ಲಿದ್ದರೆ ಅವಿರೋಧವಾಗಿ ನಾಲ್ವರು ಗೆಲುವು ಸಾಧಿಸಬಹುದು. ಒಂದು ವೇಳೆ ನಾಲ್ಕು ಅಭ್ಯರ್ಥಿಗಳಿಗಿಂತ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದರೆ ಚುನಾವಣೆ ನಡೆಸಬೇಕಾಗುತ್ತದೆ.
ಅಂತಹ ಸಂದರ್ಭದಲ್ಲಿ ಒಂದು ಮತದ ಮೌಲ್ಯ 100 ಎಂದು ಪರಿಗಣಿಸಲಾಗುತ್ತದೆ. 224 ಶಾಸಕರ ಮತದ ಮೌಲ್ಯವು 22,400 ಆಗಲಿದೆ. ಇದನ್ನು ಐದರಿಂದ ವಿಭಾಗಿಸಿದಾಗ 4480 ಮತದ ಮೌಲ್ಯವಾಗಲಿದೆ.
ಚುನಾವಣಾ ಆಯೋಗದ ಪ್ರಕಾರ ಇದಕ್ಕೆ ಒಂದನ್ನು ಸೇರಿಸುವುದರಿಂದ 4481 ಮತದ ಮೌಲ್ಯವಾಗಲಿದೆ. 4481 ಮತಗಳ ಮೌಲ್ಯವನ್ನು ಅಭ್ಯರ್ಥಿ ಪಡೆದುಕೊಳ್ಳಬೇಕು ಅಥವಾ ಮೊದಲ ಪ್ರಾಶಸ್ತ್ಯ ಮತವಾಗಿ 45 ಮತಗಳನ್ನು ಪಡೆದುಕೊಳ್ಳಬೇಕು ಎಂದು ಹೇಳಲಾಗಿದೆ.
ವಿಧಾನಸಭೆಯ ಸಂಖ್ಯಾಬಲ:
ಕಾಂಗ್ರೆಸ್- 135 (ಸ್ಪೀಕರ್ ಸೇರಿ)
ಬಿಜೆಪಿ- 66
ಜೆಡಿಎಸ್- 19
ಕಲ್ಯಾಣ ರಾಜ್ಯ ಪ್ರಗತಿ ಪಕ್ಷ- 01
ಸರ್ವೋದಯ ಕರ್ನಾಟಕ ಪಕ್ಷ- 01
ಪಕ್ಷೇತರರು- 02
ವೇಳಾಪಟ್ಟಿ
ಚುನಾವಣಾ ಅಧಿಸೂಚನೆ ಪ್ರಕಟ- ಫೆ.8
ನಾಮಪತ್ರ ಸಲ್ಲಿಸಲು ಕೊನೆಯ ದಿನ- ಫೆ.15
ನಾಮಪತ್ರಗಳ ಪರಿಶೀಲನೆ- ಫೆ.16
ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನ- ಫೆ.20
ಮತದಾನ ಮತ್ತು ಫಲಿತಾಂಶ ಪ್ರಕಟ- ಫೆ.27